ಬಾಳೆಹೊನ್ನೂರು ; ಬಹು ಜನ್ಮಗಳ ಪುಣ್ಯ ಫಲದಿಂದ ಮಾನವ ಜೀವನ ದೊರೆತಿದೆ. ಗುರುವಿನ ಕಾರುಣ್ಯ ಎಲ್ಲರಿಗೂ ಬೇಕು. ಗುರು ಪೀಠಗಳ ದರ್ಶನದಿಂದ ಜೀವನ ಪಾವನಗೊಳ್ಳುವುದೆಂದು ಮೈಸೂರು ರಾಜ ಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜೇಂದ್ರ ಒಡೆಯರ್ ಅಭಿಪ್ರಾಯಪಟ್ಟರು.
ಅವರು ಗುರುವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಜರುಗಿದ ಲಿಂ. ಶ್ರೀಮದ್ ರಂಭಾಪುರಿ ಶಿವಾನಂದ ಜಗದ್ಗುರುಗಳ ಪೀಠಾರೋಹಣ ಶತಮಾನೋತ್ಸವ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.

ಮನುಷ್ಯ ಜೀವನದಲ್ಲಿ ಸಾಧಿಸಿದ್ದು ಅಲ್ಪ. ಸಾಧಿಸಬೇಕಾದದ್ದು ಬಹಳಷ್ಟಿದೆ. ದೇವರು ಧರ್ಮ ಮತ್ತು ಗುರುವಿನಲ್ಲಿ ನಂಬಿಕೆ ಶ್ರದ್ಧೆ ಇರಬೇಕಾಗುತ್ತದೆ. ಸುಖ ಶಾಂತಿ ಬದುಕಿಗೆ ಇವೆಲ್ಲವುಗಳ ಅವಶ್ಯಕತೆ ಬಹಳಷ್ಟಿದೆ. ಶ್ರೀ ರಂಭಾಪುರಿ ಪೀಠಕ್ಕೂ ಮತ್ತು ಮೈಸೂರು ರಾಜ ಮನೆತನಕ್ಕೂ ಪೂರ್ವದಿಂದಲೂ ನಿಕಟ ಸಂಬಂಧವಿರುವ ಇತಿಹಾಸವನ್ನು ಕಾಣುತ್ತೇವೆ. ಶ್ರೀ ಚಾಮರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಜಯಚಾಮರಾಜ ಒಡೆಯರ್ ಈ ಕ್ಷೇತ್ರಕ್ಕೆ ಆಗಮಿಸಿ ಆಶೀರ್ವಾದ ಪಡೆದ ಸಂಗತಿ ತಿಳಿದು ನಮಗೆ ಬಹಳ ಹರುಷವಾಗಿದೆ. ಲಿಂ. ಶ್ರೀ ರಂಭಾಪುರಿ ಶಿವಾನಂದ ಜಗದ್ಗುರುಗಳು ಶ್ರೀ ರಂಭಾಪುರಿ ಪೀಠದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದವರು. ಅಂಥ ಪರಮ ಪೂಜ್ಯರು ಮೈಸೂರು ಸಂಸ್ಥಾನಕ್ಕೆ ದಯಮಾಡಿಸಿ ಆಶೀರ್ವದಿಸಿದ ಆ ಘಳಿಗೆ ಅಮೂಲ್ಯವಾದದ್ದು. ಈ ಸಂಬಂಧ ನಿರಂತರವಾಗಿರಲಿ ಎಂದರು.

2026ನೇ ಸಾಲಿನ ದಿನದರ್ಶಿಕೆ ಬಿಡುಗಡೆ ಮಾಡಿದ ಕೇಂದ್ರದ ರೈಲ್ವೆ ಮತ್ತು ಜಲಶಕ್ತಿ ಖಾತೆಯ ಸಚಿವ ವಿ.ಸೋಮಣ್ಣ ಮಾತನಾಡಿ, ವೀರಶೈವ ಧರ್ಮದ ಇತಿಹಾಸದಲ್ಲಿ ಅವಿಸ್ಮರಣೀಯವಾದ ದಿನ ಇಂದು. ಭೂ ಲೋಕದ ಸ್ವರ್ಗದಂತಿರುವ ಶ್ರೀ ರಂಭಾಪುರಿ ಪೀಠದ ಪರಿಸರದಲ್ಲಿ ಲಿಂ. ಶ್ರೀ ರಂಭಾಪುರಿ ಶಿವಾನಂದ ಜಗದ್ಗುರುಗಳ ಪೀಠಾರೋಹಣದ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿರುವುದು ನನಗೆ ಬಹಳಷ್ಟು ಸಂತಸ ತಂದಿದೆ. ಲಿಂ. ಶ್ರೀ ಶಿವಾನಂದ ಜಗದ್ಗುರುಗಳು ವೀರಶೈವ ಧರ್ಮ ಸಂಸ್ಕೃತಿಯ ಸಂವರ್ಧನೆಗೆ ಬಹಳಷ್ಟು ಶ್ರಮಿಸಿರುವುದನ್ನು ಕಾಣುತ್ತೇವೆ. ಪಂಚಪೀಠಗಳಲ್ಲಿ ಅಗ್ರ ಪೀಠವಾದ ಶ್ರೀ ರಂಭಾಪುರಿ ಪೀಠ ಸಾರಿರುವ ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶ ನಮ್ಮೆಲ್ಲರ ಸಾಮರಸ್ಯ ಬದುಕಿಗೆ ಸಾಕ್ಷಿಯಾಗಿದೆ. ಪೀಠಾರೋಹಣ ಶತಮಾನೋತ್ಸವ ಸಂಭ್ರಮದಿಂದ ಆಚರಿಸುತ್ತಿರುವುದು ಭಕ್ತ ಜನ ಸಮುದಾಯದ ಸೌಭಾಗ್ಯವಾಗಿದೆ. ಶ್ರೀ ಪೀಠದ ಪರಿಸರದಲ್ಲಿ 51 ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯ ಶಿಲಾ ಮಂಗಲ ಮೂರ್ತಿ ಪ್ರತಿಷ್ಠಾಪನಾ ಕಾರ್ಯ ಮಾಡಲು ಇಂದಿನ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳವರು ಕೈಗೊಂಡ ನಿರ್ಧಾರ ಶ್ರೀ ಪೀಠದ ಕೀರ್ತಿಗೆ ಮತ್ತೊಂದು ಹೊನ್ನ ಕಳಸ ಇಟ್ಟಂತಾಗಿದೆ. ಈ ಮಹತ್ಕಾರ್ಯಕ್ಕೆ ನಮ್ಮ ನಿಮ್ಮೆಲ್ಲರ ಸಹಕಾರ ಇರಲೆಂದ ಅವರು ಒಂದೇ ವೇದಿಕೆಯಲ್ಲಿ ಎಲ್ಲ ಜಗದ್ಗುರುಗಳನ್ನು ಕಂಡು ಜನ್ಮ ಧನ್ಯವಾಯಿತು. ಇತ್ತೀಚೆಗೆ ದಾವಣಗೆರೆಯಲ್ಲಿ ಜರುಗಿದ ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳು ಅತ್ಯಂತ ಮಹತ್ವದ್ದಾಗಿವೆ.
ಚಿಕ್ಕಮಗಳೂರು-ಬಾಳೆಹೊನ್ನೂರು-ಶೃಂಗೇರಿ ರಸ್ತೆ ಮಾರ್ಗವನ್ನು ಶೀಘ್ರದಲ್ಲಿಯೇ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರವರ್ತಿಸಲಾಗುವುದು. ಅದೇ ರೀತಿ ಈ ಮಾರ್ಗದಲ್ಲಿ ರೈಲು ಸಂಚಾರ ಮಾಡುವ ದಿಶೆಯಲ್ಲಿಯೂ ಕ್ರಮ ಜರುಗಿಸಲಾಗುವುದೆಂದರು.

ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರು, ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು, ಸುಳ್ಳ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ಬಂಕಾಪುರ ರೇವಣಸಿದ್ಧ ಶಿವಾಚಾರ್ಯರು, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರನ್ನು ಮೊದಲ್ಗೊಂಡು ಸುಮಾರು 50ಕ್ಕೂ ಹೆಚ್ಚು ಮಠಾಧೀಶರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ಇವರು ವೀರಶೈವ ಧರ್ಮದ ಕೀರ್ತಿ ಕಳಸ ಕೃತಿ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಶ್ರೀ ರಂಭಾಪುರಿ ಶಿವಾನಂದ ಜಗದ್ಗುರುಗಳ ಜೀವನ ದರ್ಶನ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಸಚಿವ ಡಿ.ಎನ್.ಜೀವರಾಜ್, ಅ.ಭಾ.ವೀ.ಲಿಂ. ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ಎಂ.ಲೋಕೇಶ್, ಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾಸಂಸ್ಥೆ ಅಧ್ಯಕ್ಷ ಯು.ಎಂ.ಬಸವರಾಜ ಮತ್ತು ಆಡಳಿತ ಮಂಡಳಿಯ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಗಿಣಿವಾರದ ಕೊಡಚಾದ್ರಿ ವಿದ್ಯಾ ಸಂಸ್ಥೆಯ ಮಕ್ಕಳು ಭರತ ನಾಟ್ಯ ಪ್ರದರ್ಶನ ನೀಡಿದರು.

ಪ್ರಾತಃಕಾಲ ಶ್ರೀ ಪೀಠದ ಎಲ್ಲ ದೈವಗಳಿಗೆ ಮತ್ತು ಲಿಂ.ಶ್ರೀ ಶಿವಾನಂದ ಜಗದ್ಗುರುಗಳವರ ಗದ್ದುಗೆಗೆ ರುದ್ರಾಭಿಷೇಕ ವಿಶೇಷ ಪೂಜೆ- ಹೂವು ಅಲಂಕಾರದೊಂದಿಗೆ ಮಂಗಲ ಜರುಗಿತು. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಜಗದ್ಗುರುಗಳವರ ದರ್ಶನ ಪಡೆದರು. ನಂತರ ಅನ್ನ ದಾಸೋಹ ಜರುಗಿತು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





