N.R.PURA ; ತನ್ನ ಬಿಟ್ಟು ಪತಿಯ ಜತೆ ತೆರಳಿದ್ದಕ್ಕೆ ಮಕ್ಕಳ ಎದುರಲ್ಲೇ ಮಹಿಳೆಯ ಪ್ರಿಯಕರ ಹತ್ಯೆಗೈದಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕಿಚ್ಚಬ್ಬಿ ಗ್ರಾಮದಲ್ಲಿ ನಡೆದಿತ್ತು. ಈಗ ಈ ಘಟನೆಗೆ ಸಂಬಂಧಿಸಿ ಹತ್ಯೆಗೈದ ಆರೋಪಿಯನ್ನು ಘಟನೆ ನಡೆದು 5 ಗಂಟೆಯೊಳಗೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಾಕುವಿನಿಂದ ಇರಿದು ಹತ್ಯೆಗೈದಿದ್ದ ತೃಪ್ತಿ (25)ಯ ಶವವನ್ನು ಪ್ರಿಯಕರ ಚಿರಂಜೀವಿ ಕೃಷಿ ಹೊಂಡಕ್ಕೆ ಎಸೆದು ಪರಾರಿಯಾಗಿದ್ದ. ಆರೋಪಿ ಪತ್ತೆಗಾಗಿ ಹುಡುಕಾಟ ನಡೆಸಿದ ಬಾಳೆಹೊನ್ನೂರು ಪೊಲೀಸರು ಖಚಿತ ಮಾಹಿತಿ ಮೇರೆಗೆ ಪರಿಶೀಲನೆ ನಡೆಸಿದಾಗ ಆರೋಪಿ ಚಿರಂಜೀವಿ ಕಾಡಿನೊಳಗೆ ಅವಿತಿರುವ ಮಾಹಿತಿ ಆಧಾರದಲ್ಲಿ ಘಟನೆ ನಡೆದ ಸ್ಥಳದಿಂದ 6 ಕಿ.ಮೀ. ದೂರದಲ್ಲಿನ ಬಾಳೆಹೊನ್ನೂರಿನ ಗಡಿಗೇಶ್ವರ ಬಳಿ ಆರೋಪಿ ಚಿರಂಜೀವಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ :
ತೃಪ್ತಿ ಮತ್ತು ಚಿರಂಜೀವಿ ಫೇಸ್‍ಬುಕ್ ಮೂಲಕ ಪರಿಚಯವಾಗಿ ಬಳಿಕ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಒಂದು ತಿಂಗಳ ಹಿಂದೆ ಪತಿ ರಾಜು ಬಿಟ್ಟು ಪ್ರಿಯಕರನ ಜೊತೆ ತೃಪ್ತಿ ನಾಪತ್ತೆಯಾಗಿದ್ದರು. ಈ ಬಗ್ಗೆ ಬಾಳೆಹೊನ್ನೂರು ಠಾಣೆಯಲ್ಲಿ ನಾಪತ್ತೆ ಪ್ರಕರಣ ಕೂಡ ದಾಖಲಾಗಿತ್ತು. ವಿಜಯಪುರದಲ್ಲಿ ತಲೆಮರೆಸಿಕೊಂಡಿದ್ದ ತೃಪ್ತಿ ಮತ್ತು ಪ್ರಿಯಕರ ಚಿರಂಜೀವಿಯ ಪೊಲೀಸರು ಹುಡುಕಿ ಕರೆತಂದಿದ್ದರು. ಪೋಷಕರ ಸಂಧಾನದ ಬಳಿಕ ಪತಿ ರಾಜುವಿನ ಜೊತೆ ತೃಪ್ತಿ ತೆರಳಿದ್ದಾರೆ. ಇದರಿಂದ ಕುಪಿತಗೊಂಡ ಚಿರಂಜೀವಿ ಶನಿವಾರ ತೃಪ್ತಿ ಪತಿ ಮನೆಯಲ್ಲಿ ಇಲ್ಲದಿರುವುದನ್ನು ಖಾತ್ರಿಪಡಿಸಿಕೊಂಡು ಮಾತನಾಡಿಸುವ ನೆಪದಲ್ಲಿ ಕಿಚ್ಚಬ್ಬಿ ಗ್ರಾಮದಲ್ಲಿರುವ ತೃಪ್ತಿ ಮನೆಗೆ ಬಂದಿದ್ದ. ಈ ವೇಳೆ ಮಕ್ಕಳ ಎದುರಲ್ಲೇ ಆಕೆಗೆ ಚಾಕುವಿನಿಂದ ತಿವಿದಿದ್ದಾನೆ. ಚಾಕು ಇರಿತಕ್ಕೊಳಗಾದ ತೃಪ್ತಿ ರಕ್ತದ ಮಡುವಿನಲ್ಲಿ ಒದ್ದಾಡುತ್ತಿರುವಂತೆಯೇ ಮನೆ ಬಳಿ ಇದ್ದ ಕೆರೆಗೆ ತಳ್ಳಿ ಸ್ಥಳದಿಂದ ಪರಾರಿಯಾಗಿದ್ದನು ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.