ಹೊಸನಗರ ; 2019ನೇ ಸಾಲಿನಲ್ಲಿ ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ಹಾಲು-ಬ್ರೆಡ್ ಸರಬರಾಜು ಮಾಡಿದ್ದ ಟೆಂಡರ್ ದಾರನಿಗೆ ಆರೋಗ್ಯ ರಕ್ಷಣಾ ಸಮಿತಿ ಸದಸ್ಯರ ಗಮನಕ್ಕೆ ಬಾರದೆ ಇತ್ತೀಚೆಗೆ 3 ಲಕ್ಷ ರೂ. ಮೌಲ್ಯದ ಚೆಕ್ ಅನ್ನು ಅಕ್ರಮವಾಗಿ ವಿತರಿಸಿರುವುದನ್ನು ಶಾಸಕ ಗೋಪಾಲಕೃಷ್ಣ ಬೇಳೂರು ತೀವ್ರವಾಗಿ ಖಂಡಿಸಿ, ಸ್ವತಃ ಸಮಿತಿ ಅಧ್ಯಕ್ಷನಾದ ನನ್ನ ಗಮನಕ್ಕೆ ತಾರದೇ ಆಸ್ಪತ್ರೆಯ ಮೇಲ್ವಿಚಾರಕ ಮಹಾಬಲೇಶ್ವರ ಜೋಯಿಸ್ ಏಕಾಏಕಿ ಚೆಕ್ ವಿತರಿಸಿದ ಕ್ರಮವನ್ನು ಖಂಡಿಸಿ, ಮಹಾಬಲೇಶ್ವರ ಜೋಯಿಸ್ ಅವರನ್ನು ಕೂಡಲೇ ಕರ್ತವ್ಯದಿಂದ ಅಮಾನತುಗೊಳಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದರು.
‘ಗುತ್ತಿಗೆದಾರ ಏನ್ ಮಹಾಬಲೇಶ್ವರ ಜೋಯಿಸ್ನ ಮಾವನ..?! ಆರೋಗ್ಯ ರಕ್ಷಣಾ ಸಮಿತಿ ಗಮನಕ್ಕೆ ತಾರದೆ ಏಕೆ ಐದಾರು ವರ್ಷಗಳ ಹಿಂದಿನ ಚೆಕ್ ನೀಡಿದ್ದು? ಖಾತೆಯಲಿ ಹಣ ಇದೆ ಎಂತಾದರೆ, ಬೇಕಾಬಿಟ್ಟಿ ಹಣ ನೀಡೋದ? ನನ್ನ ಗಮನಕ್ಕೆ ತರಬೇಕು ಅನ್ನೋ ಕನಿಷ್ಟ ಜ್ಞಾನ ಸಹ ನಿಮಗೆ ಇಲ್ವ..? ಸರಿಯಾಗಿ ಆಡಳಿತ ನಿರ್ವಹಣೆ ಸಾಧ್ಯವಾಗದಿದ್ದರೆ ಜಾಗ ಖಾಲಿ ಮಾಡಿ… ಸುಮ್ನೆ ಯಾಕೆ ಜನರಿಗೆ ತೊಂದರೆ ಕೊಡ್ತಿರಾ?. ನಾನು ಸಿಬ್ಬಂದಿಗಳ ಇಂಥ ನಡವಳಿಕೆಯನ್ನು ಎಂದೂ ಸಹಿಸಲ್ಲ. ಕೂಡಲೇ ಜೋಯಿಸ್ ಅವರಿಗೆ ಶೋಕಾಸ್ ನೋಟೀಸ್ ನೀಡಿ’ ಎಂಬ ಎಚ್ಚರಿಕೆಯನ್ನು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಗುರುಮೂರ್ತಿ ಅವರಿಗೆ ನೀಡಿದರು.
ಶುಕ್ರವಾರ ಆಸ್ಪತ್ರೆಯ ಆವರಣದಲ್ಲಿ ನಡೆದ ಆರೋಗ್ಯ ರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಶಾಸಕ ಬೇಳೂರು ಮಾತನಾಡಿದರು.
ಸಮಿತಿ ಸದಸ್ಯರಾದ ಸಿಂಥಿಯಾ ಸೆರಾವೋ, ವಿನಯ ಕುಮಾರ್, ಇಕ್ಬಾಲ್, ಚಂದ್ರಕಲಾ, ಗೋಪಿನಾಥ್ ಸೇರಿದಂತೆ ಹಲವರು ಹಾಜರಿದ್ದರು.