ಸಂಸದ ಬಿವೈಆರ್ ವಿರುದ್ಧ ಕಿಡಿಕಾರಿದ ಶಾಸಕ ಬೇಳೂರು ಹೇಳಿಕೆಗೆ ಖಂಡನೆ

Written by malnadtimes.com

Published on:

ಹೊಸನಗರ ; ಇತ್ತೀಚೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ವಿರುದ್ದ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ವಿನಃಕಾರಣ ಕಿಡಿಕಾರುವುದಕ್ಕೆ ರಾಜ್ಯ ಎಂಸಿಎ ಮಾಜಿ ನಿರ್ದೇಶಕ ಹೆಚ್.ಆರ್. ತೀರ್ಥೇಶ್ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಅವರು ಸೋಮವಾರ ಪತ್ರಿಕಾ ಹೇಳಿಕೆ ನೀಡಿ, ಅಭಿವೃದ್ದಿ ಕುರಿತಂತೆ ದೇಶದ ಎರಡನೇ ಹಾಗೂ ರಾಜ್ಯದ ಮೊದಲ ಸ್ಥಾನ ಸಂಸದ ಬಿವೈಆರ್ ಅವರಿಗೆ ಸಲ್ಲುತ್ತದೆ. ಜಿಲ್ಲೆಗೆ ಇವರ ಕೊಡುಗೆ ಅಪಾರವಾಗಿದ್ದು, ಶರಾವತಿ ಸಂತ್ರಸ್ತರ ವಿಷಯ ಕುರಿತು ಸಂಸತ್ತಿನ ಸಭೆಯಲ್ಲಿ ಈಗಾಗಲೇ ಅನೇಕ ಬಾರಿ ವಿಷಯ ಪ್ರಸ್ತಾಪಿಸಿದ್ದು, ಸಂತ್ರಸ್ತರಿಗೆ ಸೂಕ್ತ ಹಾಗೂ ಶಾಶ್ವತ ಪರಿಹಾರ ಒದಗಿಸುವಂತೆ ಕೇಂದ್ರ ಸರ್ಕಾರವನ್ನು ಅವರು ಒತ್ತಾಯಿಸಿದ್ದಾರೆ. ಕೇಂದ್ರ ಅರಣ್ಯ, ಕಂದಾಯ ಸಚಿವರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಈಗಾಗಲೇ ಈ ಕುರಿತು ಅಗತ್ಯ ಚರ್ಚೆ ನಡೆದಿದೆ. ಜಿಲ್ಲೆಯ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು ಸೇರಿದಂತೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ವಿವಿಧ ಮಹತ್ವದ ಸಭೆಗಳು ಸಹ ನಡೆದಿವೆ. ಕೇಂದ್ರದ ಬಿಜೆಪಿ ಸರ್ಕಾರ ಶರಾವತಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಲು ಇಚ್ಛಾಶಕ್ತಿ ತೋರಿದ ಬೆನ್ನಲ್ಲೆ ಕಾನೂನಾತ್ಮಕ ಹೋರಾಟಕ್ಕೆ ಮುಂದಾದ ಫಲವಾಗಿ ದೇಶದ ಸವೋಚ್ಛ ನ್ಯಾಯಾಲಯವೂ ರಾಜ್ಯ ಸರ್ಕಾರಕ್ಕೆ ಅರಣ್ಯ ಹಾಗು ಕಂದಾಯ ಇಲಾಖೆಗಳ ಜಂಟಿ ಸಮೀಪಕ್ಷೆ ನಡೆಸಿ ವರದಿ ನೀಡುವಂತೆ ಆದೇಶಿಸಿದೆ.

ಈ ಕಾರ್ಯ ಜಿಲ್ಲೆಯಲ್ಲಿ ಈಗಾಗಲೇ ಆರಂಭಗೊಂಡಿದ್ದು, ಸಮೀಕ್ಷೆಯಲ್ಲಿ ಕೆಲವು ಲೋಪದೋಷಗಳು ಕಂಡು ಬಂದಿದೆ ಎಂದು ಸಂತ್ರಸ್ತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಈ ಕಾರಣಕ್ಕೆ ಸಮೀಕ್ಷೆಯ ಸಾಧಕ-ಬಾಧಕ ಕುರಿತು ಸುದೀರ್ಘ ಚರ್ಚೆ ನಡೆಸಿ ಅನ್ಯಾಯಕ್ಕೊಳಗಾದ ರೈತರಿಗೆ ಸೂಕ್ತ ನ್ಯಾಯ ಒದಗಿಸುವಂತೆ ಕಾರ್ಯ ನಿರ್ವಹಿಸಲು ಅಧಿಕಾರಿಗಳಿಗೆ ಸಂಸದ ಬಿವೈಆರ್ ಸ್ಪಷ್ಟ ಸೂಚನೆ ನೀಡಿದ್ದಾರೆ. ಆದರೂ ಶಾಸಕ ಗೋಪಾಲಕೃಷ್ಣ ಬೇಳೂರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರು ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಶರಾವತಿ ಸಂತ್ರಸ್ತರನ್ನು ಕುರಿತು ಇರುವ ಕಾಳಜಿಯನ್ನು ರಾಜಕೀಯವಾಗಿ ತಿರುಚಿ, ಸಂಸದ ಬಿವೈಆರ್ ಮೇಲೆ ವಿನಾಃಕಾರಣ ಇಲ್ಲಸಲ್ಲದ ಆರೋಪ ಮಾಡುತ್ತ, ಶರಾವತಿ ಸಂತ್ರಸ್ತ ವಿಷಯಕ್ಕೆ ರಾಜಕೀಯ ಬಣ್ಣ ಬಳಿಯಲು ಯತ್ನಿಸುತ್ತಿರುವುದು ಹಾಗೂ ಸಂಪೂರ್ಣ ಕಾಂಗ್ರೆಸ್ ಮಯ ಮಾಡುತ್ತಿರುವುದನ್ನು ತೀರ್ಥೇಶ್ ತೀವ್ರವಾಗಿ ಖಂಡಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಅಭಿವೃದ್ದಿ ಕಾರ್ಯಗಳು ಸಂಪೂರ್ಣ ಹಳ್ಳ ಹಿಡಿದಿದ್ದು, ಜಿಲ್ಲೆಯೂ ಸಹ ಇದರಿಂದ ಹೊರತಾಗಿಲ್ಲ. ಕೇಂದ್ರದ ಮೋದಿ ನೇತೃತ್ವದ ಸರ್ಕಾರ, ಈ ಹಿಂದಿನ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯದ ಬಿಜೆಪಿ ಸರ್ಕಾರವು ಜಾರಿಗೊಳಿಸಿದ ಹಲವು ಜನಪರ ಯೋಜನೆಗಳನ್ನು ಇಂದಿನ ಕಾಂಗ್ರೆಸ್ ನಾಯಕರುಗಳು ತಮ್ಮದೆಂದು ಗುದ್ದಲಿಪೂಜೆಗೆ ಮುಂದಾಗುತ್ತಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ. ಸಂಸದ ಬಿವೈಆರ್ ವಿರುದ್ದ ವಿರೋಧಿಗಳು ಅನಾಗತ್ಯ ಹೇಳಿಕೆ ನೀಡುವುದನ್ನು ಜಿಲ್ಲೆಯ ಜನತೆ ಎಂದಿಗೂ ಒಪ್ಪುವುದಿಲ್ಲ. ಈ ಹಿಂದೆ ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ದಿ ಅಪ್ಪ-ಮಕ್ಕಳು ಟೊಂಕಕಟ್ಟಿ ಕಾರ್ಯನಿರ್ವಹಿಸಿದ ಪರಿಣಾಮ, ರಾಷ್ಟ್ರೀಯ ಹೆದ್ದಾರಿಗಳು, ರೈಲ್ವೆ ಯೋಜನೆಗಳು, ವಿಮಾನ ನಿಲ್ದಾಣ, ಕಳಸವಳ್ಳಿ-ಸಿಗಂದೂರು ಸೇತುವೆ, ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ಹಾಗು ಅನುದಾನ ಬಿಡುಗಡೆ ಆಗಿದೆ. ಇಡೀ ಜಿಲ್ಲೆಯನ್ನೇ ಒಂದು ಮಾದರಿ ಜಿಲ್ಲೆಯನ್ನಾಗಿಸುವ ಪ್ರಯತ್ನ ಸಂಸದ ರಾಘವೇಂದ್ರ ಅವರಿಂದ ನಡೆದಿದೆ. ಆದರೆ, ಜಿಲ್ಲೆಗೆ ಇಂದಿನ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಕೊಡುಗೆ ಏನು? ಎಂದು ಅವರು ಪ್ರಶ್ನಿಸಿದ್ದಾರೆ. ಸಂಸದರಿಗೆ ಜಿಲ್ಲೆಯ ರೈತಾಪಿವರ್ಗ, ಕೂಲಿ ಕಾರ್ಮಿಕವರ್ಗ ಸೇರಿದಂತೆ ಹಲವಾರು ನಡ ದೀನದಲಿತ ಕುಟುಂಬಗಳು ಒತ್ತಾಸೆಯಾಗಿ ನಿಂತಿವೆ. ಅಭಿವೃದ್ದಿಯನ್ನೆ ತಮ್ಮ ಉಸಿರಾಗಿಕೊಂಡಿರುವ ಸಂಸದ ಬಿ.ವೈ.ರಾಘವೇಂದ್ರ ಅವರ ಕಾರ್ಯವೈಖರಿಗೆ ರಾಜಕೀಯ ಲೇಪನ ಮಾಡುವುದು ಅಷ್ಟು ಸರಿಯಲ್ಲ. ಕಾಂಗ್ರೆಸ್ ಮುಖಂಡರ ಇಂತಹ ಹೇಯ ಹೇಳಿಕೆಗಳನ್ನು ತಾವು ತೀವ್ರವಾಗಿ ಖಂಡಿಸುವುದಾಗಿ ಅವರು ತಿಳಿಸಿದ್ದಾರೆ.

Leave a Comment