ರಿಪ್ಪನ್ಪೇಟೆ ; ಉತ್ತಮ ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಅಜ್ಞಾನವನ್ನು ತೊರೆದು ಜ್ಞಾನವಂತರಾಗಲು ಸಾಧ್ಯವಿದೆ. ಸಂಪಾದಿಸುವ ಧನ-ಕನಕ-ಸಂಪತ್ತಿನ ನಿರ್ದಿಷ್ಟ ಭಾಗವನ್ನು ಸಮಾಜದಲ್ಲಿ ಆಹಾರ-ಔಷಧ-ವಿದ್ಯಾ-ಅಭಯದಾನ ಮಾಡುವುದರಿಂದ ಸಮತಾಭಾವದ ಮರ್ಮವು ಜೀವನ ನಿರ್ವಹಣೆಯಲ್ಲಿ ದಿವ್ಯೌಷಧ ರೂಪದಲ್ಲಿ ಹಿತವನ್ನುಂಟು ಮಾಡುತ್ತದೆ ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಪರ್ಯೂಷಣ ಪರ್ವದ ‘ಉತ್ತಮ ಆಂಕಿಚನ್ಯ’ ಧರ್ಮದ ಸಾರವನ್ನು ಪ್ರವಚನದಲ್ಲಿ ತಿಳಿಸಿದರು.

ಸಮತಾಭಾವ ಸಂಪನ್ನರಾಗುವುದನ್ನು ಆಂಕಿಚನ್ಯ ಧರ್ಮ ಪ್ರೇರೇಪಿಸುತ್ತದೆ ಎಂದವರು ಹೇಳಿ, ಭಕ್ತರಿಗೆ ಅನಗತ್ಯ ವಿಚಾರಗಳನ್ನು, ಅನಾವಶ್ಯಕ ದ್ರವ್ಯ ಸಂಗ್ರಹ ಮಾಡದೇ ದಾನ ರೂಪದಲ್ಲಿ ಅವಶ್ಯವುಳ್ಳವರಿಗೆ ನೀಡುವುದರಿಂದ ಅಸಮಾನತೆ ದೂರವಾಗುವುದೆಂದು ವಿವರಿಸಿದರು.

ಭಗವಾನ್ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಮಹಾಮಾತೆ ಯಕ್ಷಿಶ್ರೀ ಪದ್ಮಾವತಿ ದೇವಿ, ಶ್ರೀ ನೇಮಿನಾಥ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ ಸನ್ನಿಧಿಯಲ್ಲಿ ಪೂಜೆ ನೆರವೇರಿತು. ಊರ ಪರವೂರ ಭಕ್ತರು, ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು, ಶ್ರೀ ಪದ್ಮಾವತಿ ಮಹಿಳಾ ಸಮಾಜದವರು ಪೂಜಾ ವಿಧಿ-ವಿಧಾನಗಳಲ್ಲಿ ಪಾಲ್ಗೊಂಡರು.


ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.