ಮುಂದಿನ ಶೈಕ್ಷಣಿಕ ವರ್ಷದಿಂದಲೇ ಕೋಡೂರಿನಲ್ಲಿ ಕೆಪಿಎಸ್ ಪ್ರಾರಂಭಿಸಲು ಚಿಂತನೆ ; ಕಲಗೋಡು ರತ್ನಾಕರ್

Written by Mahesha Hindlemane

Published on:

ರಿಪ್ಪನ್‌ಪೇಟೆ ; ಪ್ರತಿ ಮಗುವೂ ಗುಣಮಟ್ಟದ ಶಿಕ್ಷಣ ಪಡೆಯಬೇಕೆಂಬ ಉದಾತ್ತ ಆಶಯದೊಂದಿಗೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕರ್ನಾಟಕ ಪಬ್ಲಿಕ್‌ ಶಾಲೆಯನ್ನು ಆರಂಭಿಸಿದ್ದು ಈ ಹಿನ್ನೆಲೆಯಲ್ಲಿ ಕೋಡೂರು ಗ್ರಾಮದಲ್ಲಿ ಕೆಪಿಎಸ್ ಆರಂಭಿಸಲು ಚಿಂತನೆ ನಡೆದಿದೆ ಎಂದು ಜಿ.ಪಂ. ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಕೋಡೂರಿನಲ್ಲಿ ಕೆಪಿಎಸ್ ಶಾಲೆ ಆರಂಭಿಸಲು ಸೋಮವಾರ ಕೋಡೂರು ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕೋಡೂರು ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳ ಮಕ್ಕಳಿಗೆ ಒಂದೇ ಸೂರಿನಡಿ ಶಿಕ್ಷಣ ದೊರೆಯುಂತಾಗಬೇಕು. ಶಾಲೆಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಶಿಕ್ಷಕರ ಬೋಧನಾ ಸಾಮರ್ಥ್ಯ‌ ವೃದ್ಧಿ ಸೇರಿದಂತೆ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕೂಡ ದೊರೆಯಬೇಕು ಎನ್ನುವುದು ಪಬ್ಲಿಕ್‌ ಶಾಲೆಯ ಮೂಲ ಉದ್ದೇಶವಾಗಿದೆ.

ಈ ಶಾಲೆಗಳಲ್ಲಿ ಆಯಾ ಹಂತದ ಮಕ್ಕಳಿಗೆ ಉತ್ತಮ ಕೊಠಡಿ, ಸುಸಜ್ಜಿತ ಪ್ರಯೋಗಾಲಯ, ಪ್ರತ್ಯೇಕ ಕಂಪ್ಯೂಟರ್‌ ಲ್ಯಾಬ್‌ ಮತ್ತು ಗ್ರಂಥಾಲಯ, ಶುದ್ಧ ಕುಡಿಯುವ ನೀರು, ಆಟದ ಮೈದಾನ, ಬಾಲಕರು ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇರುತ್ತದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ. ಶಾಲಾ ಹಂತದಲ್ಲೇ ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿಗೊಳಿಸಲಾಗುತ್ತದೆ. ವೃತ್ತಿ ಶಿಕ್ಷಣ, ಕಲೆ, ಸಂಗೀತ ಇತ್ಯಾದಿ ಸಹ ಪಠ್ಯ ಚಟುವಟಿಕೆಗಳಿಗೆ ತರಬೇತಿ ನೀಡಲಿದ್ದಾರೆ ಎಂದರು‌.

ಮುಂದಿನ ಶೈಕ್ಷಣಿಕ ವರ್ಷದಿಂದಲೇ ಕೋಡೂರಿನಲ್ಲಿ ಕೆಪಿಎಸ್ ಪ್ರಾರಂಭಿಸಲು ಚಿಂತನೆ ನಡೆದಿದ್ದು ಮಕ್ಕಳನ್ನು ಶಾಲೆಗೆ ಕರೆತರಲು ಪ್ರತಿ ಗ್ರಾಮಕ್ಕೂ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು. ಕೋಡೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು 15ಕ್ಕೂ ಹೆಚ್ಚು ಶಾಲೆಗಳಿದ್ದು ಹಲವು ಶಾಲೆಗಳಲ್ಲಿ ಈಗಾಗಲೇ ಮಕ್ಕಳ ಕೊರತೆ ಎದ್ದು ಕಾಣುತ್ತಿದೆ. ಇವೆಲ್ಲವನ್ನೂ ಒಗ್ಗೂಡಿಸುವ ನಿಟ್ಟಿನಲ್ಲಿ ಎಸ್‌ಡಿಎಂಸಿ ಸದಸ್ಯರು ಹಾಗೂ ಶಿಕ್ಷಕರು ಈ ಕಾರ್ಯಕ್ಕೆ ಕೈಜೋಡಿಸುವಂತೆ ಕರೆ ನೀಡಿದ ಅವರು, ಆಯಾ ಶಾಲಾ ಹಂತದಲ್ಲಿ ಸಭೆ ಕರೆದು ತೀರ್ಮಾನಿಸಿ ಇದೇ ತಿಂಗಳ 25ರೊಳಗೆ ಅಂತಿಮ ವರದಿ ನೀಡಬೇಕೆಂದರು.

ಈ ಸಂದರ್ಭದಲ್ಲಿ ಕೋಡೂರು ಗ್ರಾ.ಪಂ. ಅಧ್ಯಕ್ಷ ಜಯಪ್ರಕಾಶ್, ಉಪಾಧ್ಯಕ್ಷ ಸುಧಾಕರ್, ಗ್ರಾ.ಪಂ. ಸದಸ್ಯರುಗಳು, ಹೊಸನಗರ ಬಿಇಒ ಗಣೇಶ್ ವೈ, ಶಿಕ್ಷಣ ಸಂಯೋಜಕ ಕರಿಬಸಪ್ಪ, ಪಿಡಿಒ ನಾಗರಾಜ್, ಗ್ರಾ.ಪಂ. ವ್ಯಾಪ್ತಿಯ ಎಲ್ಲಾ ಶಾಲೆಯ ಮುಖ್ಯ ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು, ಗ್ರಾಮಸ್ಥರು ಮತ್ತಿತರರು ಇದ್ದರು.

Leave a Comment