SHIVAMOGGA ; ಹೊಸ ವರ್ಷದ ದಿನದಂದು ಬಿಜೆಪಿ ಪಕ್ಷದ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಹೆಸರಿನಲ್ಲಿ, ದುಷ್ಕರ್ಮಿಗಳು ಶಿವಮೊಗ್ಗದ ಮೂವರು ಪ್ರಮುಖರಿಗೆ ಕೋರಿಯರ್ ಮೂಲಕ ವಿಷಯುಕ್ತ ಸ್ವೀಟ್ ಬಾಕ್ಸ್ ರವಾನಿಸಿದ್ದ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.
ಶಿವಮೊಗ್ಗದ ಪ್ರತಿಷ್ಟಿತ ಎನ್ಇಎಸ್ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್, ವೈದ್ಯರಾದ ಡಾ. ಅರವಿಂದ್ ಹಾಗೂ ಡಾ. ಪವಿತ್ರ ಅವರಿಗೆ ತಮ್ಮ ಹೆಸರಿನಲ್ಲಿ ಸ್ವೀಟ್ ಬಾಕ್ಸ್ ರವಾನೆಯಾಗಿದೆ. ನಾಗರಾಜ್ ಅವರು ಸ್ವೀಟ್ ತಿಂದ ವೇಳೆ ಕಹಿಯಾಗಿರುವುದು ಕಂಡುಬಂದಿದೆ. ಈ ಕುರಿತಂತೆ ಅವರು ವಿಧಾನ ಪರಿಷತ್ ಶಾಸಕ ಡಿ.ಎಸ್ ಅರುಣ್ ಅವರ ಗಮನಕ್ಕೆ ತಂದಿದ್ದರು. ಈ ಬಗ್ಗೆ ಡಿ.ಎಸ್ ಅರುಣ್ ತಮ್ಮ ಗಮನಕ್ಕೆ ತಂದ ನಂತರವಷ್ಟೆ, ತಮಗೆ ಮಾಹಿತಿ ಗೊತ್ತಾಗಿತ್ತು, ತದನಂತರ ಇತರೆ ಇಬ್ಬರು ವೈದ್ಯರಿಗೆ ಇದೇ ಮಾದರಿಯ ಸ್ವೀಟ್ ಬಾಕ್ಸ್ ರವಾನೆಯಾಗಿರುವುದು ತಿಳಿದುಬಂದಿದೆ.
ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/14g5xzVvPW/
ಈ ವಿಷಯುಕ್ತ ಸ್ವೀಟ್ ಮಾದರಿಯನ್ನು ಹೆಚ್ಚಿನ ತಪಾಸಣೆಗಾಗಿ, ಪ್ರಯೋಗಾಲಯದ ಪರೀಕ್ಷೆಗೆ ರವಾನಿಸಲಾಗಿದೆ. ಸ್ವೀಟ್ ಗೆ ಏನು ಮಿಶ್ರಣ ಮಾಡಲಾಗಿದೆ ಎಂಬುವುದು ಇನ್ನಷ್ಟೆ ತಿಳಿದು ಬರಬೇಕಾಗಿದೆ. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಜೊತೆಗೆ ಎಸ್.ಪಿ. ಗಮನಕ್ಕೂ ತರಲಾಗಿದೆ.
ಅತ್ಯಂತ ಪ್ರಾಮಾಣಿಕವಾಗಿ ತಾವು ಸಾರ್ವಜನಿಕ ಸೇವೆ ಮಾಡಿಕೊಂಡು ಬರುತ್ತಿದ್ದೆನೆ. ತಮ್ಮಂತವರಿಗೆ ಈ ರೀತಿಯಾಗಿ ತೊಂದರೆ ಕೊಡುವ ಕುಕೃತ್ಯಗಳನ್ನು ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಇದೆ ಸಿಹಿ ಬಾಕ್ಸ್ ಮಕ್ಕಳ ಕೈಯಲ್ಲಿ ಸಿಕ್ಕಿದ್ದರೆ ಗತಿ ಏನು ಎಂದು ಡಾ. ಧನಂಜಯ ಸರ್ಜಿ ಆತಂಕ ವ್ಯಕ್ತಪಡಿಸಿದ್ದಾರೆ.
ಸ್ವೀಟ್ ಬಾಕ್ಸ್ ನಲ್ಲಿ ತಮ್ಮ ಹೆಸರು, ಭಾವಚಿತ್ರ ಮುದ್ರಿಸಿರುವ ನಕಲಿ ಪತ್ರವಿರಿಸಿರುವುದು ಕಂಡುಬಂದಿದೆ. ಯಾರೋ ಉದ್ದೇಶಪೂರ್ವಕವಾಗಿಯೇ ಈ ದುಷ್ಕೃತ್ಯ ಎಸಗಿದ್ದಾರೆ. ಆರೋಪಿಗಳು ಪತ್ತೆಯಾಗಬೇಕು. ಜೊತೆಗೆ ಅವರಿಗೆ ಕಠಿಣ ಶಿಕ್ಷೆಯಾಗಬೇಕು.
– ಡಾ. ಧನಂಜಯ ಸರ್ಜಿ, ಖ್ಯಾತ ವೈದ್ಯ ಹಾಗೂ ಎಂಎಲ್‌ಸಿ