ಹೊಸನಗರ ; ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದ್ದು, ವಾಣಿಜ್ಯ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರದ ವಿಕಾಸ ವಿದ್ಯಾ ಸಂಸ್ಥೆ ವಿದ್ಯಾರ್ಥಿ ಪ್ರಜ್ವಲ ಹೆಚ್.ಪಿ. ಶಿವಮೊಗ್ಗ ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಹೊಸನಗರ ತಾಲೂಕಿನ ಕರಿಮನೆ ಗ್ರಾಪಂ ವ್ಯಾಪ್ತಿಯ ಮಳಲಿ ಗ್ರಾಮದ ಹಿರಿಮನೆ ನಿವಾಸಿ, ಶೈಲಜಾ ಮತ್ತು ಪಾಂಡುರಂಗ ಗೌಡ ದಂಪತಿಗಳ ಪುತ್ರನಾದ ಪ್ರಜ್ವಲ್ 600ಕ್ಕೆ 594 ಅಂಕ ಗಳಿಸಿ ಶೇ.99 ರಷ್ಟು ಫಲಿತಾಂಶದ ಸಾಧನೆ ಮಾಡಿದ್ದಾರೆ.
ಅರ್ಥಶಾಸ್ತ್ರದಲ್ಲಿ 100, ಬ್ಯುಸಿನಸ್ ಸ್ಟಡೀಸ್ ನಲ್ಲಿ 100, ಅಕೌಂಟೆನ್ಸಿಯಲ್ಲಿ 100 ಅಂಕ ಗಳಿಸಿದರೆ, ಸ್ಟಾಟಿಟಿಕ್ಸ್ ನಲ್ಲಿ 99, ಕನ್ನಡದಲ್ಲಿ 99, ಇಂಗ್ಲೀಷ್‌ನಲ್ಲಿ 94 ಅಂಕ ಪ್ರಜ್ವಲ್ ಗಳಿಸಿದ್ದಾರೆ.

ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಪ್ರಜ್ವಲ್ ಪಿಯುಸಿಯಲ್ಲಿ ಆಂಗ್ಲ ಮಾಧ್ಯಮದಲ್ಲಿ ಕಲಿತು ಜಿಲ್ಲೆಗೆ ಟಾಪರ್ ಆಗಿರುವುದು ವಿಶೇಷವಾಗಿದೆ.
ಮುಂದೆ ಐಎಎಸ್ ಮಾಡಬೇಕು ಎಂಬಲ ಹೊಂದಿರುವ ಪ್ರಜ್ವಲ್ ಸಾಧನೆಯನ್ನು ತಂದೆ ಪಾಂಡುರಂಗ, ತಾಯಿ ಶೈಲಜಾ, ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಡಾ.ಜಿ.ಸುಧಾಕರ್ ಅಭಿನಂದಿಸಿದ್ದಾರೆ.