ಹೊಂಬುಜ ; ಬದುಕು ಬಂಗಾರವಾಗಲಿ, ಇಷ್ಟಾರ್ಥ ಪ್ರಾಪ್ತಿಗಾಗಿ ಧರ್ಮ ಪರಂಪರೆ ಶ್ರೀರಕ್ಷೆ ಆಗಿದೆ ಎಂಬ ಸದ್ವಿಚಾರವನ್ನು ಅರಿತಾಗ ಯಶಃ ಪ್ರಾಪ್ತಿ ನಿಶ್ಚಿತ” ಎಂದು ಹೊಂಬುಜ ಶ್ರೀ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಬನ್ನಿಮಂಟಪದಲ್ಲಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ, ಶ್ರೀ ಪದ್ಮಾವತಿ ದೇವಿ ವಿಧಿ-ವಿಧಾನ ಪೂಜೆ ಸಲ್ಲಿಸಿ ವಿಜಯದಶಮಿ ಧರ್ಮ ಸಂದೇಶ ನೀಡಿ, ಸರ್ವರಿಗೂ ಬನ್ನಿ ಪತ್ರ ನೀಡಿ ಹರಸಿದರು.






ಶ್ರೀಕ್ಷೇತ್ರದ ಸನ್ನಿಧಿಯಲ್ಲಿ ಸಾಲಂಕೃತ ಮೆರವಣಿಗೆಯಲ್ಲಿ ಗಜರಾಣಿ ಐಶ್ವರ್ಯ, ಅಶ್ವಗಳಾದ ಪವನ ಮಾನವಿ ಮತ್ತು ವಾದ್ಯಗೋಷ್ಠಿ, ಜಯಕಾರಗಳೊಂದಿಗೆ ಉತ್ಸವವು ಬನ್ನಿ ಮಂಟಪದತ್ತ ತೆರಳಿತು. ಊರಪರವೂರ ಭಕ್ತವೃಂದ, ಶ್ರೀ ಕುಂದಕುಂದ ಗುರುಕುಲ ವಿದ್ಯಾಪೀಠದ ವಿದ್ಯಾರ್ಥಿಗಳು, ಪದ್ಮಾವತಿ ಮಹಿಳಾ ಸಮಾಜದ ಶ್ರಾವಿಕೆಯರು ಶ್ರೀಗಳವರಿಂದ ಶ್ರೀಗಳವರಿಂದ ‘ಶಮೀ ಪತ್ರ’ ಸ್ವೀಕರಿಸಿ ಧನ್ಯರಾದರು.

ಹೊಂಬುಜ ಸಿಂಹಾಸನ ಪೀಠ ಪೂಜೆ
ಹೊಂಬುಜ : “ಆಧ್ಯಾತ್ಮಿಕ ಪ್ರಭಾವನೆಯನ್ನು ಮನದಟ್ಟಾಗಿ ತಿಳಿಹೇಳುವ ಮೂಲಕ ಸಮಾಜದಲ್ಲಿ ಸಮಾನತೆ, ಸೌಹಾರ್ದತೆ ಪ್ರತಿಯೋರ್ವರಲ್ಲಿ ಕಾಣಬಹುದು. ಕಾಲಕಾಲಕ್ಕೆ ಜೈನ ಮುನಿಶೀಗಳವರು, ಹೊಂಬುಜದ ಪೂರ್ವ ಭಟ್ಟಾರಕರವರು ಜೈನಧರ್ಮದ ಆಚರಣೆಯ ವಿಚಾರಗಳನ್ನು ಪ್ರಸರಿಸಿ, ಸನ್ನಡತೆಯ ಸಮಾಜ ನಿರ್ಮಾಣಕ್ಕಾಗಿ ಪೂರಕ ಧರ್ಮ ತತ್ತ್ವಗಳನ್ನು ನಿರೂಪಿಸಿದ್ದಾರೆ” ಎಂದು ಹೊಂಬುಜ ಜೈನಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ವಿಜಯದಶಮಿಯಂದು ಸಿಂಹಾಸನ ಪೂಜಾ ವಿಧಿಯ ಬಳಿಕ ಅನುಗ್ರಹ ಆಶೀರ್ವಾದ ಪ್ರವಚನದಲ್ಲಿ ತಿಳಿಸಿದರು.

“ಜ್ಞಾನಪ್ರಭೆ ಬೆಳಗಿಸುವ ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀಪೀಠವು ಸರ್ವತ್ರ ಮೈತ್ರಿಭಾವ ಜೀವನ ನಿರ್ವಹಣೆಗಾಗಿ ನಿರಂತರ ಮಾರ್ಗದರ್ಶನ ಮಾಡಿರುವುದು. ಪ್ರಸಕ್ತ ಸನ್ನಿವೇಶದಲ್ಲಿಯೂ ಸುಖ-ಸಂಪತ್ತು-ಆರೋಗ್ಯ-ಆದಾಯ ಸಂವರ್ಧನೆಗಾಗಿ ಧರ್ಮ ಸ್ಪರ್ಶವನ್ನು ನೀಡುತ್ತಿದೆ” ಎಂಬ ಶುಭ ಸಂದೇಶ ನೀಡಿದ ಶ್ರೀಗಳವರು ‘ಸರ್ವರಿಗೂ ಕ್ಷೇಮವುಂಟಾಗಲಿ’ ಎಂದು ಹರಸಿ, ಶ್ರೀಫಲ ಮಂತ್ರಾಕ್ಷತೆ ದಯಪಾಲಿಸಿದರು.

ಪುರೋಹಿತರಾದ ಪದ್ಮರಾಜ ಇಂದ್ರ, ಸಹಪುರೋಹಿತರು ಸಿಂಹಾಸನ ಪೂಜೆ, ಬಿರುದಾವಳಿ ವಾಚನ, ಪಾದಪೂಜೆ ನೆರವೇರಿಸಿದರು. ಭಕ್ತವೃಂದದವರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.