ಶಿವಮೊಗ್ಗ ಜಿಲ್ಲಾ ಬಿಜೆಪಿ ವತಿಯಿಂದ ವಕ್ಫ್ ಮಂಡಳಿ ವಿರುದ್ಧ ಪ್ರತಿಭಟನೆ ; ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನ, ಪೊಲೀಸರ ವಶಕ್ಕೆ

Written by malnadtimes.com

Published on:

SHIVAMOGGA ; ಕರ್ನಾಟಕವನ್ನು ಮುಸ್ಲಿಂ ಆಸ್ತಿ ಮಾಡಲು ಹೊರಟ ವಕ್ಫ್ ಕಾಯ್ದೆ ವಿರುದ್ಧ ರೈತರ ಜಮೀನು ಉಳಿಸುವುದಕ್ಕೋಸ್ಕರ್ ಬಿಜೆಪಿ ಹೋರಾಟ ಪ್ರಾರಂಭಿಸಿದೆ ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಅವರು ಇಂದು ಜಿಲ್ಲಾ ಬಿಜೆಪಿ ವತಿಯಿಂದ ವಕ್ಫ್ ಮಂಡಳಿ ವಿರುದ್ಧ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶಾಂತವಾದ ಕರ್ನಾಟಕದಲ್ಲಿ ಸದ್ದಿಲ್ಲದೆ ನೂರಾರು ವರ್ಷಗಳಿಂದ ಜಮೀನು ಸಾಗುವಳಿ ಮಾಡಿಕೊಂಡು ಬಂದಿರುವ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿಯೆಂದು ನಮೂದಿಸಿ ರೈತರಿಗೆ ನೋಟೀಸ್ ನೀಡುತ್ತಿರುವ ಸರ್ಕಾರ ರಾಜ್ಯದ ಮುಜುರಾಯಿ ದೇವಾಲಯಗಳು, ಪುರಾತತ್ವ ಇಲಾಖೆಯ ಆಸ್ತಿಗಳು, ಮಠ ಮಂದಿರಗಳು ಮತ್ತು ಶಾಲಾ ಜಮೀನುಗಳನ್ನು ವಕ್ಫ್ ಆಸ್ತಿ ಮಾಡಲು ಸರ್ಕಾರ ಹೊರಟಿದೆ. ಇದಕ್ಕೆ ಮುಖ್ಯ ಕಾರಣ ವಸತಿ ಸಚಿವ ಜಮೀರ್ ಅಹಮ್ಮದ್ ಆಗಿದ್ದು, ಅವರನ್ನು ಕೂಡಲೇ ಬಂಧಿಸಬೇಕು, ಸಂಪುಟದಿಂದ ವಜಾಗೊಳಿಸಬೇಕು ಇಲ್ಲದಿದ್ದಲ್ಲಿ ರಾಜ್ಯದಾದ್ಯಂತ ದೊಡ್ಡ ಮಟ್ಟದ ಹೋರಾಟ ಬಿಜೆಪಿ ನಡೆಸಲಿದೆ ಎಂದರು.

ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ‌. https://www.facebook.com/share/v/xVXdUZyQJ7zVZK8M/

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಎಲುಬಿಲ್ಲದ ನಾಲಿಗೆ ನಿಮ್ಮದು ನೋಟೀಸ್ ಹಿಂಪಡೆದ ತಕ್ಷಣ ಪಹಣಿಯಲ್ಲಿ ಬದಲಾವಣೆಯಾಗುವುದಿಲ್ಲ. ತಾಕತ್ತಿದ್ದರೆ ವಕ್ಫ್ ಕಾನೂನನ್ನೇ ಬದಲಾವಣೆ ಮಾಡಿ, ಇಲ್ಲವಾದರೆ ಈಗ ನಮ್ಮ ಪ್ರಧಾನಿ ಮಾಡಲು ಹೊರಟಿದ್ದಾರೆ. ಅವರಿಗೆ ಬೇಷರತ್ತು ಬೆಂಬಲ ನೀಡಿ, ನಮ್ಮ ಕಾನೂನು ಬದ್ಧ ಹೋರಾಟವನ್ನು ತಡೆಯುವ ದುಸ್ಸಾಹಕ್ಕೆ ಕೈ ಹಾಕಬೇಡಿ ಎಂದರು.

ಮಾಜಿ ಶಾಸಕ ಅಶೋಕ್‌ನಾಯ್ಕ್ ಮಾತನಾಡಿ, ಕಾಂಗ್ರೆಸ್ ಬಂದಾಗಿನಿಂದ ರೈತರಲ್ಲಿ ಆತಂಕ ಮೂಡಿಸಿದೆ. ಪ್ರತಿ ಜಿಲ್ಲೆಯಲ್ಲೂ ವಕ್ಫ್ ಸಮಿತಿ ಇದ್ದು, ಪ್ರಧಾನ ಮಸೀದಿಯ ಮೌಲಿಯೇ ಅದಕ್ಕೆ ಅಧ್ಯಕ್ಷರಾಗಿರುತ್ತಾರೆ. ವಕ್ಫ್ ಸಮಿತಿ ಏನಾದರೂ ಯಾವುದಾದರೂ ಆಸ್ತಿಯನ್ನು ತಮ್ಮದೆಂದು ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರೆ ಸಾಕು, 20ದಿನಗಳ ಒಳಗೆ ಜಿಲ್ಲಾಧಿಕಾರಿಗಳು ಆ ಆಸ್ತಿಯ ಅನುಭವದಾರರಿಗೆ ನೋಟೀಸ್ ನೀಡಿ, ಆ ಆಸ್ತಿಯನ್ನು ವಕ್ಫ್ ಸಮಿತಿಗೆ ವರ್ಗಾಹಿಸುತ್ತಾರೆ. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ,
ಸುಪ್ರೀಂಕೋರ್ಟ್‌ನಲ್ಲೂ ಪ್ರಶ್ನಿಸುವ ಆಗಿಲ್ಲ, ವಕ್ಫ್ ಟ್ರಬ್ಯುನಲ್‌ನಲ್ಲಿ ಪ್ರಶ್ನಿಸಬೇಕು. ಅದರಲ್ಲಿ ಅವರದೇ ಸಮಾಜದ ಮುಖಂಡರಿರುತ್ತಾರೆ. ಅಲ್ಲಿ ನ್ಯಾಯ ಸಿಗುವ ಭರವಸೆ ಇಲ್ಲ, ಇದೇ ರೀತಿ ಅನೇಕ ರೈತರ ಮತ್ತು ದೇವಾಲಯಗಳ ಆಸ್ತಿಗಳು ವಕ್ಫ್ ಪಾಲಾಗಿದೆ ಎಂದರು.

ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ಉಡುಪಿಯ ಶಿವಪುರ ಈಗ ಸುಲ್ತಾನ್‌ಪುರ ಆಗಿದೆ. ದಯಮಾಡಿ ಜಿಲ್ಲೆಯ ರೈತರು ಬೆಳಿಗ್ಗೆ ಎದ್ದಕೂಡಲೇ ತಮ್ಮ ಜಮೀನಿನ ಪಹಣಿ ಯಾರ ಹೆಸರಿನಲ್ಲಿದೆ ಎಂದು ಪರಿಶೀಲಿಸಿ ರಾತ್ರೋರಾತ್ರಿ ಖಾತೆ ಬದಲಾವಣೆಯಾಗುತ್ತದೆ. ಹಾಗಾಗಿ ದ್ವಿಮುಖ ನೀತಿಯನ್ನು ಕೈಬಿಡಿ ರೈತರ ಶಾಪ ತಟ್ಟುತ್ತದೆ ಎಂದರು.

ಈ ಸಂದರ್ಭದಲ್ಲಿ ಮಹಿಳಾ ಪ್ರಮುಖರಾದ ಸುರೇಖಾ ಮುರಳೀಧರ್, ರಶ್ಮಿ ಶ್ರೀನಿವಾಸ್,
ಚೈತ್ರಪೈ, ಯಶೋಧನಾಗರಾಜ್ ಇದ್ದರು.

ಬಿಗುವಿನ ವಾತಾವರಣ :
ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮಾಜಿ ಶಾಸಕ ಅಶೋಕ್‌ನಾಯ್ಕ್, ಎಸ್.ಎಸ್. ಜ್ಯೋತಿ ಪ್ರಕಾಶ್ ಸೇರಿದಂತೆ ಪ್ರಮುಖರನ್ನು ಪೊಲೀಸರು ವಶಕ್ಕೆ ಪಡೆದರು. ಬಳಿಕ ಸ್ಥಳದಲ್ಲಿ ಹೈಡ್ರಾಮಾ ನಡೆಯಿತು. ಪ್ರಮುಖರನ್ನು ಬಂಧಿಸುತ್ತಿದ್ದಂತೆ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಜಿಲ್ಲಾಧಿಕಾರಿಗಳ ಕಚೇರಿಗೆ ನುಗ್ಗಲು ಯತ್ನಿಸಿದರು. ಈ ಸಂದರ್ಭದಲ್ಲಿ ಮಹಿಳಾ ಕಾರ್ಯಕರ್ತೆಯೊಬ್ಬರಿಗೆ ಸಣ್ಣ ಗಾಯವಾಗಿದ್ದು, ಅದನ್ನೇ ಮುಂದಿಟ್ಟುಕೊಂಡು ಪೊಲೀಸ್ ದೌರ್ಜನ್ಯ ವಿರುದ್ಧ ಮತ್ತೆ ಪ್ರತಿಭಟನೆಗೆ ಇಳಿದರು. ಅರ್ಧ ಗಂಟೆ ಕಾಲ ಬಿಗುವಿನ ವಾತಾವರಣ ಉಂಟಾಯಿತು. ಬಳಿಕ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಗಳು ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳುವ ಭರವಸೆ ನೀಡಿದ ಬಳಿಕ ಧರಣಿ ವಾಪಸ್ ಪಡೆದರು.

Leave a Comment