ಹೊಸನಗರ ; ತಾಲ್ಲೂಕಿನ ಕಸಬಾ ಹೋಬಳಿ ಕಳೂರು ಗ್ರಾಮದ ಅಗಸರಕೊಪ್ಪ ಗ್ರಾಮದ ವ್ಯಾಪ್ತಿಯಲ್ಲಿ ಹೊಸನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಸ ವಿಲೇವಾರಿ ಘಟಕವನ್ನು ಸುಮಾರು 20 ವರ್ಷಗಳ ಹಿಂದೆ ಸ್ಥಾಪನೆಗೊಂಡಿದ್ದು ಪಟ್ಟಣ ಪಂಚಾಯತಿಯ ನೌಕರರು ಕಸವನ್ನು ಬೇಕಾಬಿಟ್ಟಿ ಹಾಕಿ ಬೇಲಿ, ವಗೈರೆ ನಿರ್ವಹಿಸದೇ ಬೀದಿನಾಯಿಗಳು ಕಸ ತಂದು ಅಗಸರಕೊಪ್ಪ ಗ್ರಾಮದ ಮನೆಯ ಮುಂದೆ ಹಾಕುವುದರ ಜೊತೆಗೆ ಘಟಕದ ವಾಸನೆಯಿಂದ ಈ ಗ್ರಾಮದಲ್ಲಿ ವಾಸ ಮಾಡುವುದೇ ಕಷ್ಟಕರವಾಗಿದೆ ಎಂದು ಗ್ರಾಮಸ್ಥರಾದ ರುದ್ರಪ್ಪ ನೇತೃತ್ವದಲ್ಲಿ ಪಟ್ಟಣ ಪಂಚಾಯತಿಯ ಕಸ ವಿಲೇವಾರಿ ಘಟಕದ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರುದ್ರಪ್ಪ, ಹೊಸನಗರ ಪಟ್ಟಣ ಪಂಚಾಯತಿ ವ್ಯಾಪ್ತಿಯ 11 ವಾರ್ಡ್‌ಗಳ ಕಸವನ್ನು ಈ ಕಸ ವಿಲೇವಾರಿ ಘಟಕ್ಕೆ ತಂದು ಹಾಕುತ್ತಿದ್ದಾರೆ. ಈ ಘಟಕದಲ್ಲಿ ಸ್ವಚ್ಛತೆ ಕಾಣದೇ ಎಷ್ಟೋ ವರ್ಷಗಳೇ ಕಳೆದಿದೆ. ಅಕ್ಕಪಕ್ಕದ ಗ್ರಾಮಸ್ಥರಾದ ನಾವು ಬದುಕುವುದು ಹೇಗೆ? ಇದು ಮುಂದುರೆದರೆ ಮುಂದಿನ ದಿನದಲ್ಲಿ ಈ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿದೆ. ಕಸ ವಿಲೇವಾರಿ ಘಟಕಕ್ಕೆ ಬೇಲಿಗಳಿಲ್ಲದೇ ನಾಯಿಗಳು ದನ-ಕರುಗಳು ಒಳಗೆ ಹೋಗಿ ತ್ಯಾಜ್ಯ ವಸ್ತುಗಳನ್ನು ತಿಂದು ಸಾಯುತ್ತಿದೆ. ತ್ಯಾಜ್ಯ ಸರಿಯಾಗಿ ವಿಲೇವಾರಿ ಮತ್ತು ಸರಿಯಾಗಿ ಕಾರ್ಯನಿರ್ವಹಿಸದೇ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು ಇದರಿಂದ ಜೀವ ಹಾನಿಯಾಗುವ ಸಂಭವವಿದೆ. ಈ ಬಗ್ಗೆ ಅನೇಕ ಬಾರಿ ಪಟ್ಟಣ ಪಂಚಾಯತಿ ಅಧಿಕಾರಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ. ತಕ್ಷಣ ಕಸ ವಿಲೇವಾರಿ ಘಟಕದ ಸುತ್ತ ಬೇಲಿ ಹಾಕಬೇಕು, ಘಟಕದ ಒಳಗಡೆ ಇರುವ ತ್ಯಾಜ್ಯ ವಸ್ತುವನ್ನು ಇಲ್ಲಿಂದ ತೆಗೆಯಬೇಕು. ಘಟಕದ ಒಳಗೆ ಸರಿಯಾಗಿ ಮಳೆಯ ನೀರು ಸರಬರಾಜಗುವಂತೆ ಮಾಡಬೇಕೆಂದು ಆಗ್ರಹಿಸಿ ಪ್ರತಿಭಟಿಸಿದರು.

ಸ್ಪಂದನೆ ;
ಅಗಸರಕೊಪ್ಪ ಗ್ರಾಮಸ್ಥರ ಪ್ರತಿಭಟನೆಗೆ ಸ್ಪಂದಿಸಿದ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಹರೀಶ್, ಪಟ್ಟಣ ಪಂಚಾಯತಿ ಅಧ್ಯಕ್ಷ ನಾಗಪ್ಪ ಹಾಗೂ ಪಟ್ಟಣ ಪಂಚಾಯತಿ ಆರೋಗ್ಯಾಧಿಕಾರಿ ಶೃತಿ, ಪ್ರತಿಭಟನೈ ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರ ಬೇಡಿಕೆಗಳಿಗೆ ಸ್ಪಂದಿಸುವುದರ ಜೊತೆಗೆ ಕಸ ವಿಲೇವಾರಿ ಘಟಕವನ್ನು ವೀಕ್ಷಿಸಿ ಗ್ರಾಮಸ್ಥರು ಪ್ರತಿಭಟಿಸುವುದರಲ್ಲಿ ಅರ್ಥವಿದೆ. ಬೇಲಿಗಳು ಹಾಳಾಗಿರುವುದರಿಂದ ದನ-ಕರುಗಳು, ಬೀದಿ ನಾಯಿಗಳು ಒಳಗೆ ಬರುತ್ತಿದೆ. ಒಂದು ತಿಂಗಳ ಅವಕಾಶ ನೀಡಿ ನಾಳೆಯಿಂದಲೇ ಕಸ ವಿಲೇವಾರಿ ಘಟಕದ ಕೆಲಸ ಆರಂಭಿಸುತ್ತೇವೆ. ನಿಮಗೆ ಆಗುತ್ತಿರುವ ತೊಂದರೆಯನ್ನು ಒಂದು ತಿಂಗಳ ಒಳಗೆ ಬಗೆ ಹರಿಸುತ್ತೇವೆಂಬ ಭರವಸೆಯೊಂದಿಗೆ ಪ್ರತಿಭಟನೆಯನ್ನು ಗ್ರಾಮಸ್ಥರು ಕೈ ಬಿಟ್ಟರು.
ಈ ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಹಾಲಪ್ಪ, ಮುರುಗೇಂದ್ರ, ಶೇಷಪ್ಪ, ಕೊಲ್ಲೂರಪ್ಪ, ಅಣ್ಣಪ್ಪ, ರಾಮಪ್ಪ, ಡಾಕಣ್ಣ, ಅರುಣ, ಸತೀಶ, ಪ್ರವೀಣ್, ಚೇತನ್, ನಾಗಪ್ಪ, ಪ್ರಶಾಂತ್, ಮಂಜುನಾಥ, ದೇವೇಂದ್ರ, ಭಾಸ್ಕರ, ಸುರೇಶ, ಶಂಕರಪ್ಪ, ನಾಗರಾಜ್ ಮುಂತಾದವರು ಇದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.