SAGARA ; ಶಿವಮೊಗ್ಗ ಜಿಲ್ಲೆಯಲ್ಲಿ ಆದ ಶರಾವತಿ, ಚಕ್ರಾ,ವರಾಹಿ ಹಾಗೂ ತುಂಗಭದ್ರಾ ಮುಳುಗಡೆ ಸಂತ್ರಸ್ತರಿಗೆ ಭೂಮಿ ಹಕ್ಕು ಕೊಡಬೇಕೆಂದು ಆಗ್ರಹಿಸಿ ಸೋಮವಾರ ಇಲ್ಲಿನ ತಾಲೂಕು ಕಚೇರಿ ಎದುರು ಸಾವಿರಾರು ರೈತರು ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.
ಸಾಗರ ಪಟ್ಟಣದಲ್ಲಿ ಬೃಹತ್ ಮೆರವಣಿಗೆ ನಡೆಸಿದ ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಡಿ ಐತಿಹಾಸಿಕ ಅನ್ಯಾಯಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಸಿಗಂದೂರು ಧರ್ಮದರ್ಶಿ ಡಾ.ಎಸ್.ರಾಮಪ್ಪ ಅವರು ಕಹಳೆ ಊದುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿದರು.
ಜಿಲ್ಲೆಯಲ್ಲಿ ವಿವಿಧ ವಿದ್ಯುತ್ ಯೋಜನೆಗಳಿಗಾಗಿ ಅಣೆಕಟ್ಟುಗಳನ್ನು ನಿರ್ಮಾಣ ಮಾಡಿ ರೈತರನ್ನು ಸ್ಥಳಾಂತರಿಸಲಾಗಿದೆ. ಆದರೆ ಈವರೆಗೂ ಸರಿಯಾದ ಪುನರ್ವಸತಿ ಇಲ್ಲದೆ, ರೈತರು ಉಳುವ ಭೂಮಿಗೆ ಹಕ್ಕುಪತ್ರ ಇಲ್ಲವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಲೆನಾಡಿನ ರೈತರನ್ನು ಕಡೆಗಣಿಸಿದ್ದಾರೆ. ದೇಶಕ್ಕೆ ಬೆಳಕು ನೀಡುವ ಯೋಜನೆಯನ್ನು ಮಾಡಲು ಬಡ ರೈತರನ್ನು ಬೀದಿ ಪಾಲು ಮಾಡಲಾಗಿದೆ.
ಪರಸರ ವಾದಿಗಳ ದೂರಿನ ಅನ್ವಯ ಶರಾವತಿ ಸಂತ್ರಸ್ತರಿಗೆ ಮಂಜೂರು ಮಾಡಿದ್ದ ಭೂಮಿಯನ್ನು ರದ್ದು ಮಾಡಲಾಗಿದೆ. ರಾಜ್ಯ ಸರ್ಕಾರ ಕೇಂದ್ರದತ್ತ ಬೊಟ್ಟು ಮಾಡಿದರೆ, ಕೇಂದ್ರ ಸರ್ಕಾರ ನ್ಯಾಯಾಯದ ಆದೇಶ ಎಂದು ಹೇಳುತ್ತಿದೆ. ರೈತರು ಕಾಲಾಂತರದಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಭೂಮಿ ಇಂದು ಅರಣ್ಯ ಎಂದು ನಮೂದಾಗುತ್ತಿದೆ. ದಶಕಗಳ ಸಮಸ್ಯೆಯನ್ನು ಜೀವಂತವಾಗಿಡಲಾಗಿದೆ. ರಾಜ್ಯ ಹಾಗೂ ಕೇಂದ್ರ ಸರಕಾರದ ಪ್ರತಿನಿಧಿಗಳು ಒಂದು ಸಮನ್ವಯತೆ ಸಾಧಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದು ರೈತರು ಆಗ್ರಹಿಸಿದರು.
ಸಾಗರ ಎಸಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ಮುಂದುವರಿಯಲಿದ್ದು, ಅನೇಕ ಸಂಘಟನೆಗಳು, ರಾಜ್ಯ ರೈತ ಸಂಘ (ಗಣಪತಿಯಪ್ಪ ಸ್ಥಾಪಿತ), ದಲಿತ ಸಂಘರ್ಷ ಸಮಿತಿ, ಭೂರಹಿತರ ಹೋರಾಟ ಸಮಿತಿ ಸೇರಿದಂತೆ ಅನೇಕ ಚಳವಳಿಗಾರರು, ಶರಾವತಿ ಸಂತ್ರಸ್ತರು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.
ಮೆರವಣಿಗೆಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ, ಮಲೆನಾಡು ರೈತ ಹೋರಾಟ ಸಮಿತಿಯ ತೀನ ಶ್ರೀನಿವಾಸ್, ರಾಜ್ಯ ರೈತ ಸಂಘದ ಉಪಾಧ್ಯಕ್ಷ ಶಿವಾನಂದ ಕುಗ್ವೆ, ದಿನೇಶ್ ಶಿರವಾಳ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮಲ್ಲಿಕಾರ್ಜುನ ಹಕ್ರೆ, ಹೊಯ್ಸಳ ಗಣಪತಿಯಪ್ಪ, ಕೂಡಿ ಹೂವಪ್ಪ, ಎಂ.ಡಿ.ನಾಗರಾಜ್ ಪುರದಾಳು ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.