ಹೊಸನಗರ ; ಸಮಾಜದ ಜನರನ್ನು ಒಂದು ಗೂಡಿಸುವ ಸಲುವಾಗಿ ಧಾರ್ಮಿಕ ಕಾರ್ಯಕ್ರಮ ಮಾಡುವುದರಿಂದ ಸಾಧ್ಯ ಎಂದು ಕೋಟೆಗಾರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶಶಿಧರ್ನಾಯ್ಕ್ ಹೇಳಿದರು.
ಕೋಟೆಗಾರ್ ಯುವಕ ಸಂಘ, ಕೋಟೆಗಾರ್ ವಿದ್ಯಾವರ್ಧಕ ಸಂಘ ಹಾಗೂ ಕೋಟೆಗಾರ್ ಮಹಿಳಾ ಸಂಘದ ವತಿಯಿಂದ ಸೀತಾರಾಮಚಂದ್ರ ಸಭಾಭವನದ ಆವರಣದಲ್ಲಿ ರಾಮ ವಸಂತಪೂಜಾ, ಸಾಮೂಹಿಕ ಸತ್ಯನಾರಾಯಣ ವ್ರತ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಸಂಜೆ 7 ಗಂಟೆಗೆ ವೇದಿಕೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಸಮಾಜ ಒಗ್ಗಟ್ಟಾಗಿದ್ದರೆ ಸಮಾಜ ಸೇವೆ ಮಾಡುವ ಜನತೆ ಸಮಾಜದವರನ್ನು ಗುರುತಿಸುವ ಕಾರ್ಯ ನಡೆಯುತ್ತದೆ. ಇಲ್ಲವಾದರೆ ನಮಗಿಂತ ಬಲಿಷ್ಠವಾಗಿರುವ ಸಮಾಜದವರು ನಮ್ಮನ್ನು ತುಳಿಯುವ ಯತ್ನ ಮಾಡುತ್ತಾರೆ. ನಾವು ಹೊಸನಗರ ಪಟ್ಟಣದಲ್ಲಿ ಹೆಚ್ಚು ಜನಸಂಖ್ಯೆ ಇದ್ದರೂ ಈಗಾಗಲೇ ತುಳಿಯುವ ಸಂಚು ನಡೆಯುತ್ತಿದೆ. ನಾವೆಲ್ಲರೂ ಎಲ್ಲ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಒಂದಾಗಿ ಹೋಗೋಣ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟೆಗಾರ್ ಯುವಕ ಸಂಘದ ಅಧ್ಯಕ್ಷ ಮಾವಿನಕೊಪ್ಪ ಸತೀಶ್ ವಹಿಸಿಕೊಂಡು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಕೋಟೆಗಾರ್ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಪಿ.ಆರ್. ಸಂಜೀವ, ಯುವಕ ಸಂಘದ ಗೌರವಾಧ್ಯಕ್ಷ ಅರುಣ್ಕುಮಾರ್, ಮಹಿಳಾ ಸಂಘದ ಅಧ್ಯಕ್ಷೆ ಶ್ರೀದೇವಿ ಹನುಮಂತ್, ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಮಂಜುನಾಥ್ ಸಂಜೀವ, ರಾಘವೇಂದ್ರ, ಮಾವಿನಕೊಪ್ಪ ತಿಮ್ಮಪ್ಪ, ಗೋವಿಂದರಾಜ್, ನವೀನ್, ಪ್ರಕಾಶ್, ಆನಂದ, ಗೇರುಪುರ ವಿಜಯಕುಮಾರ್, ಎಂ.ಪಿ.ಎಂ. ನಾಗರಾಜ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಹೊಸನಗರದಲ್ಲಿ ಸತತ 35 ವರ್ಷಗಳ ಕಾಲ ಪತ್ರಿಕಾ ವಿತರಕರಾಗಿ ವರದಿಗಾರರಾಗಿ ಸೇವೆ ಸಲ್ಲಿಸಿದ ತಾಲ್ಲೂಕು ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಹೆಚ್.ಎಸ್. ನಾಗರಾಜ್, ಮಾವಿನಕೊಪ್ಪ ನಾಟಿ ವೈದ್ಯರಾದ ಪ್ರೇಮ ನಾರಾಯಣ, ಏರ್ಪೋರ್ಸ್ ಉದ್ಯೋಗಿ ಅಂಕುಶ್ ಹೆಚ್.ಪಿ ಇವರ ತಂದೆಯಾದ ಪ್ರಕಾಶ್ ಪಿಡಿಒ ಕಾವೇರಿ ದಂಪತಿಗೆ ಹೊಸನಗರದಲ್ಲಿ ಸುಮಾರು 200ಕ್ಕಿಂತಲೂ ಹೆಚ್ಚು ಹಾವುಗಳನ್ನು ಸೆರೆ ಹಿಡಿದು ಬೇರೆ ಕಡೆಗೆ ವರ್ಗಾಯಿಸಿದ ಉರಗ ತಜ್ಞ ಗಣೇಶ್ರನ್ನು ಅದ್ದೂರಿಯಾಗಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





