ಹೊಸನಗರ ; ಮಾವಿನಕೊಪ್ಪದಲ್ಲಿ ಬೀದಿಬದಿ ವ್ಯಾಪಾರಿಯೊಬ್ಬರು ಅನಧಿಕೃತ ಶೆಡ್ ನಿರ್ಮಾಣ ಮಾಡಿರುವ ವಿಷಯ ಗೊತ್ತಿದ್ದರೂ, ಪಟ್ಟಣ ಪಂಚಾಯಿತಿ ಆಡಳಿತ ಅದನ್ನು ತೆರವು ಮಾಡಿಲ್ಲ. ಉದ್ದೇಶಪೂರ್ವಕವಾಗಿಯೇ ಹಾಗೇ ಬಿಟ್ಟಿರುವಂತಿದೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಸುರೇಂದ್ರ ಕೋಟ್ಯಾನ್ ಆಕ್ಷೇಪ ವ್ಯಕ್ತಪಡಿಸಿದರು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ, 60ಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳಿಗೆ ಮಳಿಗೆ ಇಲ್ಲದಂತೆ ಮಾಡಲಾಗಿದೆ. ಅವರಿಗೆ ಹೊಸ ಜಾಗ ತೋರಿಸುವಲ್ಲಿ ಪಟ್ಟಣ ಪಂಚಾಯಿತಿ ವಿಫಲವಾಗಿದೆ. ಈಗ ನೋಡಿದರೆ ಯಾರೋ ಒಬ್ಬರಿಗೆ ಪರೋಕ್ಷವಾಗಿ ಶೆಡ್ ಕಟ್ಟಲು ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕ ಬಾವಿ, ದಾರಿ ಇರುವಲ್ಲಿಯೇ ಅಡ್ಡಲಾಗಿ ಶೆಡ್ ನಿರ್ಮಾಣ ಮಾಡಲಾಗಿದೆ ಎಂದು ಆಪಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ನಾಗಪ್ಪ, ಕೂಡಲೇ ತೆರವು ಮಾಡುವುದಾಗಿ ಭರವಸೆ ನೀಡಿದರು. ಒಂದು ವೇಳೆ ತೆರವುಗೊಳಿಸಲು ವಿಫಲರಾದಲ್ಲಿ ಎಲ್ಲಾ ಬೀದಿಬದಿ ವ್ಯಾಪಾರಿಗಳೂ ಮಾವಿನಕೊಪ್ಪದಲ್ಲಿಯೇ ಶೆಡ್ ನಿರ್ಮಿಸಿ ತಮ್ಮ ವ್ಯವಹಾರ ನಡೆಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನಿವಾಸಿ ವಿದ್ಯಾರ್ಥಿನಿಯೋರ್ವಳು ಪದವಿ ಓದುತ್ತಿದ್ದು ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಿರುವ ಕಾರಣಕ್ಕೆ ಧನ ಸಹಾಯ ಕೋರಿ ಅರ್ಜಿಯೊಂದು ಬಂದಿತ್ತು. ಅಲ್ಲದೇ ಪಿಯುಸಿ ಕಾಲೇಜು ವ್ಯಾಪ್ತಿಯಲ್ಲಿ ತ್ಯಾಜ್ಯ ಹರಿಯಲು ಪೈಪ್ ಅಳವಡಿಕೆಗೆ ಹಣ ನೀಡುವಂತೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಬಗ್ಗೆ ಚರ್ಚೆ ನಡೆದಾಗ ಸದಸ್ಯ ಅಶ್ವಿನಿಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕೇಳಿದವರಿಗೆಲ್ಲಾ ಹಣ ಕೊಡುತಾ ಹೋಗಲು ಇದೇನು ಅನಾಥಾಶ್ರಮವಾ?, ಪಟ್ಟಣ ಪಂಚಾಯಿತಿ ಆಡಳಿತಕ್ಕೆ ತನ್ನದೇ ಆದ ನಿಯಮಗಳಿವೆ. ಸಾರ್ವಜನಿಕರ ಹಣ ವಿನಿಯೋಗಿಸುವಾಗ ಜಾಗ್ರತೆಬೇಕು. ನಾಳೆ ಇನ್ನಷ್ಟು ಜನ ತಮ್ಮ ಸ್ವಂತದ ಸಮಸ್ಯೆ ಇಟ್ಟುಕೊಂಡು ಅರ್ಜಿ ಕೊಡುತ್ತಾರೆ ಅವರಿಗೆಲ್ಲಾ ಹಣ ಕೊಡುತ್ತಾ ಹೋಗಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಈ ವೇಳೆ ಸದಸ್ಯ ಗುರುರಾಜ್ ಮಾತನಾಡಿ, ಅಗತ್ಯವಿರುವ ಕಾಮಗಾರಿಗೆ, ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಧನಸಹಾಯ ನೀಡುವುದಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು.
ಚೌಡಮ್ಮ ರಸ್ತೆಯಲ್ಲಿ ವಾಹನಗಳ ಪಾರ್ಕಿಂಗ್ ಅವ್ಯವಸ್ಥೆ ಕುರಿತು ಚರ್ಚೆ ನಡೆದು, ವಾಹನ ನಿಲುಗಡೆ ಕುರಿತು ಕೆಲ ವರ್ಷಗಳ ಹಿಂದೆಯೇ ರೂಪು-ರೇಷೆ ತಯಾರಿಸಲಾಗಿತ್ತು. ಆದರೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಪೊಲೀಸರು ಅದನ್ನು ಜಾರಿಗೊಳಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸದಸ್ಯರು ಆರೋಪಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಚಂದ್ರಕಲಾ ನಾಗರಾಜ್, ಸದಸ್ಯರಾದ ಕೆ.ಎಸ್.ಗುರುರಾಜ್, ನಿತ್ಯಾನಂದ, ನೇತ್ರಾವತಿ, ಗುಲಾಬಿ ಮರಿಯಪ್ಪ, ಸಿಂಥಿಯಾ, ಗಾಯತ್ರಿ ನಾಗರಾಜ್, ಮುಖ್ಯಾಧಿಕಾರಿ ಹರೀಶ್, ಪಟ್ಟಣ ಪಂಚಾಯತಿಯ ಎಲ್ಲ ಅಧಿಕಾರಿಗಳು, ಮತ್ತಿತರರು ಇದ್ದರು.
“ಸಭೆಯಲ್ಲಿ ಚರ್ಚೆ ನಡೆಯುವ ವೇಳೆ ಸದಸ್ಯೆ ಕೃಷ್ಣವೇಣಿ ಹಾಗೂ ಗುರುರಾಜ್ ನಡುವೆ ಏರುಧ್ವನಿಯ ವಾಗ್ವಾದ ನಡೆಯಿತು. ವಿಷಯದ ಕುರಿತು ಚರ್ಚೆ ನಡೆಸುವಾಗ ಗುರುರಾಜ್ ತಮಗೆ ಅಗೌರವ ತೋರಿದ್ದಾರೆ. ಮಹಿಳಾ ಸದಸ್ಯರೊಬ್ಬರ ಜೊತೆ ಹೀಗೆ ನಡೆದುಕೊಳ್ಳುವುದು ಸರಿಯಲ್ಲ ಎಂದು ಕೃಷ್ಣವೇಣಿ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಕೆಲಕಾಲ ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.”

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





