RIPPONPETE ; ಜೈನ ಧರ್ಮಸಾರ ಪ್ರಸಾರಕ ಶ್ರೀ ಶಾಂತಿಸಾಗರ ಮುನಿವರ್ಯರವರು ವಿಶ್ವದಲ್ಲಿ ಮಾನವತಾ ಮೌಲ್ಯಗಳನ್ನು ಜನಸಾಮಾನ್ಯರಿಗೂ ಮನನ ಮಾಡುವಂತೆ ಉಪದೇಶಿಸಿದ್ದಾರೆ. ಆಚಾರ್ಯ ಶ್ರೀ 108 ಶಾಂತಿಸಾಗರ ಮುನಿಮಹಾರಾಜರ ಆಚಾರ್ಯ ಪದಾರೋಹಣ ಶತಮಾನೋತ್ಸವದ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆಯ ವತಿಯಿಂದ ಬಿಡುಗಡೆಗೊಂಡಿರುವ ಅಂಚೆ ಚೀಟಿ, ವಿವರ, ಪ್ರಥಮ ದಿವಸ ಲಕೋಟೆಯು ಐತಿಹಾಸಿಕವಾಗಿ ದಾಖಲಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯರಾಗಿರುವ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಶಾಂತಿಸಾಗರ ಮುನಿವರ್ಯರ ಭಾವಚಿತ್ರವಿರುವ ಅಂಚೆ ಚೀಟಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ಅಮ್ಮನವರ ಸನ್ನಿಧಿಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಂದರ್ಭೋಚಿತವಾಗಿದೆ ಎಂದು ಅಂಚೆ ಸಚಿವಾಲಯವನ್ನು ಅಭಿನಂದಿಸಿ ಹೆಗ್ಗಡೆಯವರು, ‘ಇಂದ್ರಧ್ವಜ ಆರಾಧನಾ ವಿಧಾನ’ವು ಜೈನ ಧರ್ಮದ ಆರಾಧನೆಯಲ್ಲಿ ಶ್ರೇಷ್ಠವಾದುದು, ಶ್ರಾವಕ-ಶ್ರಾವಿಕೆಯರು ವಿಧಾನದಲ್ಲಿ ತ್ರಿಕರಣ ಪೂರ್ವಕ ಪಾಲ್ಗೊಂಡು ಜೀವನದಲ್ಲಿ ಶ್ರೇಯಸ್ಸನ್ನು ಪಡೆಯಲೆಂದು ಡಾ. ವೀರೇಂದ್ರ ಹೆಗ್ಗಡೆಯವರು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ 25 ಸಂವತ್ಸರಗಳನ್ನು ಜನಾನುರಾಗಿಯಗಿ ಪೂರ್ಣಗೊಳಿಸಿದ ಅರಹಂತಗಿರಿ ಶ್ರೀ ಮಠದ ಪಟ್ಟಾಭಿಷಿಕ್ತ ಪೀಠಾಧೀಶರಾಗಿರುವ ಧವಳಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರನ್ನು ಹೊಂಬುಜ ಜೈನ ಮಠದ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು, ಕಂಬದಹಳ್ಳಿ, ಸೋಂದಾ, ಸಿಂಹನಗದ್ದೆ ಭಟ್ಟಾರಕ ಮಹಾಸ್ವಾಮಿಗಳವರ ಉಪಸ್ಥಿತಿಯಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಜೈನ ಸಮಾಜದ ಅನಿಲ ಸೇಠಿ, ರಾಕೇಶ ಸೇಠಿ, ರಾಜೇಂದ್ರ ಬಿಳಗಿ, ಮಹೇಂದ್ರ ಶಿಂಘಿ, ಅಶೋಕ ಸೇಠಿ, ಸಂದೇಶ ಮಹದೇವ್, ಆರ್.ಟಿ. ತವನಪ್ಪನವರು, ವಡನಬೈಲ್ ಧರ್ಮದರ್ಶಿಗಳಾದ ವೀರರಾಜಯ್ಯ ಮುಂತಾದವರ ಸಮ್ಮುಖದಲ್ಲಿ ‘ಜೈನಾಗಮಭೂಷಣ’ ಎಂಬ ಗೌರವ ಬಿರುದು ನೀಡಿ ಗೌರವಿಸಲಾಯಿತು.
ಕರ್ನಾಟಕ ಅಂಚೆ ಪ್ರಧಾನ ಅಧಿಕಾರಿ ಎಸ್. ರಾಜೇಂದ್ರ ಕುಮಾರ್, ಮಹಾವೀರ ಕುಂದೂರು ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.