ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸ್ವಾತಂತ್ರ್ಯ ಹೋರಾಟದ ಐತಿಹಾಸಿಕ ನೆಲೆಯಾಗಿದ್ದು, ಶಾಂತವೇರಿ ಗೋಪಾಲಗೌಡರು, ಕಡಿದಾಳು ಮಂಜಪ್ಪನವರು ಹಾಗೂ ಈಸೂರಿನ ಹೋರಾಟಗಾರರ ತ್ಯಾಗ ನಮಗೆ ಸದಾ ಸ್ಫೂರ್ತಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
“ಸ್ವಾತಂತ್ರ್ಯ ಎಂದರೆ ಕೇವಲ ಧ್ವಜ ಹಾರಿಸುವುದಲ್ಲ. ಪ್ರತಿಯೊಬ್ಬ ಮನುಷ್ಯನೂ ಗೌರವದಿಂದ ಬದುಕುವ ವಾತಾವರಣ ನಿರ್ಮಿಸುವುದೇ ನಿಜವಾದ ಸ್ವಾತಂತ್ರ್ಯ. ಹಸಿವು, ಬಡತನ ಮತ್ತು ಅಸಮಾನತೆಯ ವಿರುದ್ಧದ ಹೋರಾಟವೇ ಇಂದಿನ ಕರ್ತವ್ಯ,” ಎಂದು ಸಚಿವರು ಹೇಳಿದರು.
ಯುವಶಕ್ತಿಯನ್ನು ಸಮಾಜ ನಿರ್ಮಾಣದಲ್ಲಿ ತೊಡಗಿಸುವ ಉದ್ದೇಶದಿಂದ ರಾಜ್ಯಾದ್ಯಂತ 10,000 ಭಾರತ್ ಜೋಡೋ ಯುವಕ ಸಂಘಗಳನ್ನು ಸ್ಥಾಪಿಸಲು ಮಾರ್ಗಸೂಚಿ ಹೊರಡಿಸಲಾಗಿದೆ. ಪ್ರತಿ ಯುವಕ ಸಂಘಕ್ಕೆ ಸರ್ಕಾರವು ವಾರ್ಷಿಕ ₹10 ಲಕ್ಷ ಅನುದಾನವನ್ನು ಮೂರು ಕಂತುಗಳಲ್ಲಿ ನೀಡಲಿದೆ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿಯನ್ನು ವಿವರಿಸಿದ ಸಚಿವರು, ಗೃಹಲಕ್ಷ್ಮಿ ಯೋಜನೆಯಡಿ 3.78 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ₹2,363 ಕೋಟಿ ನೇರವಾಗಿ ಜಮೆಯಾಗಿದೆ. ಅನ್ನಭಾಗ್ಯ ಯೋಜನೆಯಡಿ 3.76 ಲಕ್ಷ ಪಡಿತರ ಕಾರ್ಡುದಾರರಿಗೆ 2,45,290 ಕ್ವಿಂಟಾಲ್ ಅಕ್ಕಿ ಹಂಚಿಕೆ ಮಾಡಲಾಗಿದೆ. ಶಕ್ತಿ ಯೋಜನೆಯಡಿ 8.25 ಕೋಟಿ ಮಹಿಳೆಯರು ಉಚಿತ ಪ್ರಯಾಣದ ಲಾಭ ಪಡೆದಿದ್ದಾರೆ. ಗೃಹಜ್ಯೋತಿ ಯೋಜನೆಯಡಿ 4.77 ಲಕ್ಷ ಕುಟುಂಬಗಳು ಸೌಲಭ್ಯ ಪಡೆಯುತ್ತಿದ್ದು, ವಿದ್ಯುತ್ ಸಬ್ಸಿಡಿಗಾಗಿ ಸರ್ಕಾರ ₹752 ಕೋಟಿ ವೆಚ್ಚ ಮಾಡಿದೆ. ಯುವನಿಧಿ ಯೋಜನೆಯಡಿ 12,969 ವಿದ್ಯಾರ್ಥಿಗಳಿಗೆ ₹36 ಕೋಟಿ ನೇರವಾಗಿ ಜಮೆಯಾಗಿದೆ ಎಂದರು.
ಶಿಕ್ಷಣ ಕ್ಷೇತ್ರದ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ 1,000 ಕೆಪಿಎಸ್ ಶಾಲೆಗಳು ಆರಂಭವಾಗಿದ್ದು, ಮುಂದಿನ ಹಂತದಲ್ಲಿ ಮತ್ತಷ್ಟು 1,000 ಶಾಲೆಗಳನ್ನು ತೆರೆಯಲಾಗುವುದು. ಶಿವಮೊಗ್ಗ ಜಿಲ್ಲೆಯಲ್ಲಿ ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಒಂದೇ ಸೂರಿನಡಿ ಶಿಕ್ಷಣ ನೀಡುವ 11 ಕೆಪಿಎಸ್ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಈ ಶೈಕ್ಷಣಿಕ ಸಾಲಿನಲ್ಲಿ ಹೊಸದಾಗಿ 59 ಕೆಪಿಎಸ್ ಶಾಲೆಗಳು ಮಂಜೂರಾಗಿವೆ ಎಂದು ತಿಳಿಸಿದರು.
ಜಿಲ್ಲೆಯ 222 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ನಡೆಯುತ್ತಿವೆ. ಶಾಲಾ ಕೊಠಡಿಗಳ ದುರಸ್ತಿಗೆ ₹319 ಲಕ್ಷ ಹಾಗೂ ಹೊಸ ಕೊಠಡಿಗಳ ನಿರ್ಮಾಣಕ್ಕೆ ₹1,180 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ ಎಂದು ಹೇಳಿದರು.
ಈ ಬಾರಿಯ ಪರೀಕ್ಷಾ ಫಲಿತಾಂಶಗಳ ಬಗ್ಗೆ ಸಂತಸ ವ್ಯಕ್ತಪಡಿಸಿದ ಸಚಿವರು, ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ.98.08 ಹಾಗೂ ಪಿಯುಸಿ ಫಲಿತಾಂಶ ಶೇ.92.25 ದಾಖಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ.96.5ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದರು.
ರೈತರ ಹಿತರಕ್ಷಣೆಗೆ ಮುಖ್ಯಮಂತ್ರಿಗಳ ರೈತ ಚೈತನ್ಯ ಮತ್ತು ರೈತ ಮಿತ್ರ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅತಿವೃಷ್ಟಿ, ಬೆಳೆ ಹಾನಿ, ಕುಡಿಯುವ ನೀರು ಹಾಗೂ ಗ್ರಾಮೀಣ ಮೂಲಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ತ್ವರಿತ ಕ್ರಮ ಕೈಗೊಂಡಿದೆ ಎಂದರು.
ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದಡಿ ₹250 ಕೋಟಿ ಅನುದಾನ ಮಂಜೂರಾಗಿದೆ. ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ₹1,005 ಕೋಟಿ ವೆಚ್ಚದಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಸಾಗರ ತಾಲೂಕಿನ ಆನಂದಪುರ ಯೋಜನೆಯ ₹100.94 ಕೋಟಿ ಅಂದಾಜಿನ ಕಾಮಗಾರಿ ಅಂತಿಮ ಹಂತದಲ್ಲಿದೆ ಎಂದು ಅವರು ಹೇಳಿದರು.

ಮೆಗ್ಗಾನ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕೆಲಸ ನಡೆಯುತ್ತಿದ್ದು, ಕ್ಯಾನ್ಸರ್ ಆಸ್ಪತ್ರೆ, ಹೃದ್ರೋಗ ವಿಭಾಗ ಹಾಗೂ ತೀವ್ರ ನಿಗಾ ಘಟಕಗಳನ್ನು ಬಲಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಶರಾವತಿ ಸಂತ್ರಸ್ತರು ಹಾಗೂ ಬಗರ್ ಹುಕುಂ ಸಾಗುವಳಿದಾರರ ಹಕ್ಕುಗಳ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಆದ್ಯತೆ ನೀಡಿದೆ. ರೈತರು, ಬಡವರು ಮತ್ತು ಹಿಂದುಳಿದವರ ಶ್ರೇಯೋಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಹೇಳಿದರು.
ಶಿವಮೊಗ್ಗ ಜಿಲ್ಲೆಯಲ್ಲಿ 1990ರಲ್ಲಿ 12,000 ಹೆಕ್ಟೇರ್ ಇದ್ದ ಅಡಿಕೆ ಬೆಳೆ ಇಂದು 1.4 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಿಸಿದೆ. ಜನಪರ ಯೋಜನೆಗಳ ಮೂಲಕ ಜನರ ಬದುಕಿನಲ್ಲಿ ಬದಲಾವಣೆ ತಂದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಹಾದಿ ಸದಾ ಸ್ಫೂರ್ತಿಯಾಗಿದೆ ಎಂದು ಅವರು ಸ್ಮರಿಸಿದರು.
“ನಾನು ಬಂಗಾರಪ್ಪನವರ ಮಗ ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ. ಆದರೆ ಅದಕ್ಕಿಂತ ಹೆಚ್ಚಾಗಿ ಅದು ದೊಡ್ಡ ಜವಾಬ್ದಾರಿ. ಬಡವರು, ಶೋಷಿತರು ಮತ್ತು ಶಿವಮೊಗ್ಗದ ಜನರ ಸೇವೆ ಮಾಡುವ ಅವರ ಹಾದಿಯಲ್ಲೇ ನಡೆಯುವುದು ನನ್ನ ಕರ್ತವ್ಯ,” ಎಂದು ಸಚಿವರು ಹೇಳಿದರು.
ಸ್ವಾತಂತ್ರ್ಯೋತ್ಸವದ ಅಂಗವಾಗಿ 29 ಕವಾಯತು ತುಕಡಿಗಳು ಆಕರ್ಷಕ ಪಥಸಂಚಲನ ನಡೆಸಿದವು. ವಿದ್ಯಾರ್ಥಿಗಳ ದೇಶಭಕ್ತಿ ಗೀತೆಗಳ ನೃತ್ಯ ಪ್ರದರ್ಶನ ಗಮನ ಸೆಳೆಯಿತು. ವಿವಿಧ ಶಾಲಾ-ಕಾಲೇಜುಗಳಿಂದ ಸುಮಾರು 18 ಸಾವಿರ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶಿಸ್ತಿನ ಕವಾಯತು ವಿಭಾಗದಲ್ಲಿ ಕಸ್ತೂರಿಬಾ ಬಾಲಕಿಯರ ಪ.ಪೂ. ಪ್ರೌಢಶಾಲೆಯ ಭಾರತ ಸೇವಾದಳ ವಿಭಾಗ ಪ್ರಥಮ, ಜಾವಳ್ಳಿಯ ಜ್ಞಾನದೀಪ ಪ್ರೌಢಶಾಲೆ ದ್ವಿತೀಯ ಹಾಗೂ ಮೊರಾರ್ಜಿ ದೇಸಾಯಿ ಬಾಲಕರ ವಸತಿ ಶಾಲೆ ತೃತೀಯ ಬಹುಮಾನ ಪಡೆದವು.
ಅತ್ಯುತ್ತಮ ಸಾಂಸ್ಕೃತಿಕ ನೃತ್ಯ ಪ್ರದರ್ಶನದಲ್ಲಿ ಕಿರಣ ಕೇಂದ್ರ ವಿದ್ಯಾಲಯ ಪ್ರಥಮ, ಪೊಲೀಸ್ ಪಬ್ಲಿಕ್ ಶಾಲೆ ದ್ವಿತೀಯ ಹಾಗೂ ಮೌಂಟ್ ಇನ್ನೋವೇಟಿವ್ ಶಾಲೆ ತೃತೀಯ ಸ್ಥಾನ ಪಡೆದವು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್, ಬಲ್ಕೀಶ್ ಬಾನು, ಡಾ. ಧನಂಜಯ ಸರ್ಜಿ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯಿತಿ ಸಿಇಒ ಎನ್. ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ., ಮಹಾನಗರಪಾಲಿಕೆ ಆಯುಕ್ತ ಮಾಯಣ್ಣ ಗೌಡ, ಜನಪ್ರತಿನಿಧಿಗಳು, ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

