VISL ಕಾರ್ಖಾನೆ ಮುಚ್ಚುವ ಸರ್ಕಾರದ ನಿರ್ಧಾರ ಖಂಡಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಭದ್ರಾವತಿ ಬಂದ್ ಸಂಪೂರ್ಣ ಯಶಸ್ವಿ
ಭದ್ರಾವತಿ : ವಿಐಎಸ್‌ಎಲ್ ಕಾರ್ಖಾನೆಯನ್ನು ಮುಚ್ಚುವ ನಿರ್ಧಾರ ಕೈಬಿಟ್ಟು ಬಂಡವಾಳ ತೊಡಗಿಸಿ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಬೇಕೆಂದು ಆಗ್ರಹಿಸಿ ಕಾರ್ಖಾನೆಯ ಸಂಘಟನೆ ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿದ್ದ ಭದ್ರಾವತಿ ಬಂದ್ ಸಂಪೂರ್ಣ ಯಶಸ್ವಿಯಾಯಿತು.

ನಗರದ ಜೀವನಾಡಿಯಾಗಿರುವ ಕಾರ್ಖಾನೆಯ ಉಳಿವಿಗಾಗಿ ಕರೆ ನೀಡಿದ್ದ ಭದ್ರಾವತಿ ಬಂದ್ ಗೆ ಬಹುತೇಕ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಬೆಂಬಲ ನೀಡಿದ್ದರು. ಬೆಳಗ್ಗೆಯಿಂದಲೇ ಬಂದ್ ಕರೆಗೆ ಒಳ್ಳೆಯ ಪ್ರತಿಕ್ರಿಯೆ ದೊರೆಯಿತು. ಬಸ್ ನಿಲ್ದಾಣದ ಎದುರಿನ ವೃತ್ತ ಹಾಗೂ ಅಂಡರ್ ಬ್ರಿಡ್ಜ್ ಬಳಿಯ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನಾಕಾರರು ಟೈಯರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.
ಬಂದ್ ಗೆ ಸ್ವಯಂಪ್ರೇರಿತಾಗಿ ವ್ಯಾಪಾರಸ್ಥರು ಬೆಂಬಲ ನೀಡಿದ್ದ ಹಿನ್ನಲೆಯಲ್ಲಿ ಬೆಳಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಅಲ್ಲದೇ, ಬಸ್ ನಿಲ್ದಾಣ ಹಾಗೂ ಅಂಬೇಡ್ಕರ್ ವೃತ್ತ ಬಂದ್ ಮಾಡಿದ ಹಿನ್ನಲೆಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು. ಇದರ ಬಿಸಿ ಸಾರ್ವಜನಿಕರಿಗೆ ತಟ್ಟಿತ್ತು. ಬಸ್, ಆಟೋ ಸಂಚಾರ ನಗರದಲ್ಲಿ ಕಂಡುಬರಲಿಲ್ಲ. ಶಾಲಾ, ಕಾಲೇಜ್‌ಗಳನ್ನು ಬಂದ್ ಮಾಡಲಾಗಿತ್ತು. ಕಚೇರಿಗಳಲ್ಲಿ ಜನಸಂದಣಿ ಇರಲಿಲ್ಲ.
