ಅದ್ದೂರಿಯಾಗಿ ಜರುಗಿದ ಕೆಂಚನಾಲ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ

0 283

ರಿಪ್ಪನ್‌ಪೇಟೆ: ಪುರಾಣ ಪ್ರಸಿದ್ದ ಶ್ರೀ ಕೆಂಚನಾಲ ಮಾರಿಕಾಂಬ ದೇವಿಯ ಬೇಸಿಗೆ ಕಾಲದ ಜಾತ್ರಾ ಮಹೋತ್ಸವವು ವಿಜೃಂಭಣೆಯೊಂದಿಗೆ ಅದ್ದೂರಿಯಾಗಿ ಜರುಗಿತು.

ಇಂದು ಮುಂಜಾನೆ ಮಸರೂರು ತವರು ಮನೆಯಿಂದ ದೇವಿಯ ಮೆರವಣಿಗೆ ಕೆಂಚನಾಲದ ಗಂಡನ ಮನೆಗೆ ಭಕ್ತ ಸಮೂಹದ ಜಯಘೋಷಣೆ ಭಕ್ತಿಯ ಪರಕಾಷ್ಟತೆಯೊಂದಿಗೆ ಭರಮಾಡಿಕೊಳ್ಳಲಾಯಿತು.

ಬೆಳಗ್ಗೆಯಿಂದಲೇ ಭಕ್ತಾಧಿಗಳು ಕಾಲು ನಡಿಗೆ ಹಾಗೂ ಸಾವಿರಾರು ವಾಹನಗಳ ಮೂಲಕ ಶ್ರೀ ಮಾರಿಕಾಂಬಾ ಗುಡಿಗೆ ಆಗಮಿಸಿ ಹರಕೆ ಕಾಣಿಕೆ, ಹಣ್ಣು-ಕಾಯಿ ಕೊಡುವ ಮೂಲಕ ಪೂಜೆ ಸಲ್ಲಿಸಿದರು.


ಸುಮಾರು 600 ವರ್ಷಗಳ ಇತಿಹಾಸವಿರುವ ಕೆಂಚನಾಲ ಮಾರಿಕಾಂಬಾ ದೇವಿಯ ಜಾತ್ರೆಯು ವರ್ಷದಲ್ಲಿ ಎರಡು ಬಾರಿ ಆಚರಿಸಲಾಗುತ್ತಿದ್ದು ಮಳೆಗಾಲದಲ್ಲಿ ಮಂಗಳವಾರ ಹಾಗೂ ಬೇಸಿಗೆಯಲ್ಲಿ ಬುಧವಾರದಂದು ನಡೆಯುತ್ತದೆ‌. ಕರ್ನಾಟಕದ ಯಾವುದೇ ಮೂಲೆಯಲ್ಲಿಯೂ ಮಾರಿಕಾಂಬ ದೇವಿ ಜಾತ್ರೆ ವರ್ಷದಲ್ಲಿ ಎರಡು ಬಾರಿ ಆಚರಣೆ ಮಾಡುವುದಿಲ್ಲ. ಆದರೆ ಕೆಂಚನಾಲದಲ್ಲಿ ಮಾತ್ರ ನಡೆಯುತ್ತದೆಂದು ಹಲವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

ಮದುವೆಯಾಗದವರು, ಸಂತಾನ ಭಾಗ್ಯಕ್ಕಾಗಿ, ಜನ-ಜಾನುವಾರುಗಳಿಗೆ ಮತ್ತು ಫಸಲಿಗೆ ರೋಗ ರುಜಿನೆ ಬಾರದಂತೆ ರಕ್ಷಣೆ ಮಾಡುವಂತೆ ಪ್ರಾರ್ಥಿಸಿ ಹರಕೆ ಮಾಡಿಕೊಳ್ಳುವುದು ಇಲ್ಲಿನ ವಿಶೇಷವೆಂದರು.

ಹಲವು ಮನೆತನ, ಸಹಸ್ರಾರು ಮನೆಗಳ ಆರಾಧ್ಯ ದೇವತೆ ಶ್ರೀ ಮಾರಿಕಾಂಬಾ ದೇವಿಗೆ ಜಾತ್ರೆ ಸಮಯದಲ್ಲಿ ಹಿಂದುಗಳಲ್ಲದೇ ಮುಸಲ್ಮಾನರು, ಕ್ರಿಶ್ಚಿಯನ್ನರು ಹಾಗೂ ಜೈನ ಧರ್ಮದವರೂ ಹರಕೆ ಕಾಣಿಕೆ, ಹಣ್ಣು-ಕಾಯಿ ಪೂಜೆ ಸಲ್ಲಿಸುವುದು ವಿಶೇಷ.

ಜಾತ್ರಾ ಮಹೋತ್ಸವದಲ್ಲಿ ಹೊಸನಗರ ತಹಶೀಲ್ದಾರ್ ರಶ್ಮಿ ಹೆಚ್.ಜಿ. ಗ್ರೇಡ್ 2 ತಹಶೀಲ್ದಾರ್ ರಾಕೇಶ್ ಪ್ರಾನ್ಸಿಸ್ ಬ್ರಿಟ್ಟೋ, ಮಂಜುನಾಥ ಹುಂಚದಕಟ್ಟೆ ಇವರು ಭಾಗವಹಿಸಿ ದೇವಿಗೆ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನ ಧರ್ಮದರ್ಶಿ ಸಮಿತಿಯವರು ರಿಪ್ಪನ್‌ಪೇಟೆ ನಾಡಕಛೇರಿಯ ಉಪತಹಶೀಲ್ದಾರ್ ಮತ್ತು ಸಿಬ್ಬಂದಿ ವರ್ಗ, ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿ ರಕ್ಷಣಾ ಇಲಾಖೆ ಹಾಜರಿದ್ದರು.

ಇಂದು ನಡೆದ ಜಾತ್ರಾ ಮಹೋತ್ಸವಕ್ಕೆ ಸುಮಾರು 25 ಸಹಸ್ರಕ್ಕೂ ಅಧಿಕ ಭಕ್ತರು ಆಗಮಿಸಿದ್ದರು.

Leave A Reply

Your email address will not be published.

error: Content is protected !!