ತುಂಗಾ ಭದ್ರ ಸಕ್ಕರೆ ಕಾರ್ಖಾನೆ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ; ಕಿಮ್ಮನೆ ರತ್ನಾಕರ್

0 211

ಶಿವಮೊಗ್ಗ : ತುಂಗಾ ಭದ್ರ ಸಕ್ಕರೆ ಕಾರ್ಖಾನೆ ರೈತರ ಪರವಾಗಿ ಸರ್ಕಾರ ಇದೆ. ಯಾವುದೆ ಕಾರಣಕ್ಕೂ ಅವರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ರೈತರಿಗೆ ಭರವಸೆ ನೀಡಿದರು.

ಅವರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತುಂಗಾಭದ್ರ ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದಂತೆ ಇದೀಗ ಹಲವು ಗೊಂದಲಗಳು ಎದ್ದಿವೆ. ಹಲವರು ಇದನ್ನು ರಾಜಕೀಯಗೊಳಿಸಲು ಬಳಸಿಕೊಳ್ಳುತ್ತಿದ್ದಾರೆ. ಆದರೆ, ಸರ್ಕಾರ ಹಲವು ವರ್ಷಗಳಿಂದ ಅಲ್ಲಿ ವಾಸಿಸುತ್ತಿರುವ ಸಾಗುವಳಿ ಮಾಡುತ್ತಿರುವ ರೈತರನ್ನು, ನಿವಾಸಿಗಳನ್ನು ಹೊರಹಾಕಲು ಬಿಡುವುದಿಲ್ಲ. ಅದು ಅಷ್ಟು ಸುಲಭವು ಅಲ್ಲ. ಯಾವುದೇ ಆತಂಕ ಪಡಬೇಕಾಗಿಲ್ಲ ಈಗಾಗಲೇ ಜಿಲ್ಲಾ ಉಸ್ತುವಾರಿ‌ ಸಚಿವರು ಈ ಬಗ್ಗೆ ಗಮನಹರಿಸಿದ್ದಾರೆ ಎಂದರು.

ಈ ವಿಷಯ ಮುಖ್ಯವಾಗಿ ನ್ಯಾಯಾಲಯದ ಹಂತದಲ್ಲಿದೆ. ರೈತರ ಪರವಾಗಿ ಮತ್ತು ಸ್ವಲ್ಪ ವಿರೋಧವಾಗಿ ಎರಡು ತೀರ್ಪುಗಳು ಬಂದಿವೆ. ಈ ಎರಡು ತೀರ್ಪುಗಳನ್ನು ಒಟ್ಟಿಗೆ ಸೇರಿಸಬೇಕಾಗಿದೆ. ಇದನ್ನು ನ್ಯಾಯಾಲಯದ ಗಮನಕ್ಕೆ ತರಬೇಕಾಗಿದೆ. ಈಗಾಗಲೇ ಹಲವು ರೈತರಿಗೆ ಸಾಗುವಳಿ ಚೀಟಿ ನೀಡಲಾಗಿದೆ. ಮತ್ತು ಈ ಜಾಗಗಳಲ್ಲಿ ಕಾಡ ಕಚೇರಿ, ಆರ್‌ಟಿಓ ಕಚೇರಿ, ದೇವಸ್ಥಾನಗಳು, ಗ್ರಾ.ಪಂ.ಕಟ್ಟಡಗಳು, ವಾಸದ ಕಟ್ಟಡಗಳು ಇವೆ. ಇವೆಲ್ಲವನ್ನು ಕಂಪನಿಯ ಆಡಳಿತ ಮಂಡಳಿಗೆ ಹೇಗೆ ಕೊಡಲು ಸಾಧ್ಯ ಆ ಪ್ರಶ್ನೆಯೇ ಇಲ್ಲ, ರೈತರ ಪರವಾಗಿ ಸರ್ಕಾರ ರಕ್ಷಣೆ ಕೊಡಲಿದೆ ಎಂದರು.

ಸದಾಶಿವಪುರ ಸರ್ವೆ ನಂ.ಗೆ ಸೇರಿದ ಸಾಗುವಳಿ ಭೂಮಿಯನ್ನು ಸುಮಾರು 166 ಎಕರೆ ಜಾಗವನ್ನು ಈಗಾಗಲೇ ಗ್ರ್ಯಾಟ್ ಮಾಡಲಾಗಿದೆ. ಆ ಜನರ ಎಲ್ಲಾ ವಿವರಗಳನ್ನು ಕಲೆ ಹಾಕಲಾಗಿದೆ. ಸುಮಾರು 220 ಜನರು ತಮ್ಮ ವಿವರಗಳನ್ನು ನೀಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಹಲವು ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಒಟ್ಟಾರೆ ಇಲ್ಲಿಯ ಜನರನ್ನು ಒಕ್ಕಲೆಬ್ಬಿಸಲು ಹಾಗುವುದಿಲ್ಲ ಎಂದರು.

ಕಾರ್ಖಾನೆ ಪ್ರಾರಂಭವಾದಾಗ ಅವರಿಗೆ ಆಗಿನ ಸರ್ಕಾರ ಸುಮಾರು 50ಎಕರೆ ಜಾಗವನ್ನು ಕಾರ್ಖಾನೆ ಕಟ್ಟಲು ನೀಟಿತ್ತು. ಆಗೆಯೇ ಕಬ್ಬು ಬೆಳೆಯಲು 1200 ಎಕರೆಯನ್ನು ಲೀಜ್‌ಗೆ ಕೊಡಲಾಗಿತ್ತು. ಹೀಗೆ ಗ್ಯಾಂಟ್ ಮತ್ತು ಲೀಜ್‌ನ್ನು ಕೊಟ್ಟ ಮೇಲೆ ಕಾರ್ಖಾನೆ ನಷ್ಟಕ್ಕೆ ಒಳಗಾಯಿತು. ಆಗಲೇ ಕಬ್ಬು ಬೆಳೆಗಾರರ ಸಂಘ ಹುಟ್ಟುಕೊಂಡಿತ್ತು. ಅದು ಮುಂದೆ ರೈತ ಸಂಘವಾಯಿತು ಎಂದರು.

ಸರ್ಕಾರ ಕೂಡ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ 1954, 55,57,62,63ರ ಇಸವಿಗಳಲ್ಲಿ ಲೀಜ್‌ಗೆ ಕೊಟ್ಟಿದೆ. ಈ ಲೀಜ್ ಕೂಡ ಮುಗಿದಿದೆ. ಹಾಗೆಯೇ ಯಾವುದೇ ಸರ್ಕಾರವಾಗಲಿ ಒಂದು ಕಂಪನಿಗೆ 50 ಎಕರೆ ಮೇಲೆ ಕೊಡಲು ಬರುವುದೇ ಇಲ್ಲ. ಈಗ ಸಕ್ಕರೆ ಕಾರ್ಖಾನೆಯವರು ಮದ್ರಾಸ್ ಕೋರ್ಟ್‌ನ ತೀರ್ಪಿನ ಅನ್ವಯ ನಮ್ಮದು ಎಂದು ಹೇಳುತ್ತಾರೆ. ಆದರೆ ಇದಕ್ಕೆ ವಿರುದ್ಧವಾದ ತೀರ್ಪು ಕೂಡ ಇದೆ, ಅಂದರೇ ರೈತರ ಪರವಾಗಿ ತೀರ್ಪುಗಳು ಇದೆ. ಈ ತೀರ್ಪುಗಳು ಕೂಡ ನ್ಯಾಯಾಲಯ ಗಮನಕ್ಕೆ ತರಬೇಕಾಗಿದೆ. ಹಾಗಾಗಿ ನ್ಯಾಯಾಲಯದಿಂದ ಖಂಡಿತ ತೀರ್ಪು ಸಿಗುತ್ತದೆ ಮತ್ತು ಯಾವುದೇ ರೈತರನ್ನು ಒಕ್ಕಲೆಬ್ಬಿಸಲು ಬರುವುದಿಲ್ಲ ಎಂದರು.

ಬಿಜೆಪಿ ಕೆಲವು ಮುಖಂಡರು ಈ ಬಗ್ಗೆ ಗೊಂದಲ ಹುಟ್ಟಿಸುತ್ತಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ವ್ಯಕ್ತಿಗತ ಆರೋಪ ಮಾಡಿದ್ದಾರೆ. ಅದು ಸರಿಯಲ್ಲ. ಆಡಳಿತ ಸರ್ಕಾರಕ್ಕೆ ಪ್ರಶ್ನೆ ಕೇಳುವುದು ಸಹಜವೇ, ಅದಕ್ಕೆ ಉತ್ತರ ಕೊಡುವುದು ನಮ್ಮ ಕರ್ತವ್ಯವಾಗಿದೆ. ಯಾವುದೇ ಕಾರಣಕ್ಕೂ ಈ ತಿಂಗಳ 12ಕ್ಕೆ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ. ಇದು ಉಹಾಪೋಹದ ಮಾತಷ್ಟೇ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್.ಪ್ರಸನ್ನಕುಮಾರ್, ಎನ್. ರಮೇಶ್, ಎಸ್.ಪಿ. ದಿನೇಶ್, ಚಂದ್ರಭೂಪಾಲ್, ಕಲಗೋಡು ರತ್ನಾಕರ್, ಜಿ.ಡಿ.ಮಂಜುನಾಥ್, ದೇವೇಂದ್ರಪ್ಪ, ಧರ್ಮರಾಜ್, ವಿಜಯಕುಮಾರ್(ದನಿ) ಸೇರಿದಂತೆ ಹಲವರಿದ್ದರು.

Leave A Reply

Your email address will not be published.

error: Content is protected !!