Hosanagara | ಮದುವೆ ನಿಶ್ಚಿತಾರ್ಥದ ಮುಂಚೆ ರಕ್ತದಾನಕ್ಕೆ ಮುಂದಾಗಿ ಧನ್ಯತೆ ಮೆರೆದ ಯುವಕ

0 772

ಹೊಸನಗರ : ತನ್ನ ಮದುವೆ ನಿಶ್ಚಿತಾರ್ಥಕ್ಕೆ ಕೆಲವೇ ಗಂಟೆಗಳ ಮುಂಚೆ ಸ್ವಯಂ ಪ್ರೇರಿತನಾಗಿ ರಕ್ತದಾನ ಮಾಡುವ ಮೂಲಕ ಯುವಕ ವಿಶ್ವನಾಥ ಇತರರಿಗೆ ಮಾದರಿ ಆಗಿದ್ದಾರೆ.

ತಾಲೂಕಿನ ರಾಮಚಂದ್ರಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಂಭತ್ತಿ ಗ್ರಾಮದ ವಾಸಿ ವಿಶ್ವನಾಥ, ವೃತ್ತಿಯಲ್ಲಿ ವಾಹನ ಚಾಲಕನಾಗಿದ್ದು ಪೊಲೀಸ್ ಇಲಾಖೆ ಸಿಬ್ಬಂದಿಗಳ ಕರೆಗೆ ಓಗೊಟ್ಟು ಭಾನುವಾರ ಶಿವಮೊಗ್ಗದ ಆಶಾಜ್ಯೋತಿ ಸ್ವಯಂ ಪ್ರೇರಿತರಕ್ತದಾನ ಸಂಸ್ಥೆ ಹಾಗೂ ತೀರ್ಥಹಳ್ಳಿ ಹೆಚ್‌ಡಿಎಫ್‌ಸಿ ಬ್ಯಾಂಕ್‌ಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದ್ದು ವಿಶೇಷವಾಗಿತ್ತು.

ರಕ್ತದಾನಿ ಸಿಪಿಐ ಗುರಣ್ಣ ಎಸ್ ಹೆಬ್ಬಾಳ್ ಮಾತನಾಡಿ, ಅಗತ್ಯ ಹಾಗೂ ಅನಿವಾರ್ಯ ಸಂದರ್ಭಗಳಲ್ಲಿ ರಕ್ತದಾನವು ಅವಘಡಕ್ಕೀಡದವರ ಜೀವ ಕಾಪಾಡುತ್ತದೆ. ಯುವ ಜನತೆ ರಕ್ತದಾನದಂತ ಮಹತ್ಕಾರ್ಯಕ್ಕೆ ಮುಂದಾಗಬೇಕೆಂದು ಕಿವಿಮಾತು ಹೇಳಿದರು.

ತೀರ್ಥಹಳ್ಳಿ ಹೆಚ್‌ಡಿಎಫ್‌ಸಿ ಬ್ಯಾಂದಕ್ನ ವ್ಯವಸ್ಥಾಪಕಿ ರಶ್ಮಿ ಶೆಟ್ಟಿ ಮಾತನಾಡಿ, ರಕ್ತದಾನದಂತ ಸಿಎಸ್‌ಆರ್ ಕಾರ್ಯಕ್ರಮಗಳಿಗೆ ಬ್ಯಾಂಕ್ ಉತ್ತೇಜನ ನೀಡುತ್ತಿದ್ದು, ಬ್ಯಾಂಕ್ ಆರಂಭಗೊಂಡು ಹದಿನೈದು ವರ್ಷಗಳು ಸಂದಿರುವ ಹಿನ್ನಲೆಯಲ್ಲಿ ಬ್ಯಾಂಕಿನ ಸಹಯೋಗದಲ್ಲಿ ರಾಜ್ಯದ ವಿವಿಧೆಡೆ ನಡೆದ ಶಿಬಿರಗಳಲ್ಲಿ ಸುಮಾರು ಐವತ್ತು ಸಾವಿರ ಯೂನಿಟ್ ರಕ್ತ ಸಂಗ್ರಹ ಆಗಿದ್ದು, ಬ್ಯಾಂಕ್ ಸಮಾಜಮುಖಿ ಕಾರ್ಯಕ್ರಮಗಳ ಪರ ದಾಪುಗಾಲು ಹಾಕುತ್ತಿದೆ ಎಂಬುದನ್ನು ಇದು ಸಾಕ್ಷೀಕರಿಸಿದೆ ಎಂದರು.

ಹಲವಾರು ಆರೋಗ್ಯವಂತ ಯುವಕರು ಈ ರಕ್ತದಾನ ಶಿಬಿರದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ನಿರ್ದೇಶನದಂತೆ, ತೀರ್ಥಹಳ್ಳಿ ಡಿವೈಎಸ್‌ಪಿ ಗಜಾನನ ಸತಾರ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಕೆ.ವೈ.ಶಿವಾನಂದ ಸೂಚನೆ ಮೇರೆಗೆ, ಪರಿಸರಾಸಕ್ತ, ರಕ್ತದಾನ ಶಿಬಿರದ ಪ್ರೇರಕಶಕ್ತಿ, ಭದ್ರಾವತಿ ಸಂಚಾರಿ ವಿಭಾಗದ ಹೆಡ್ ಕಾನ್ಸ್‌ಟೇಬಲ್ ಹಾಲೇಶಪ್ಪ ಸಲಹೆಯಂತೆ ಶಿಬಿರ ನಡೆಯಿತು.

ಶಿಬಿರದಲ್ಲಿ ಆಶಾ ಜ್ಯೋತಿ ಸಂಸ್ಥೆಯ ಡಾ. ಹುಲುಮನಿ, ಸ್ವಾಮಿ, ಪಿಆರ್‌ಓ ರವಿಕುಮಾರ್, ಉಲ್ಲಾಸ್, ಅಜ್ಮತ್, ಶಶಾಂಕ್, ರೂಹಿನಾ, ಬ್ಯಾಂಕಿನ ಸಿಬ್ಬಂದಿ ವಿಮಲ, ಪೊಲೀಸ್ ಸಿಬ್ಬಂದಿಗಳಾದ ವೀರೇಶ್, ತೀರ್ಥೇಶ್, ಗಂಗಣ್ಣ, ರಾಘವೇಂದ್ರ, ಎಎಸ್‌ಐ ಶಿವಪುತ್ರ ಸೇರಿದಂತೆ ಹಲವರು ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು.

Leave A Reply

Your email address will not be published.

error: Content is protected !!