ಸಂಸತ್‌ನಲ್ಲಿ ನಡೆದ ಸ್ಮೂಕರ್ ಬಾಂಬ್ ಘಟನೆ ಬಗ್ಗೆ ಬಿಜೆಪಿಯವರು ತುಟಿ ಪಿಟಿಕ್ ಎನ್ನುತ್ತಿಲ್ಲ ; ಹೆಚ್.ಎಸ್ ಸುಂದರೇಶ್

0 213

ಶಿವಮೊಗ್ಗ : ಸಂಸತ್‌ನಲ್ಲಿ ನಡೆದ ಸ್ಮೂಕರ್ ಬಾಂಬ್ ಘಟನೆಯ ಬಗ್ಗೆ ಪ್ರಧಾನಿಯಾಗಲಿ, ಬಿಜೆಪಿಯ (BJP) ಸಂಸದರು, ಶಾಸಕರಾಗಲಿ ತುಟಿಪಿಟಿಕ್ ಎನ್ನುತ್ತಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಎಸ್. ಸುಂದರೇಶ್ ಆರೋಪಿಸಿದರು.


ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಘಟನೆ ನಡೆದು 4,5 ದಿನಗಳಾಗಿವೆ. ಇದೊಂದು ಗಂಭೀರ ವಿಷಯವಾಗಿದೆ. ಸಂಸತ್ ಮೇಲೆ ದಾಳಿ ಎನ್ನುವುದು ಸುಲಭದ ವಿಷಯವೇ, ಕೇಂದ್ರ ಸರ್ಕಾರ ಇದನ್ನೇಕೆ ಗಂಭೀರವಾಗಿ ತೆಗೆದುಕೊಂಡಿಲ್ಲ.  ಬಿಜೆಪಿಗರು ಈ ಬಗ್ಗೆ ಚಕಾರಕೂಡ ಎತ್ತುತ್ತಿಲ್ಲ. ಮೋದಿ, ಅಮಿತ್‌ಷಾ ಸೇರಿದಂತೆ ಎಲ್ಲರೂ ಮೌನವಾಗಿದ್ದಾರೆ ಎಂದರು.


ಇಡೀ ಘಟನೆಯನ್ನು ನೋಡಿದರೆ ಸಂಶಯ ಬರುತ್ತದೆ. ಸಂಸತ್‌ಗೆ ಭದ್ರತೆಯೇ ಇಲ್ಲ ಅನಿಸುತ್ತದೆ. ಈ ಘಟನೆಯನ್ನು ತನಿಖಾ ಸಂಸ್ಥೆಗಳಿಗೆ ನೀಡಬಾರದು ಏಕೆಂದರೆ ತನಿಖಾ ಸಂಸ್ಥೆಗಳೆಲ್ಲ ಕೇಂದ್ರದ ಅಧೀನದಲ್ಲಿವೆ. ಆದ್ದರಿಂದ ಸುಪ್ರೀಂ ಕೋರ್ಟ್ ನಿವೃತ್ತ ಅಥವಾ ಹಾಲಿ ನ್ಯಾಯಾಧೀಶರಿಂದ ವಿಡಿಯೋ ಕಾನ್ಸ್ಫೆರೆನ್ಸ್ ಮೂಲಕ ಇಡೀ ರಾಷ್ಟ್ರಕ್ಕೆ ಗೊತ್ತಾಗುವಂತೆ ನಡೆಸಬೇಕು ಎಂದು ಒತ್ತಾಯಿಸಿದರು.


ಮೈಸೂರಿನ ಮನೋರಂಜನ್ ಸೇರಿದಂತೆ ಸುಮಾರು 6 ಜನರ ತಂಡ ಇದರ ಹಿಂದೆ ಇದೆ. ಮೈಸೂರನ್ನೇ ಇವರು ಕೇಂದ್ರವಾಗಿ ಇಟ್ಟುಕೊಂಡಿದ್ದಾರೆ. ಸಂಸದ ಪ್ರತಾಪ್ ಸಿಂಹ ಮನೋರಂಜನಿಗೆ ಪಾಸ್ ನೀಡಿದ್ದಾನೆ. ಹಾಗೆಯೇ ಇನ್ನೊಬ್ಬನಿಗೆ ಇವರ ಕಚೇರಿಯಿಂದಲೇ ಪಾಸ್ ಹೋಗಿದೆ. ಇದರ ಉದ್ದೇಶ ಏನು ? ಎಂದು ಪ್ರಶ್ನೆ ಮಾಡಿದರು.


ರಾಹುಲ್‌ಗಾಂಧಿಯವರನ್ನು ಅಮಾನತ್ತು ಮಾಡುವಾಗ ಒಂದು ಕ್ಷಣವು ಯೋಚಿಸಲಿಲ್ಲ. ನ್ಯಾಯಾಲಯದ ತೀರ್ಪು ಕೈ ಸೇರುವ ಮುನ್ನವೇ ಸಂಸದಿನಿಂದ ಹೊರ ಹಾಕಲಾಗಿತ್ತು. ಈಗ ಇಂತಹ ಘಟನೆಗೆ ಕಾರಣವಾದ ಪ್ರತಾಪ ಸಿಂಹ ಹಾಗೂ ಇತರರನ್ನು ಏಕೆ ವಜಾ ಮಾಡಿಲ್ಲ ಎಂದು ಪ್ರಶ್ನೆ ಮಾಡಿದರು.


ಆಕಸ್ಮಾತ್ ಈ ಪಾಸ್‌ನ್ನು ಕಾಂಗ್ರೆಸ್ ಸಂಸದ ಕೊಟ್ಟಿದ್ದಾರೆ ಅಥವಾ ದಾಳಿಯಲ್ಲಿ ಅನ್ಯಕೋಮಿನ ವ್ಯಕ್ತಿ ಭಾಗಿಯಾಗಿದ್ದರೆ, ಇಡೀ ದೇಶಕ್ಕೆ ಬೆಂಕಿ ಹಚ್ಚುವಂತಹ ಪ್ರತಿಭಟನೆಗಳು ನಡೆಯುತ್ತಿದ್ದವು. ಆದರೆ ಈ ಬಿಜೆಪಿಗರು ಇದುವರೆಗೂ ತುಟಿಪಿಟಿಕ್ ಎಂದಿಲ್ಲ. ರಾಜ್ಯದ ಸಿ.ಟಿ.ರವಿ, ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ನಾಯಕರು ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ಟೀಕಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಚಂದ್ರಭೂಪಾಲ್, ಎಸ್.ಟಿ.ಚಂದ್ರಶೇಖರ್, ವಿನಾಯಕಮೂರ್ತಿ, ದೀರರಾಜ್, ಕಲೀಂ ಪಾಷ, ಚಂದನ್, ಕೃಷ್ಣಪ್ಪ, ಶಿ.ಜು.ಪಾಶಾ, ಪದ್ಮನಾಬ್ ಮೊದಲಾದವರು ಇದ್ದರು.

Leave A Reply

Your email address will not be published.

error: Content is protected !!