ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯ ಹೊಂದಲು ಕ್ರೀಡೆ ಅವಶ್ಯಕ

0 39

ಸೊರಬ : ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಎಸ್. ಶಂಕರ್ ಶೇಟ್ ಹೇಳಿದರು.

ಚಂದ್ರಗುತ್ತಿ ಶ್ರೀ ರೇಣುಕಾಂಬ ಪ್ರೌಢ ಶಾಲಾ ಕ್ರೀಡಾಂಗಣದಲ್ಲಿ ಕಸಬಾ ಬಿ ವಲಯ ಮಟ್ಟದ ಪ್ರೌಢ ಶಾಲಾ ವಿದ್ಯಾಥಿಗಳ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಚಂದ್ರಗುತ್ತಿ ಕ್ಷೇತ್ರ ಸಾಕಷ್ಟು ಸ್ಥಳ ಮಹತ್ವ ಪಡೆದಿದ್ದು, ಶ್ರೀ ಕ್ಷೇತ್ರವು ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಜಿಲ್ಲೆಯಲ್ಲಿಯೇ ಗುರುತಿಸಿಕೊಂಡಿದೆ. ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಗ್ರಾಮೀಣ ಕ್ರೀಡೆಗಳ ಬೆಳವಣಿಗೆಗೆ ಸ್ಥಳೀಯರು ಸಹ ಸಹಕಾರ ಮತ್ತು ಪ್ರೋತ್ಸಾಹ ನೀಡಬೇಕು. ಇಂತಹ ಉತ್ತಮ ಕಾರ್ಯಗಳಿಗೆ ತಾವು ಸದಾ ಸಹಕಾರ ನೀಡುವುದಾಗಿ ತಿಳಿಸಿದರು.

ಕ್ರೀಡಾಕೂಟ ಉದ್ಘಾಟಿಸಿದ ಪೊಲೀಸ್ ವೃತ್ತ ನಿರೀಕ್ಷಕ ಎಲ್. ರಾಜಶೇಖರ್ ಮಾತನಾಡಿ, ಕ್ರೀಡಾಕೂಟಗಳಲ್ಲಿ ಸೋಲು ಮತ್ತು ಗೆಲುವು ಸಾಮಾನ್ಯವಾದುವುದು. ಎಲ್ಲವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಕ್ರೀಡಾಪಟುಗಳು ಹೊಂದಬೇಕು. ಕಬಡ್ಡಿ, ವಾಲೀಬಾಲ್ ನಂತಹ ಗ್ರಾಮೀಣ ಕ್ರೀಡೆಗಳಿಗೆ ಪೋಷಕರು ಮತ್ತು ಶಿಕ್ಷಕರು ಪ್ರೋತ್ಸಾಹ ನೀಡಬೇಕು. ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕವಾಗಿ ಸದೃಢರಾಗಿ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪರಶುರಾಮ ಬೋವಿ ಮಾತನಾಡಿ, ಸ್ಥಳೀಯರ ಸಹಕಾರದೊಂದಿಗೆ ಗ್ರಾಮದಲ್ಲಿ ಅಚ್ಚುಕಟ್ಟಾಗಿ ಕ್ರೀಡಾಕೂಟವನ್ನು ನಡೆಸಲಾಗುತ್ತಿದೆ. ಕ್ರೀಡಾಪಟುಗಳು ಗ್ರಾಮಕ್ಕೆ ಕೀರ್ತಿ ತರುವ ಕೆಲಸ ಮಾಡಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅಸ್ಪದ ನೀಡದೇ, ತಾಳ್ಮೆಯಿಂದ ಕ್ರೀಡಾಕೂಟಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ಕ್ರೀಡಾಧ್ವಜಾರೋಹಣವನ್ನು ಗ್ರಾಪಂ ಅಧ್ಯಕ್ಷೆ ಸರಿತಾ ಕೃಷ್ಣಪ್ಪ ನೆರವೇರಿಸಿದರು. ಗ್ರಾಮದ ಶ್ರೀ ಮಹಾಗಣಪತಿ ದೇವಸ್ಥಾನದಿಂದ ಆರಂಭಗೊಂಡ ಕ್ರೀಡಾ ಜ್ಯೋತಿ ಮೆರವಣಿಗೆಗೆ ನಿವೃತ್ತ ಮುಖ್ಯಶಿಕ್ಷಕ ಯಶವಂತಪ್ಪ ಚಾಲನೆ ನೀಡಿದರು. ಶಿಖರದಿಂದ ಸಾಗರ ಸಾಹಸಮಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಿರಿಯ ಮೌಂಟೇನಿಯರ್ ಖ್ಯಾತಿಯ ಐರ್ಶರ್ಯ ಕ್ರೀಡಾ ಜ್ಯೋತಿ ಹಿಡಿದು ಮೆರವಣಿಗೆ ಮಾಡಿದರು.

ಗ್ರಾಪಂ ಉಪಾಧ್ಯಕ್ಷ ಎಂ.ಬಿ. ರೇಣುಕಾಪ್ರಸಾದ್, ಸದಸ್ಯರಾದ ಎಂ.ಪಿ. ರತ್ನಾಕರ, ಲಕ್ಷ್ಮೀ ಚಂದ್ರಪ್ಪ, ಶ್ರೀ ರೇಣುಕಾಂಬ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ವಿ.ಎಲ್. ಶಿವಪ್ರಸಾದ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಲಿಂಗರಾಜ ಒಡೆಯರ್, ಶ್ರೀ ರೇಣುಕಾಂಬ ಪ್ರೌಢ ಶಾಲೆಯ ಕಾರ್ಯದರ್ಶಿ ಯಲ್ಲೋಜಿ, ಮುಖ್ಯ ಶಿಕ್ಷಕ ಆರ್. ಶಶಿಕುಮಾರ್, ಶ್ರೀ ರೇಣುಕಾಂಬ ದೇವಸ್ಥಾನ ಸಮಿತಿ ಅಧ್ಯಕ್ಷ ಪ್ರಸನ್ನ ಶೇಟ್, ಪ್ರಮುಖರಾದ ಎನ್. ಗುತ್ಯಪ್ಪ, ನಾಗಪ್ಪ ಮಿರ್ಜಿ, ಚಂದ್ರಪ್ಪ ಕತವಾಯಿ, ನಾಗರಾಜ ಗೌಡ, ಪ್ರದೀಪ್ ಬಾಡದಬೈಲು, ಮನೋಹರ, ಪರಸಪ್ಪ ಓಲೇಕಾರ್ ಸೇರಿದಂತೆ ಊರ ಗ್ರಾಮಸ್ಥರು ಉಪಸ್ಥಿತರಿದ್ದರು. ಕ್ರೀಡಾಕೂಟಕ್ಕೆ ಸ್ಥಳೀಯ ಯುವಕರ ಬಳಗದಿಂದ ಸಹಕಾರ ನೀಡಲಾಯಿತು.

“ಸರ್ಕಾರಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ಅನೇಕ ಯೋಜನೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಸ್ಥಳೀಯ ಮಟ್ಟದ ಸಂಸ್ಕೃತಿ ಮತ್ತು ಕ್ರೀಡೆಗಳನ್ನು ಪ್ರೋತ್ಸಾಹಿಸುವುದು ಆಡಳಿತದ ಜವಾಬ್ದಾರಿಯೂ ಆಗಿದೆ. ಈ ಹಿನ್ನೆಲೆಯಲ್ಲಿ ಗೆದ್ದವರು ಅಹಂ ಪಡದೇ, ಸೋತವರು ಧೃತಿಗೆಡದೆ ಕ್ರೀಡಾಪಟುಗಳು ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು.”
– ಎಂ.ಬಿ. ರೇಣುಕಾ ಪ್ರಸಾದ್, ಗ್ರಾ.ಪಂ. ಉಪಾಧ್ಯಕ್ಷ

Leave A Reply

Your email address will not be published.

error: Content is protected !!