ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆ ! ಕೊಲೆಗೆ ಕಾರಣವಾಯ್ತ ಪ್ರಿಯಕರನ ಮದುವೆ ? ಕೊಲೆ ರಹಸ್ಯ ಬಯಲಾಗಿದ್ಹೇಗೆ ಗೊತ್ತಾ ?

0 97

ಶೃಂಗೇರಿ : ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇತ್ತು ಎನ್ನಲಾದ ಯುವಕನೋರ್ವ ತನ್ನ ಮದುವೆ ಬಳಿಕ ಮಹಿಳೆಯ ಬೆದರಿಕೆಗೆ ಕುಪಿತಗೊಂಡು ಆಕೆಯನ್ನು ಹತ್ಯೆ ಮಾಡಿ ಮರದ ಕೆಳಗೆ ಹೂತು ಹಾಕಿದ್ದ ತಾಲೂಕಿನ ತ್ಯಾವಣ ಗ್ರಾಮದಲ್ಲಿ ವರದಿಯಾಗಿದೆ.

ವಾಸಂತಿ (42) ಹತ್ಯೆಯಾದ ಮಹಿಳೆಯಾಗಿದ್ದು, ಕೊಟ್ಟಿಗೆಹಾರ ಮೂಲದ ಪ್ರಕಾಶ್ (29) ಕೊಲೆ ಆರೋಪಿಯಾಗಿದ್ದಾನೆ. ಈತ ಕಳೆದ ಮೂರು ತಿಂಗಳ ಹಿಂದೆ ವಾಸಂತಿ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದು, ಮೃತ ದೇಹವನ್ನು ಯಾರಿಗೂ ತಿಳಿಯದಂತೆ ತ್ಯಾವಣ ಸಮೀಪದ ಕಾಡಿನಲ್ಲಿ ಮರದ ಕೆಳಗೆ ಹೂತು ಹಾಕಿ ಏನು ಅರಿಯದವನಂತಿದ್ದ. ಈ ಪ್ರಕರಣವನ್ನು ಬೇಧಿಸುವಲ್ಲಿ ಶೃಂಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಘಟನೆ ವಿವರ: 

ಶೃಂಗೇರಿ ತಾಲೂಕಿನ ತ್ಯಾವಣ ಗ್ರಾಮದ ವಾಸಂತಿ ಅವರನ್ನು ಕಳಸ ತಾಲೂಕಿನ ಎಡೂರು ಗ್ರಾಮದ ನಾರಾಯಣ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಕೆಲ ವರ್ಷಗಳ ಹಿಂದೆ ವಾಸಂತಿ ಪತಿ ನಾರಾಯಣ ಮೃತ ಪಟ್ಟಿದ್ದರು. ಬಳಿಕ ವಾಸಂತಿ ತನ್ನ ಮಕ್ಕಳೊಂದಿಗೆ ತ್ಯಾವಣ ಗ್ರಾಮದ ತವರು ಮನೆಗೆ ಹಿಂದಿರುಗಿದ್ದರು. ಈ ವೇಳೆ ತ್ಯಾವಣ ಗ್ರಾಮದಲ್ಲಿರುವ ಪ್ಲಾಂಟೇಶನ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ಕೊಟ್ಟಿಗೆಹಾರ ಮೂಲದ ಯುವಕ ಪ್ರಕಾಶ್ ಪರಿಚಯವಾಗಿದ್ದು, ಪರಿಚಯ ಸಲುಗೆಗೆ ತಿರುಗಿದೆ ಎಂದು ತಿಳಿದು ಬಂದಿದೆ.

ಕಳೆದ ಮಾರ್ಚ್ ತಿಂಗಳಲ್ಲಿ ಪ್ರಕಾಶ್ ಬೇರೊಂದು ಯುವತಿಯೊಂದಿಗೆ ವಿವಾಹವಾಗಿದ್ದು, ಇದನ್ನು ತಿಳಿದ ವಾಸಂತಿ ಪ್ರಕಾಶ್‍ನನ್ನು ಕಳೆದ ಏಪ್ರಿಲ್ ತಿಂಗಳಿನಲ್ಲಿ ತ್ಯಾವಣ ಗ್ರಾಮಕ್ಕೆ ಕರೆಸಿಕೊಂಡಿದ್ದಳು. ಈ ವೇಳೆ ತನ್ನೊಂದಿಗೆ ಸಂಬಂಧ ಹೊಂದಿ ಬೇರೊಬ್ಬಳನ್ನು ವಿವಾಹವಾಗಿರುವುದನ್ನು ಪ್ರಶ್ನಿಸಿದ್ದಾಳೆ. ಅಲ್ಲದೇ ತಾನು ವಿಷ ಕುಡಿಯುವುದಾಗಿ ಬೆದರಿಸಿದ್ದಾಳೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಕುಪಿತನಾದ ಪ್ರಕಾಶ್ ಮನಬಂದಂತೆ ವಾಸಂತಿಗೆ ಥಳಿಸಿದ್ದಾನೆನ್ನಲಾಗಿದೆ. ಹಲ್ಲೆಯಿಂದ ತೀವ್ರ ಅಘಾತಕ್ಕೊಳಗಾದ ವಾಸಂತಿ ಕುಸಿದು ಬಿದ್ದಿದ್ದಾಳೆ. ಈ ವೇಳೆ ಆಕೆಗೆ ನೀರು ಕುಡಿಸಲು ಪ್ರಯತ್ನಿಸಿದಾಗ ಆಕೆ ಮೃತಪಟ್ಟಿರುವುದು ಗೊತ್ತಾಗಿದೆ.

ವಾಸಂತಿ ಮೃತಪಟ್ಟಿದ್ದನ್ನು ಕಂಡ ಪ್ರಕಾಶ್ ಭೀತಿಗೊಳಗಾಗಿ ಘಟನೆಯನ್ನು ಯಾರಿಗೂ ತಿಳಿಸದೇ ಗ್ರಾಮ ಸಮೀಪದ ಕಾಡಿಗೆ ಆಕೆಯ ಮೃತದೇಹ ಹೊತ್ತೊಯ್ದು ಮರದ ಕೆಳಗೆ ಹೂತು ಹಾಕಿ ಏನೂ ಅರಿಯದವನಂತೆ ತನ್ನ ಊರಿಗೆ ಬಂದು ನೆಲೆಸಿದ್ದ. ವಾಸಂತಿ ಹತ್ಯೆಯಾದ ಸುದ್ದಿ ತಿಳಿಯದ ಆಕೆಯ ಕುಟುಂಬಸ್ಥರು ಹಾಗೂ ಮಗ ನವೀನ್ ಸಂಬಂಧಿಕರ ಮನೆಗೆ ತೆರಳಿರಬಹುದೆಂದು ಸುಮ್ಮನಾಗಿದ್ದರು. ಆದರೆ 10 ದಿನ ಕಳೆದರೂ ಆಕೆಯ ಸುಳಿವು ಸಿಗದಿದ್ದಾಗ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಕೆಯ ಪತ್ತೆಗಾಗಿ ತನಿಖೆ ನಡೆಸಿದರೂ ಆಕೆಯ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ವಾಸಂತಿಯ ಕಾಲ್ ಡೀಟೈಲ್ಸ್ ತೆಗೆಸಿದಾಗ ಆಕೆ ಪ್ರಕಾಶ್ ಜೊತೆ ಮೊಬೈಲ್‍ನಲ್ಲಿ ಮಾತನಾಡಿದ್ದ ವಿಷಯ ತಿಳಿದು ಬಂದಿದೆ. ಬಳಿಕ ಪ್ರಕಾಶ್‍ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ವಾಸಂತಿಯನ್ನು ಹತ್ಯೆ ಮಾಡಿ ಮರದ ಕೆಳಗೆ ಹೂತು ಹಾಕಿದ್ದ ಘಟನೆ ಬೆಳಕಿಗೆ ಬಂದಿದೆ.

ಮಂಗಳವಾರ ಪ್ರಕಾಶ್‍ನನ್ನು ಸ್ಥಳಕ್ಕೆ ಕರೆದೊಯ್ದ ಪೊಲೀಸರು ಶವ ಹೂತು ಹಾಕಿದ್ದ ಜಾಗದಲ್ಲಿ ಶೋಧಿಸಿದಾಗ ವಾಸಂತಿ ಮೃತ ದೇಹ ಪತ್ತೆಯಾಗಿದೆ. ಸ್ಥಳಕ್ಕೆ ಜಿಲ್ಲಾ ಎಸ್ಪಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave A Reply

Your email address will not be published.

error: Content is protected !!