ಒತ್ತುವರಿ ಭೂಮಿಗಾಗಿ ಕಲಹ ; ಜೆಸಿಬಿ ಯಂತ್ರ ಬಳಸಿ ಕಬ್ಬಿಣದ ಗೇಟ್ ನಾಶ ! ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲು

0 59



ಹೊಸನಗರ : ಖಾತೆ ಜಮೀನಿನ ಮೇಲಿರುವ ಸರ್ಕಾರಿ ಭೂಮಿಗಾಗಿ ಸಹೋದರ ನಡುವೆ ಕಲಹ ಏರ್ಪಟ್ಟಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ತಾಲೂಕಿನ ಮಂಡಾನಿ ಗ್ರಾಮದ ಜಾನಕಮ್ಮ ಎಂಬುವವರು ದೂರು ನೀಡಿದ್ದು, ತನ್ನ ಪತಿಯ ಸಹೋದರರಾದ ಅಣ್ಣಪ್ಪ ಹಾಗೂ ಗುಂಡಪ್ಪ ಎಂಬುವವರು ಏಕಾಏಕಿ ನಮ್ಮ ಸ್ವಾಧೀನಾನುಭವದಲ್ಲಿದ್ದು, ಸಾಗುವಳಿ ಮಾಡಿರುವ ಅಡಿಕೆ ತೋಟವನ್ನು ಕಬಳಿಕೆಗೆ ಮುಂದಾಗಿದ್ದಾರೆ. ಮನೆ ಅಂಗಳದಲ್ಲಿ ದಾರಿಗೆ ಅಡ್ಡಲಾಗಿ ತಂತಿ ಬೇಲಿ ನಿರ್ಮಾಣ ಮಾಡಿದ್ದಾರೆ. ಬಗರ್‌ಹುಕುಂ ಸಾಗುವಳಿ ಜಾಗವನ್ನು ಬಿಟ್ಟುಕೊಡಬೇಕು ಎಂದು ಪದೇ ಪದೇ ಕಿರುಕುಳ ನೀಡುತ್ತಿದ್ದಾರೆ. ನಾವು ನಮ್ಮ ಅನುಭವದಲ್ಲಿರುವ ಜಾಗಕ್ಕೆ ನಿರ್ಮಿಸಿರುವ ಕಬ್ಬಿಣದ ಗೇಟ್‌ ಅನ್ನು ಆರೋಪಿಗಳು ಜೆಸಿಬಿ ಯಂತ್ರ ಬಳಸಿ ಕಿತ್ತಿದ್ದಾರೆ. ನಾವು ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದರೂ, ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ.


ಮಂಡಾನಿ ಗ್ರಾಮದ ಸರ್ವೆ ನಂ. 21ರಲ್ಲಿನ ಪಿತ್ರಾರ್ಜಿತ ಆಸ್ತಿಯಲ್ಲಿ ಅಣ್ಣಪ್ಪ ಅವರಿಗೆ ಪಾಲು ನೀಡಲಾಗಿದೆ. ಬೆಂಗಳೂರಿನಲ್ಲಿ ವಾಸವಾಗಿದ್ದರೂ, ಇಲ್ಲಿ ಮನೆ ಕಟ್ಟುವುದಾಗಿ ನೆಪ ಹೇಳಿಕೊಂಡು ನಮಗೆ ತೊಂದರೆ ಕೊಡುತ್ತಿದ್ದಾರೆ. ನಮ್ಮ ವಾಸದ ಮನೆಯ ಅಕ್ಕಪಕ್ಕದ ಜಾಗವನ್ನೂ ಕಬಳಿಕೆ ಮಾಡಲು ಮುಂದಾಗಿದ್ದಾರೆ. ತಮಗೆ ಹಾಗೂ ಪತಿ, ನನ್ನ ಇಬ್ಬರು ಮಕ್ಕಳಿಗೆ ಬೆದರಿಕೆ ಹಾಕುತ್ತಿದ್ದು, ಪ್ರಭಾವ ಬಳಸಿ ನಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.


ಈ ಬಗ್ಗೆ ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದೆ. ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave A Reply

Your email address will not be published.

error: Content is protected !!