ಭೂಮಿ ತಾಯಿಗಿಂದು ಸೀಮಂತದ ಸಂಭ್ರಮ

0 280

ರಿಪ್ಪನ್‌ಪೇಟೆ: ರೈತಾಪಿ ವರ್ಗ ಭೂಮಿ ಹುಣ್ಣಿಮೆ ಹಬ್ಬವನ್ನು ಸಡಗರ ಸಂಭ್ರಮದೊಂದಿಗೆ ಇಂದು ಶ್ರದ್ದಾಭಕ್ತಿಯಿಂದ ಆಚರಿಸಿದರು.
ಗರ್ಭಿಣಿಯಂತೆ ಬೆಳೆಗಳಿಂದ ಮೈತುಂಬಿಕೊಂಡಿರುವ ವಸುಂಧರೆಗಿಂದು ವಿಜೃಂಭಣೆಯಿಂದ ಭೂ ತಾಯಿಗೆ ಗರ್ಭಿಣಿಯ ಸ್ಥಾನದಲ್ಲಿಟ್ಟು ಆಕೆಗೆ ಶ್ರದ್ದಾಭಕ್ತಿಯಿಂದ ಸೀಮಂತದ ಕಾರ್ಯವನ್ನು ನೆರವೇರಿಸಿ ಸಂಭ್ರಮಿಸಿದರು.

ಭೂ ತಾಯಿಯ ಬಯಕೆಗಳನ್ನು ಈಡೇರಿಸುವ ಸೀಮಂತದ ಸಂಭ್ರಮ ಭೂಮಿಯಲ್ಲಿ ಉತ್ತಿ ಬಿತ್ತಿದ ಬೆಳೆಗಳು ಕಾಳು ಕಟ್ಟುವ ಸಮಯ ಇದ್ದಾಗಿದ್ದು ಭೂ ತಾಯಿ ಗರ್ಭಿಣಿಯೆಂಬ ನಂಬಿಕೆಯಿಂದ ಅವಳ ಬಯಕೆಗೆ ಅನುಗುಣವಾಗಿ ಉಡಿತುಂಬುತ್ತಾರೆ. ಭೂಮಿ ಹುಣ್ಣಿಯ ಮಲೆನಾಡಿನ ರೈತರ ಪಾಲಿಗೆ ಸಡಗರ ಸಂಭ್ರಮದ ಹಬ್ಬವಾಗಿದ್ದು ಇದೊಂದು ವಿಶಿಷ್ಟ ಹಬ್ಬವಾಗಿದೆ. ಹಬ್ಬದ ಹಿಂದಿನ ದಿನ ಸಂಜೆ ಭತ್ತದ ಗದ್ದೆ, ಅಡಿಕೆ ತೋಟದಲ್ಲಿ ಬಾಳೆ ಕಂದು, ಕಬ್ಬಿನಸುಳಿ, ಮಾವಿನ ಎಲೆಗಳ ತಳಿರು ತೋರಣಗಳಿಂದ ಶೃಂಗರಿಸಿ ಭತ್ತದ ಗದ್ದೆಯಲ್ಲಿ ಪಂಚಪಾಂಡವರಂತೆ ಐದು ಬುಡಗಳನ್ನು ಬಿಳಿ, ಹಸಿರು, ಕೆಂಪು, ಕಪ್ಪು, ಹಳದಿ ಬಣ್ಣದ ಬಟ್ಟೆಯಿಂದ ಅಲಂಕರಿಸಿ ರಾತ್ರಿಯಿಡಿ ಮಡಿಯಿಂದ ಮಹಿಳೆಯರು ಭೂಮಿ ತಾಯಿಗೆ ಬಗೆಬಗೆಯ ಅಡುಗೆಗಳನ್ನು ಸಿದ್ದಪಡಿಸಿ ಪೂಜಾ ಸಾಮಾಗ್ರಿಗಳೊಂದಿಗೆ ಚಿತ್ತಾರದ ಭೂಮಣ್ಣಿ ಬುಟ್ಟಿಯಲ್ಲಿ ತುಂಬಿ ಮನೆಯ ಯಜಮಾನ ನಸುಕಿನಲ್ಲಿಯೇ ಹೊತ್ತುಕೊಂಡು ಮನೆಮಂದಿಯಲ್ಲ ಹೋಗುತ್ತಾರೆ. ಹಿಂದಿನ ದಿನ ಸಿದ್ದಪಡಿಸಿದ ಜಾಗದಲ್ಲಿ ಶುದ್ದಮಾಡಿ ಪೂಜೆಗೆ ಅಣಿಯಾಗುತ್ತಾರೆ. ಭೂಮಿಯಲ್ಲಿನ ಪೈರಿಗೆ ತಾಳಿಸರ, ಬಂಗಾರದ ಒಡವೆಗಳನ್ನು ತೊಡಿಸಿ ಬಳೆ ಬಿಚ್ಚಾಲೆಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿ ನಂತರ ರಾತ್ರಿಯಿಡಿ ನಿದ್ರೆಬಿಟ್ಟು ತಯಾರಿಸಿದ ಎಲಾದ ಬಗೆಬಗೆಯ ಭಕ್ಷ್ಯಗಳನ್ನು ಕುಡಿಬಾಳೆ ಎಲೆಯ ಮೇಲೆ ಬಡಿಸಿ ನೈವೇದ್ಯಮಾಡಿ ಕುಟುಂಬದವರು ಜಮೀನಿನಲ್ಲಿಯೇ ಊಟಮಾಡಿ ಬರುವುದು ಪದ್ದತಿ. ನಂತರ ಬೆರಕೆ ಸೊಪ್ಪು ಮತ್ತು ಇನ್ನಿತರ ಆಹಾರ ಪದಾರ್ಥಗಳನ್ನು ಪ್ರತ್ಯೇಕ ಪಾತ್ರೆಗೆ ಹಾಕಿ ಚರಗಚಲ್ಲುವುದು ಎನ್ನುವಂತೆ ‘ಅಚ್ಚಂಬಲಿ ಅಳಿಯಂಬಲಿ ಹಿತ್ತಲಲ್ಲಿರುವ ದಾರೆಹಿರೇಕಾಯಿ ಮುಚ್ಚಿಕೊಂಡು ತಿನ್ನೇ ಭೂಮಿ ತಾಯಿ ಹೂಯ್’ ಎಂದು ಕೂಗುತ್ತಾ ತಮ್ಮ ಜಮೀನಿನ ಸುತ್ತ ಬೀರುವುದು ಸಂಪ್ರದಾಯ ಆನಂತರ ಇಲಿ ಹೆಗ್ಗಣಗಳಿಂದ ಬೆಳೆ ರಕ್ಷಣೆಗಾಗಿ ಈ ಹಬ್ಬದಲ್ಲಿ ಇಲಿ, ಹೆಗ್ಗಣಗಳಿಗೆ ವಿಶೇಷ ಸ್ಥಾನವನ್ನು ನೀಡುವುದರೊಂದಿಗೆ ಆವುಗಳಿಗೂ ಪ್ರತ್ಯೇಕ ಎಡೆಯನ್ನು ಇಟ್ಟು ನೈವೇದ್ಯ ಮಾಡಿ ದೂರದಲ್ಲಿ ಇಡುತ್ತಾರೆ.

ಒಟ್ಟಾರೆಯಾಗಿ ಇಂದು ಮಲೆನಾಡಿನ ರೈತರು ಬರದ ಕಾರ್ಮೋಡದಲ್ಲಿಯೂ ಹಬ್ಬವನ್ನು ಶ್ರದ್ದಾಭಕ್ತಿಯಿಂದ ನೆರವೇರಿಸುವ ಮೂಲಕ ಸಂಭ್ರಮಸಿದರು.

Leave A Reply

Your email address will not be published.

error: Content is protected !!