ಸರ್ವರ್ ಸಮಸ್ಯೆ ; ಪಡಿತರ ಪಡೆಯಲು ಪರದಾಟ..!

0 34


ರಿಪ್ಪನ್‌ಪೇಟೆ: ಸರ್ವರ್ ತಾಂತ್ರಿಕ ದೋಷದ ಕಾರಣ ರಾಜ್ಯದಲ್ಲಿ ಜೂ. 28 ರಿಂದ ಪಡಿತರ ವಿತರಣೆ ಇರುವುದಿಲ್ಲ ಎಂದು ರಾಜ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಆಯುಕ್ತರು ಎಲ್ಲ ನ್ಯಾಯಬೆಲೆ ಅಂಗಡಿಗಳಿಗೆ ಜೂನ್ ತಿಂಗಳ ಪಡಿತರ ಹಂಚಿಕೆ ಕಾರ್ಯವನ್ನು ಜೂ. 27ಕ್ಕೆ ಕೊನೆಗೊಳಿಸುವಂತೆ ಅಧಿಕೃತ ಆದೇಶ ಹೊರಡಿಸಲಾಗಿದ್ದು ಆದರೆ ಹೊಸನಗರ ತಾಲ್ಲೂಕಿನಲ್ಲಿ ಜೂನ್ 20 ರಿಂದಲೇ ಸರ್ವರ್ ಸಮಸ್ಯೆ ತಲೆದೋರಿದ್ದು ಪಡಿತರದಾರರ ಪರದಾಟ ಹೇಳತೀರದಾಗಿದೆ.

ಕೋಡೂರು, ರಿಪ್ಪನ್‌ಪೇಟೆ, ಬೆಳ್ಳೂರು ಇನ್ನಿತರ ನ್ಯಾಯಬೆಲೆ ಅಂಗಡಿಗಳಲ್ಲಿ ಫಲಾನುಭವಿಗಳು ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಬಿಟ್ಟು ನಿತ್ಯ ಸರತಿ ಸಾಲಿನಲ್ಲಿ ನಿಂತು ಬಸವಳಿಯವಂತಾಗಿ ಇಂದು ಕೊನೆ ದಿನವಾದ ಸಹನೆಯಿಂದಿದ್ದ ಫಲಾನುಭವಿಗಳ ಸಹನೆಯ ಕಟ್ಟೆ ಒಡೆದು ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನ್ಯಾಯಬೆಲೆ ಅಂಗಡಿಗಳ ಬಳಿ ನಡೆಯಿತು.


ಈ ಬಗ್ಗೆ ಪಡಿತರ ಫಲಾನುಭವಿಯೊಬ್ಬರು ಮಾಧ್ಯಮದವರ ಬಳಿ ಮಾತನಾಡಿ, ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಸರ್ವರ್ ಸಮಸ್ಯೆಯನ್ನು ಮುಂದಿಟ್ಟುಕೊಂಡು ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ತೊಂದರೆ ಕೊಡುವುದೇ ಗುರಿಯನ್ನಾಗಿಸಿಕೊಂಡಿದ್ದಾರೆ. ಜೂನ್ 28 ರಿಂದ ಸರ್ವರ್ ದುರಸ್ಥಿ ಕಾರ್ಯಕೈಗೊಳ್ಳುವುದಾಗಿ ಆದೇಶ ಹೊರಡಿಸಲಾಗಿದ್ದರೂ ಕೂಡಾ ನಮ್ಮ ತಾಲ್ಲೂಕಿನಲ್ಲಿ ಜೂನ್ 10 ರಿಂದಲೇ ಈ ರೀತಿಯ ಸರ್ವರ್ ಸಮಸ್ಯೆ ಎದುರಿಸಬೇಕಾಗಿದೆ. ಜೂ. ತಿಂಗಳ ಪಡಿತರ ಪಡೆಯಲು ಈಗಾಗಲೇ ನಾಲ್ಕೈದು ಬಾರಿ ಅಂಗಡಿಗೆ ಅಲೆದು ಅಲೆದು ಸಾಕಾಗಿ ಹೋಗಿದೆ ಎಂದು ಆಕ್ರೋಶ ಹೊರಹಾಕಿದರು.

Leave A Reply

Your email address will not be published.

error: Content is protected !!