ಸಾಮರಸ್ಯದ ಶಿಕ್ಷಣ ಇಂದಿನ ಅಗತ್ಯ ; ಫಾದರ್ ಮಿನಿನ್ ಅಲ್ಮೇಡ

0 31

ಹೊಸನಗರ : ಶಿಕ್ಷಣ ಸರ್ವಕಾಲಿಕ ಶ್ರೇಷ್ಠ ಜ್ಞಾನ ಶಾಖೆ. ಇದು ಪರಿಪೂರ್ಣತೆಯಿಂದ ಕೂಡಿರಬೇಕು ಎಂದರೆ ಅದರಲ್ಲಿ ಸಾಮರಸ್ಯ ಬಹುಮುಖ್ಯವಾಗಿ ಇರಬೇಕು ಎಂದು ಯಡೆಹಳ್ಳಿ ಸಂತ ಜೂದರ ಚರ್ಚ್‌ನ ಫಾದರ್ ಮಿನಿನ್ ಅಲ್ಮೇಡ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬಟ್ಟೆಮಲ್ಲಪ್ಪದ ಶ್ರೀ ವ್ಯಾಸ ಮಹರ್ಷಿ ಗುರುಕುಲದಲ್ಲಿ ಭಾನುವಾರ ಆಯೋಜಿಸಿದ್ದ ತ್ರಯೋದಶ ಸಂವತ್ಸರ ಪ್ರದರ್ಶಿನಿ ಸಂಭ್ರಮ ಹಾಗೂ ವೇದ ವ್ಯಾಸ ಗುರುಪುರಸ್ಕಾರ ಪ್ರಧಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರು ಇಡೀ ಜಗತ್ತಿಗೆ ಬೇಕಾದ ಸಂದೇಶವಾದ ಸಹೋದರತ್ವವನ್ನು ನೀಡಿದ್ದಾರೆ. ಅವರ ಸಹೋದರ ಸಹೋದರಿಯರೇ ಎಂಬ ಅಮೃತ ವಾಕ್ಯ ಇಂದಿನ ದಿವ್ಯ ವಾಣಿ ಆಗಬೇಕು. ಶಿಕ್ಷಣ ಇಂದು ಪ್ರತಿಯೊಬ್ಬರ ಜೀವನ ರೂಪಿಸುವ ದಿವ್ಯತೆಯನ್ನು ಹೊಂದಬೇಕು. ದೇಶಭಿಮಾನದ ಜೊತೆಗೆ ಸರ್ವರ ಬದುಕನ್ನೂ ರೂಪಿಸಬೇಕು. ಇಂತಹ ಸಮಾನತೆ, ಸಹೋದರತ್ವ, ಸಾಮರಸ್ಯ ತುಂಬಿದ ಶಿಕ್ಷಣ ಇಂದಿನ ಅಗತ್ಯವಾಗಿದೆ. ಇದನ್ನು ಕಲಿಸುವ ಕಡೆ ಶಿಕ್ಷಣ ಸಂಸ್ಥೆಗಳು ಗಮನ ನೀಡಬೇಕು ಎಂದರು.


ಶಿಕ್ಷಣ ಸಂಸ್ಥೆಗಳು ಕೇವಲ ಪಠ್ಯಕ್ಕೆ ಸೀಮಿತಗೊಂಡರೆ ಮಕ್ಕಳ ಬದುಕು ಉಜ್ವಲಗೊಳ್ಳುವುದಿಲ್ಲ. ಪಠ್ಯದ ಜೊತೆಗೆ ಸಾಮರಸ್ಯ ತುಂಬಿದ ದೇಶ ಪ್ರೇಮ ಬಿತ್ತಿದಾಗ ಮಾತ್ರ ನಿಜವಾದ ಶಿಕ್ಷಣದ ಸಾರ್ಥಕತೆ ಎಂದು ಬಟ್ಟೆಮಲ್ಲಪ್ಪ ಜುಮ್ಮಾ ಮಸೀದಿಯ ಧರ್ಮ ಗುರು ಮೌಲಾನ ಅಬ್ದುಲ್ ರಫೀಕ್ ಮದನಿ ಹೇಳಿದರು.


ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಅವರು ಸರ್ವ ಸಮಾನತೆಯ ಬದುಕು ಇಂದು ಭಾರತದ ಅಗತ್ಯ. ಇಂತಹ ಸಮಾನತೆಯ ಶಿಕ್ಷಣ ನೀಡುವ ಕಡೆ ಶಿಕ್ಷಣ ಸಂಸ್ಥೆಗಳು ಗಮನ ನೀಡಬೇಕು. ಎಲ್ಲಾ ಧರ್ಮ ಗ್ರಂಥಗಳು ಏಕತಾ ಮಾನವತವಾದವನ್ನೇ ಹೇಳಿವೆ. ಇದು ಹೆಚ್ಚು ಪ್ರಚಾರಗೊಳ್ಳಬೇಕಿದೆ. ಬದಲಿಗೆ ಧರ್ಮಗಳ ಬಗ್ಗೆ ತಪ್ಪು ಸಂದೇಶ ಸಾರುವ ಕೆಲಸ ಆಗುತ್ತಿದ್ದು, ಯಾವ ಧರ್ಮವೂ ಸಾಮರಸ್ಯದ ಹೊರತಾಗಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.


ಅತ್ಯುತ್ತಮ ಶಿಕ್ಷಣ ನೀಡಿದಾಗ ಮಾತ್ರ ಗುಣಮಟ್ಟದ ಸಮಾಜ ಮತ್ತು ದೇಶ ನಿರ್ಮಿಸಲು ಸಾಧ್ಯ ಎಂದು ನಿವೃತ್ತ ಶಿಕ್ಷಕ ಕೆ. ರಾಮಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಶ್ರೀ ಬಸವನ ಬ್ಯಾಣದ ಅಯ್ಯಪ್ಪ ಮೆಮೋರಿಯಲ್ ಟ್ರಸ್ಟ್ ಮತ್ತು ಶ್ರೀ ವ್ಯಾಸ ಮಹರ್ಷಿ ಗುರುಕುಲ ಜಂಟಿಯಾಗಿ ನೀಡಿದ ವೇದ ವ್ಯಾಸ ಗುರುಪುರಸ್ಕಾರ ಸ್ವೀಕರಿಸಿ ಮಾತನಾಡಿ, ಸೇವೆಗಿಂತ ಶ್ರೇಷ್ಠವಾದ ದಾನ ಮತ್ತೊಂದಿಲ್ಲ. ಅಂತಹ ಸೇವೆ ಶಿಕ್ಷಣ ಸೇವೆ. ಇದನ್ನು ಶಿಕ್ಷಕ ಪ್ರಾಮಾಣಿಕತೆ ಮತ್ತು ಶ್ರದ್ದೆಯಿಂದ ನೀಡಬೇಕು ಎಂದು ಹೇಳಿದರು.


ವೇದ ವ್ಯಾಸ ಗುರು ಪುರಸ್ಕಾರ ಪುರಸ್ಕೃತ ಕೆ. ರಾಮಶೆಟ್ಟಿ ಅವರನ್ನು ಅಭಿನಂದಿಸಿ ಮಾತನಾಡಿದ ಶಿಷ್ಯ ಹಾಗೂ ಮಾರುತಿಪುರ ಗ್ರಾ. ಪಂ. ಅಧ್ಯಕ್ಷ ಚಿದಂಬರ ಹೆಚ್. ಬಿ, ಪ್ರಶಸ್ತಿ ಸ್ವೀಕರಿಸಿರುವ ಕೆ. ರಾಮಶೆಟ್ಟಿ ಅವರ ಶೈಕ್ಷಣಿಕ ಸಾಧನೆ ಮತ್ತು ಸೇವೆ ಅನನ್ಯವಾದುದು. ನನಗೂ ಗುರುಗಳಾಗಿದ್ದ ಅವರು ಕೇವಲ ಪಾಠಕ್ಕೆ ಸೀಮಿತವಾಗದ ಅವರು, ಊರಿನ ಧಾರ್ಮಿಕ, ಸಾಮಾಜಿಕ ಚಟುವಟಿಕೆ ಜೊತೆಗೆ ಊರಿನ ಸಾಮಾಜಿಕ ಶಾಂತಿಯುತ ಬದುಕಿನ ನಾಯಕತ್ವವನ್ನೂ ವಹಿಸಿದ್ದರು. ಅವರಿಗೆ ಈ ಗೌರವ ಸಿಕ್ಕಿದ್ದು ಅತ್ಯಂತ ಹೆಮ್ಮೆಯ ಮತ್ತು ಗೌರವದ ವಿಷಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಿವೃತ್ತ ಸೇನಾನಿ ಹಾಗೂ ಗುರುಕುಲ ಮಾರ್ಗದರ್ಶಕ ಕೆ. ಪಿ. ಕೃಷ್ಣ ಮೂರ್ತಿ ಮಾತನಾಡಿ, ಸಂಘ ಸಂಸ್ಥೆಗಳು ಸಕ್ರಿಯವಾಗಿ ಇದ್ದಾಗ ಊರಿನ ಅಭಿವೃದ್ಧಿ ಸಾಧ್ಯ. ಜೊತೆಗೆ ಸಹಬಾಳ್ವೆ, ಬೆಳವಣಿಗೆ ಸಾಧ್ಯವಾಗುತ್ತದೆ. ಇಂತಹ ಕೆಲಸವನ್ನು ಶ್ರೀ ಬಸವನಬ್ಯಾಣದ ಅಯ್ಯಪ್ಪ ಮೆಮೋರಿಯಲ್ ಟ್ರಸ್ಟ್ ಹಾಗೂ ಶ್ರೀ ವ್ಯಾಸ ಮಹರ್ಷಿ ಗುರುಕುಲ ಆರಂಭದಿಂದಲೂ ಜವಾಬ್ದಾರಿಯಿಂದ ನಿಭಾಯಿಸುತ್ತಿದೆ ಎಂದರು.
ಕಾರ್ಯಕ್ರಮವನ್ನು ಮೂಲೆಗದ್ದೆ ಶಿವಾನಂದ ಶಿವಯೋಗಶ್ರಮದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಉದ್ಘಾಟಿಸಿ ದಿವ್ಯ ಸಾನಿಧ್ಯ ವಹಿಸಿದ್ದರು.
ಬೆಂಗಳೂರು ಟಿ ಸಿ ಎಲ್ ಕಂಪನಿಯ ಹಿರಿಯ ವ್ಯವಸ್ಥಾಪಕ ಸಂತೋಷ್ ಮಕ್ಕಳಿಗೆ ಹಾಗೂ ಪೋಷಕರಿಗೆ ಪ್ರೇರಣಾ ನುಡಿಗಳನ್ನು ಆಡಿದರು.


ಎ. ಹಾಲೇಶಪ್ಪ, ಡಿ. ಬಿ. ಕೆಂಚಪ್ಪ, ನಿವೃತ್ತ ಪ್ರಚಾರ್ಯ ಶೇಖರಪ್ಪ, ಸಂಜಯ್, ಹೂವಿನಕೋಣೆ ರಾಜರಾಜೇಶ್ವರಿ ದೇವಸ್ಥಾನದ ಧರ್ಮದರ್ಶಿ ಮಂಜಪ್ಪ ಗುರೂಜಿ, ವಿದುಷಿ ಶ್ರೀರಂಜಿನಿ, ಯಡೆಹಳ್ಳಿ ಸಂತ ಜೂದರ ಚರ್ಚ್ ಅಧ್ಯಕ್ಷೆ ರೋಸ್ಲಿ ಫೆರ್ನಾಂಡಿಸ್, ಅಂತೋನಿ, ಶ್ರೀಲತಾ ಕುಮಾರ್, ಉದಯ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದುಷಿ ಶ್ರೀರಂಜನಿ, ಶ್ರೀಧರ್ ಮತ್ತು ಸಂವತ್ಸರ ಇವರ ನೇತೃತ್ವದಲ್ಲಿ ಸಂಗೀತ ಗುರುಕುಲದ ಮಕ್ಕಳ ಸಂಗೀತ ಕಾರ್ಯಕ್ರಮ ಹಾಗೂ ತುಮರಿ ಕಿನ್ನರ ಮೇಳದ ಸಹಯೋಗದಲ್ಲಿ ಗುರುಕುಲ ಮಕ್ಕಳಿಂದ ಸ್ವಾತಂತ್ರ್ಯದ ಹಾದಿ ನಾಟಕ ರಘು ರಾಮ್ ತುಮರಿ ನಿರ್ದೇಶನದಲ್ಲಿ ಎಲ್ಲರ ಗಮನ ಸೆಳೆಯಿತು. ಕಿರಣ್ ಕುಮಾರ್ ಸೊನಲೆ ನಿರ್ದೇಶನ ದೇವಿ ನೃತ್ಯ ನೆರದವರನ್ನು ಭಾವಪರವಷತೆಗೊಳಿಸಿತು.


ಸಂಸ್ಥೆ ಅಧ್ಯಕ್ಷ ಮಂಜುನಾಥ್ ಎಸ್. ಬ್ಯಾಣದ ಪ್ರಸ್ತಾವಿಕವಾಗಿ ಮಾತನಾಡಿದರೆ, ಶಿಕ್ಷಕಿ ಗಾಯತ್ರಿ ಸ್ವಾಗತಿಸಿದರು. ಸಂಸ್ಥೆ ಕಾರ್ಯದರ್ಶಿ ರಶ್ಮಿ ವಾರ್ಷಿಕ ವರದಿ ವಾಚಿಸಿದರೆ, ಶಿಕ್ಷಕಿ ಸುಮಾ ದಯಾಕರ್ ವಂದಿಸಿದರು. ಸುಪರ್ಣ ಮತ್ತು ಸ್ತುತಿ ಪ್ರಾರ್ಥಿಸಿದರು. ಶಿಕ್ಷಕ ಬಳಗದ ವಿದ್ಯಾಶ್ರೀ, ಸುಧಾ, ಶ್ವೇತಾ, ಮೋನಿಕಾ, ಪಾವನ, ಸಚಿನ್ ಹಾಗೂ ಪೋಷಕ ಸಮಿತಿಯ ಪದಾಧಿಕಾರಿಗಳು ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಮಕ್ಕಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದವರನ್ನು ಮನೋರಂಜಿಸಿದವು.

Leave A Reply

Your email address will not be published.

error: Content is protected !!