ಹೊಸನಗರ: ಪುರಂದರ ದಾಸರ ಕೀರ್ತನೆಗಳು ಸಾರ್ವಕಾಲಿಕವಾಗಿದ್ದು ಅದು ಸಮಾಜಪರಿವರ್ತನೆಗೆ ಸಾಧನವಾಗಬಲ್ಲದು ಎಂದು ಸಾಮಾಜುಕ ಕಾರ್ಯಕರ್ತ ಹನಿಯರವಿ ಹೇಳಿದರು.
ಕಾರಣಗಿರಿಯ ಗ್ರಾಮಭಾರತಿ ಟ್ರಸ್ಟ್, ರಾಷ್ಟ್ರೋತ್ಥಾನ ಬಳಗದ ಆಶ್ರಯದಲ್ಲಿ ಹೊಸನಗರದ ಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಪುರಂದರ-ತ್ಯಾಗರಾಜರ ಆರಾಧನಾ ಸಂಗೀತೋತ್ಸವದಲ್ಲಿ ಅವರು ಮಾತನಾಡುತ್ತಿದ್ದರು.
ತ್ಯಾಗರಾಜರ ಕೀರ್ತನೆಗಳು ನೂರಾರು ವರ್ಷಗಳಿಂದಲೂ ಹೇಳುತ್ತಾ ಕೇಳುತ್ತಾ ಬಂದಿದ್ದರೂ ಅದು ನಿತ್ಯನೂತನವಾಗಿದೆ. ಭಾಷಾಭೇದದ ಇಂದಿನ ಸನ್ನಿವೇಶದಲ್ಲಿ ವಾಗ್ಗೇಯಕಾರರ ಕೀರ್ತನೆಗಳು ಸಮಾಜದಲ್ಲಿ ಸಾಮರಸ್ಯ, ಏಕತೆ ಸಾಧಿಸಬಲ್ಲದು ಎಂದವರು ಅಭಿಪ್ರಾಯಪಟ್ಟರು.
ಹೊಸನಗರದಲ್ಲಿ 25ವರ್ಷಗಳಿಂದ ಶಾಸ್ತ್ರೀಯ ಸಂಗೀತದ ಶಾಲೆನಡೆಸುತ್ತಿರುವ ಗಾನಸುಧಾ ಸಂಗೀತ ಶಾಲೆಯ ಶಿಕ್ಷಕಿ ಗಾಯತ್ರಿ ನಾಗರಾಜ್ ಇವರನ್ನು ಸನ್ಮಾನಿಸಲಾಯಿತು.
ವಿವಿಧ ಸಂಗೀತ ಶಾಲೆಗಳವರಿಂದ ಕೀರ್ತನೆಗಳು ಮತ್ತೆ ತ್ಯಾಗರಾಜರ ಪಂಚರತ್ನ ಕೀರ್ತನೆಗಳ ಗೋಷ್ಠಿಗಾಯನ ನಡೆಯಿತು.
ವಿದುಶಿ ಅನಿತಾ ವೆಂಕಟೇಶ್ ಹೊಸಂತೆಯವರ ಸಂಗೀತ ಕಛೇರಿಯಲ್ಲಿ ಕೇಶವಹೊಸಳ್ಳಿ ಮೃದಂಗ ಹಾಗೂ ಸುಶ್ರುತ್ ಭಾರದ್ವಾಜ್ ವಾಯಲಿನ್‌ನಲ್ಲಿ ಸಹಕರಿಸಿದರು.
ಲೀಲಾವತಿ ಚಿದಂಬರ್ ಸುರಾನ, ಅನುಪಮ ಸುರೇಶ್, ಮಾಧುರಿ ದೇವಾನಂದ್, ಅಹಲ್ಯ ಚಡಗ, ಕೆ.ಪಿ.ಕೃಷ್ಣಮೂರ್ತಿ ಉಪಸ್ಥಿತರಿದ್ದರು.
ಗ್ರಾಮಭಾರತಿ ಅಧ್ಯಕ್ಷ ಎನ್.ಡಿ.ನಾಗೇಂದ್ರರಾವ್ ಅಧ್ಯಕ್ಷತೆ ವಹಿಸಿದ್ದರು.ವಿನಾಯಕ ಪ್ರಭು ನಿರೂಪಿಸಿದರು.