ರಿಪ್ಪನ್‌ಪೇಟೆ : ಪಟ್ಟಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ಸಂಜೆ ಗುಡುಗು, ಸಿಡಿಲಬ್ಬರದಿಂದ ಆಲಿಕಲ್ಲು ಸಹಿತ ಸುರಿದ ಧಾರಾಕಾರ ಮಳೆಯು ರಣ ಬಿಸಿಲಿನಿಂದ ಕಂಗೆಟ್ಟಿದ್ದ ರೈತರಲ್ಲಿ ಮಂದಹಾಸ ಮೂಡಿಸಿದೆ. ಅಡಿಕೆ, ಬಾಳೆ, ಕಬ್ಬು, ತೆಂಗು, ಕಾಳುಮೆಣಸು ಸೇರಿದಂತೆ ಇನ್ನಿತರ ಬೆಳೆಗಳಿಗೆ ತುಂಬಾ ಅನುಕೂಲವಾಗಿದೆ.
ಬರದ ಛಾಯೆ ಎದುರಿಸುತ್ತಿದ್ದ ಹೊಸನಗರ ತಾಲ್ಲೂಕಿನ ರೈತರು ಮಳೆರಾಯನ ಆರ್ಭಟದಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದೊಂದು ತಿಂಗಳಿಂದ ಬಿರು ಬಿಸಿಲಿಗೆ ಬೆಂಡಾಗಿದ್ದ ಇಳೆ ತಂಪುಗೊಂಡಿದೆ.
ಕೋಡೂರು, ಅಮೃತ, ಹೆದ್ದಾರಿಪುರ, ರಿಪ್ಪನ್‌ಪೇಟೆ, ಚಿಕ್ಕಜೇನಿ, ಹುಂಚ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಳೆಯಾಗಿದೆ.
ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಉಂಟಾಗಿತ್ತು. ಸಂಜೆ 5 ಗಂಟೆಯಿಂದ ಆರಂಭಗೊಂಡ ಮಳೆ ಸತತ ಒಂದು ಗಂಟೆ ಕಾಲ ಸುರಿಯಿತು. ಬಾವಿ, ಹೊಳೆ-ಹಳ್ಳ, ಕೆರೆ-ಕಟ್ಟೆಗಳು ಬತ್ತಿದ್ದವು. ನೀರಿಲ್ಲದೆ ಅಡಿಕೆ ತೋಟಗಳು ಒಣಗಿದ್ದವು. ಹಲವೆಡೆ ಕುಡಿಯುವ ನೀರಿಗೂ ಬರ ಉಂಟಾಗಿತ್ತು. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು.
ಇನ್ನೂ ದಕ್ಷಿಣ ಒಳನಾಡಿನ ಚಾಮರಾಜನಗರ, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಜೊತೆಗೆ ರಾಜ್ಯದ ಹಲವೆಡೆ ಮುಂದಿನ 48 ಗಂಟೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಎರಡು ದಿನ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಗಾಳಿಯು ಪ್ರತಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬೀಸಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.