ಸೇವಿಸುವ ಗಾಳಿ, ನೀರು ಮತ್ತು ಆಹಾರ ಎಲ್ಲವೂ ಕಲುಷಿತ ; ಡಾ. ಧನಂಜಯ ಸರ್ಜಿ

0 37

ಶಿವಮೊಗ್ಗ : ನಾವು ಸೇವಿಸುವ ಗಾಳಿ, ನೀರು ಮತ್ತು ಆಹಾರ ಎಲ್ಲವೂ ಕಲುಷಿತಗೊಳ್ಳುತ್ತಿದ್ದು, ಪರಿಸರವನ್ನು ಸಂರಕ್ಷಣೆ ಮಾಡುವ ಕೆಲಸವನ್ನು ಎಲ್ಲರೂ ಸೇರಿ ಮಾಡಬೇಕಿದೆ ಎಂದು ಸರ್ಜಿ ಆಸ್ಪತ್ರೆಗಳ ಸಮೂಹದ ವ್ಯವಸ್ಥಾಪಕ ನಿದೇರ್ಶಕರಾದ ಡಾ.ಧನಂಜಯ ಸರ್ಜಿ ಸಲಹೆ ನೀಡಿದರು.

ಆಲ್ಕೊಳದ ದಿ ಶಿವಮೊಗ್ಗ ಮಲ್ಟಿಪರ್ಪಸ್‌ ಸೋಷಿಯಲ್‌ ಸೊಸೈಟಿ , ಸರ್ಜಿ ಸಮೂಹ ಆಸ್ಪತ್ರೆ ಇವರ ಸಹಯೋಗದಲ್ಲಿ ಶುಕ್ರವಾರ ಅನುಪಿನ ಕಟ್ಟೆಯ ಘನ ತ್ಯಾಜ್ಯ ವಿಲೇವಾರಿ ಘಟಕದ ಆವರಣದಲ್ಲಿ ಹಮ್ಮಿಕೊಂಡಿದ್ದ ಒಂದು ಸಾವಿರ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪರಿಸರ ಸಂರಕ್ಷಣೆ ಹಾಗೂ ತ್ಯಾಜ್ಯ ವಿಲೇವಾರಿ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಮೂಲಕ ಜಾಗೃತಿ ಉಂಟು ಮಾಡಬೇಕಿದೆ ಎಂದರು.

ಎಷ್ಟೇ ತಂತ್ರಜ್ಞಾನ ಮುಂದುವರಿದರೂ ನೀರು, ನೈಸರ್ಗಿಕ ಗಾಳಿಯನ್ನು ಉತ್ಪಾದನೆ ಮಾಡಲಾಗಿಲ್ಲ, ಹಾಗೆಯೇ ಸೂರ್ಯನ ಬೆಳಕು ಹಾಗೂ ರಕ್ತವನ್ನು ಉತ್ಪಾದನೆ ಮಾಡಲಾಗಿಲ್ಲ,ಗಿಡ, ಮರವನ್ನು ಬೆಳೆಸುವ ಕಾಯಕವನ್ನು ಮಾಡಬೇಕಿದೆ. ಹಾಗೆಯೇ ಕೆರೆ ಕಟ್ಟೆಗಳನ್ನು ನಿರ್ಮಿಸಬೇಕಿದೆ. ಪ್ರತಿಯೊಬ್ಬರಲ್ಲೂ ಪ್ಲಾಸ್ಟಿಕ್‌ ಬಳಕೆ ಮಾಡದಂತೆ ಜಾಗೃತಿ ಮೂಡಿಸಬೇಕಿದೆ. ಬಳಸಿ ಭೂಮಿಗೆಸೆಯುವ ಪ್ಲಾಸ್ಟಿಕ್‌ 200 ವರ್ಷವಾದರೂ ಕೊಳೆಯುವುದಿಲ್ಲ, ಬಳಿಕ ಅದು ಗಾಳಿ, ನೀರು ಹಾಗೂ ಆಹಾರದ ಮೂಲ ಮೈಕ್ರೋ ಆಗಿ ದೇಹವನ್ನು ಸೇರುತ್ತಿದೆ. ಈ ಬಗ್ಗೆ ಎಲ್ಲರೂ ಅರಿವು ಹೊಂದಬೇಕು. ಭಗವಂತ ಕೊಟ್ಟಿರುವ ಸಂಪತ್ತು ಹಾಗೂ ಸಂಪನ್ಮೂಲವನ್ನು ಉಳಿಸಿಕೊಳ್ಳುವ ಬದಲು ಹಾಳು ಮಾಡುತ್ತಿದ್ದೇವೆ . ಇನ್ನು ಮುಂದಾದರೂ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ ಎಂದರು.

ಶಿವಮೊಗ್ಗ ಮಲ್ಟಿ ಪರ್ಪಸ್‌ ಸೋಷಿಯಲ್‌ ಸೊಸೈಟಿ ನಿರ್ದೇಶಕರಾದ ಫಾ.ಕ್ಲಿಫರ್ಡ್‌ ರೋಷನ್‌ ಪಿಂಟೋ ಮಾತನಾಡಿ, ನಮ್ಮ ಸಂಸ್ಥೆಯ ಸಂಸ್ಥಾಪನಾ ದಿನದ ಅಂಗವಾಗಿ ನಗರದೆಲ್ಲೆಡೆ ಹಣ್ಣಿನ ಗಿಡ ಹಾಗೂ ಇತರೆ ಸಸಿಗಳನ್ನುನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಸ್ಥೆಯು 34 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ನಾನಾ ರೀತಿಯ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ. ಪರಿಸರ ಸಂರಕ್ಷಣೆ ಸಲುವಾಗಿ ಬೇರೆ ಬೇರೆ ಕಡೆ ಈಗಾಗಲೇ ಆರು ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ನೆಟ್ಟ ಗಿಡಗಳನ್ನು ಎಲ್ಲರೂ ಪೋಷಣೆ ಮಾಡುವ ಕೆಲಸವನ್ನು ಮಾಡಬೇಕು. ಅಲ್ಲದೇ ಪ್ರತಿಯೊಬ್ಬರೂ ಪ್ಲಾಸ್ಟಿಕ್‌ ನ್ನು ಮಿತವಾಗಿ ಬಳಸಬೇಕು, ನೀರು ಮತ್ತು ಮಣ್ಣಿನ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು ಎಂದು ಸಲಹೆ ನೀಡಿದರು.

ವಕೀಲರಾದ ಕೆ.ಪಿ.ಶ್ರೀಪಾಲ್‌, ಬೆಂಗಳೂರು ಕ್ರಾಸ್‌ ಸಂಸ್ಥೆಯ ಮಹಿಳಾ ಸಬಲೀಕರಣ ಯೋಜನೆ ಸಿಸ್ಟರ್‌ ನ್ಯಾನರ‍ಸಿ ಹಾಗೂ ಘಟಕದ ಸಿಬ್ಬಂದಿ, ಸ್ವ ಸಹಾಯ ಮಹಿಳೆಯರು ಪ್ರತಿನಿಧಿಗಳು, ಸಂಸ್ಥೆಯ ಸಿಬ್ಬಂದಿ ಹಾಜರಿದ್ದರು.

Leave A Reply

Your email address will not be published.

error: Content is protected !!