ತೆರೆದ ಬಾವಿ ಸ್ವಚ್ಛಗೊಳಿಸಿದ ಗ್ರಾಪಂ ಸದಸ್ಯ
ರಿಪ್ಪನ್‌ಪೇಟೆ: ಬೇಸಿಗೆ ಕಾಲವಾಗಿದ್ದು ಇಲ್ಲಿನ ಹಲವು ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದು ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರಿತಪ್ಪಿಸುವಂತಾಗಿರುವಾಗ ಇಲ್ಲಿಗೆ ಸಮೀಪದ ಅಮೃತ ಗ್ರಾಮ ಪಂಚಾಯ್ತಿ ಸದಸ್ಯ ಸುರೇಶ್ ಎಂಬುವರು ಪಾಳು ಬಿದ್ದ ತೆರೆದ ಬಾವಿಯಲ್ಲಿ ಕಸ ಕಡ್ಡಿ ತುಂಬಿಕೊಂಡು ಬಳಕೆಗೆ ಯೋಗ್ಯವಾಗಿರದ ಬಾವಿಗೆ ಸ್ವಯಂ ಪ್ರೇರಿತವಾಗಿ ಇಳಿದು ಬಾವಿಯನ್ನು ಸ್ವಚ್ಚಗೊಳಿಸುವ ಮೂಲಕ ಪರಿಶುದ್ದ ನೀರು ನೀಡುವ ಮಹತ್ವದ ಕಾರ್ಯಕ್ಕೆ ಮುಂದಾಗಿ ಸಾರ್ವಜನಿಕರ ಪ್ರಶಂಸೆಗೆ ಕಾರಣ ಆಗಿದ್ದಾರೆ.

ರಾಜ್ಯದ ಗೃಹ ಸಚಿವರ ಸ್ವಕ್ಷೇತ್ರ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಹುಂಚ ಹೋಬಳಿಯ ಅಮೃತ ಗ್ರಾಮ ಪಂಚಾಯ್ತಿ ಸದಸ್ಯನ ಸಾಮಾಜಿಕ ಕಳಕಳಿ ದೇಶಕ್ಕೆ ಮಾದರಿಯಾಗಿದ್ದು ಇದೇ ರೀತಿಯಲ್ಲಿ ಸಮಾಜು ಮುಖಿ ಕಾರ್ಯ ಮಾಡಲು ಇಂತಹದೇ ಎಂಬ ನಿಯಮವೇನು ಇಲ್ಲ. ಮಾಡುವ ಇಚ್ಚಾಶಕ್ತಿಯಿದ್ದರೆ ಏನೂ ಬೇಕಾದರೂ ಮಾಡಬಹುದು ಎಂಬುದಕ್ಕೆ ಇಲ್ಲಿನ ಸುರೇಶ ಸಾಕ್ಷಿಯಾಗಿದ್ದಾರೆ.
ಯಾವುದೇ ಪ್ರತಿಫಲಾಪೇಕ್ಷೆಯನ್ನು ಬಯಸದೇ ಮಾನವೀಯತೆಯ ದೃಷ್ಟಿಯಿಂದ ಸಮಾಜಮುಖಿ ಕಾರ್ಯವನ್ನು ಮಾಡುವ ಮನಸ್ಸು ಇದ್ದರೇ ಸಾಕು ಎನ್ನುತ್ತಾ ತನ್ನ ಕಾಯಕವನ್ನು ಮುಂದುವರಿಸುತ್ತಾ ಮಾಧ್ಯಮದವರ ಬಳಿ ತನ್ನ ಮಾನವೀಯತೆಯನ್ನು ಈ ರೀತಿಯಲ್ಲಿ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಅಡಳಿತ ಮಂಡಳಿ ಸೇರಿದಂತೆ ಪಿಡಿಓ ಸುಧಾ ಹಾಜರಿದ್ದು ಬೇಸಿಗೆಯಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಸುರೇಶ್ ಪರಿಹಾರ ಮಾರ್ಗ ಕಂಡು ಹಿಡಿದಿರುವುದು ನಮಗೆ ಸ್ಫೂರ್ತಿ ನೀಡಿದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಇತ್ತೀಚಿನ ದಿನಗಳಲ್ಲಿ ಹಣ ಮಾಡುವುದೇ ಗುರಿಯನ್ನಾಗಿಸಿಕೊಂಡಿರುವ ರಾಜಕೀಯ ಮುಖಂಡರಿಗೆ ಇಲ್ಲಿನ ಗ್ರಾಮೀಣ ಭಾಗದ ಮನುಷ್ಯತ್ವದ ಜನಪ್ರತಿನಿಧಿಯ ಕಾರ್ಯ ಕಂಡರೇ ಏನಾಗುವುದು.