ಗಾಂಜಾ ಸಾಗಾಣೆ ಮಾಡುವ ವೇಳೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ ಮಹಿಳೆಗೆ 4 ವರ್ಷ ಕಠಿಣ ಜೈಲು ಶಿಕ್ಷೆ ಜೊತೆಗೆ ದಂಡ !

0 6

ಶಿವಮೊಗ್ಗ : ಗಾಂಜಾ ಸಾಗಾಣೆ ಮಾಡುವ ವೇಳೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ ಮಹಿಳೆಗೆ 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ, ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡ ಅವರು ತೀರ್ಪು ನೀಡಿದ್ದಾರೆ.


ಭದ್ರಾವತಿ ತಾಲೂಕಿನ ನಯೀಮ್ ಖಾನಮ್ (32) ಶಿಕ್ಷೆಗೊಳಗಾದ ಮಹಿಳೆ ಎಂದು ಗುರುತಿಸಲಾಗಿದೆ. ದಂಡ ಕಟ್ಟಲು ವಿಫಲವಾದಲ್ಲಿ ಹೆಚ್ಚುವರಿಯಾಗಿ 6 ತಿಂಗಳ ಸಾದಾ ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಧೀಶರು ಫೆ.28 ರಂದು ನೀಡಿದ ತೀರ್ಪಿನಲ್ಲಿ ಆದೇಶಿಸಿದ್ದಾರೆ.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಸುರೇಶ್ ಕುಮಾರ್ ಅವರು ವಾದ‌ ಮಂಡಿಸಿದ್ದರು.


ಪ್ರಕರಣದ ಹಿನ್ನಲೆ:

2019 ರ ಮೇ 7 ರಂದು ಖಚಿತ ಮಾಹಿತಿ ಮೇರೆಗೆ ಡಿಸಿಐಬಿ ಪೊಲೀಸರು ಕಾರ್ಯಾಚರಣೆ ನಡೆಸಿ, ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಬಿಳಕಿ ಕ್ರಾಸ್ ಸಮೀಪ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ನಯೀಮ್ ಖಾನಮ್ ಅವರನ್ನು ವಶಕ್ಕೆ ಪಡೆದಿದ್ದರು.


ಮಹಿಳೆ ಕೊಂಡೊಯ್ಯುತ್ತಿದ್ದ ಬ್ಯಾಗ್ ಪರಿಶೀಲನೆ ನಡೆಸಿದ ವೇಳೆ, 7 ಕೆ.ಜಿ. ತೂಕದ ಒಣ ಗಾಂಜಾ ಪತ್ತೆಯಾಗಿತ್ತು. ಮಹಿಳೆಯನ್ನು ಬಂಧಿಸಿದ್ದ ಪೊಲೀಸರು, ಎನ್.ಡಿ.ಪಿ.ಎಸ್. ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ತದನಂತರ ಮಹಿಳೆಯ ವಿರುದ್ದ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

Leave A Reply

Your email address will not be published.

error: Content is protected !!