ಒಮ್ಮೊಮ್ಮೆ ಹೀಗಾಗಿಬಿಡುತ್ತದೆ.. ಏನೋ ಮಾಡಲು ಹೋಗಿ ಇನ್ನೇನೋ ಆಗಿಬಿಡುತ್ತದೆ.ಅಸಲಿಗೆ ಉದ್ದೇಶಪೂರ್ವಕವಾಗಿ ಮಾಡಿಲ್ಲವಾದರೂ ಪರಿಣಾಮ ಮಾತ್ರ ವ್ಯತಿರಿಕ್ತವಾಗಿ ಬಿಡುತ್ತದೆ.
ಆಭರಣ ಜ್ಯೂವೆಲರಿ ತನ್ನ ಜಾಹೀರಾತು ಫಲಕದಲ್ಲಿ ಅಡಿಕೆ ಬೆಳೆಗಾರ ರೈತನ ಫೋಟೋ ಹಾಕಿ ಅವನ ಮೈ ತುಂಬಾ ಬಂಗಾರದ ಆಭರಣ ಹಾಕಿ ನಿಲ್ಲಿಸಿ ಬಿಟ್ಟಿದೆ.
ಮೇಲ್ನೋಟಕ್ಕೆ ಇದು ಆಭರಣ ಜ್ಯುವೆಲರಿ ರೈತರ ಫೋಟೋ ಹಾಕಿ ತನ್ನ ದೊಡ್ಡತನ ಮೆರೆದಿದೆ ಅನ್ನಿಸದಿರಲಾರದು..
ಆದರೆ ಇದರ ಪರಿಣಾಮ ಬಹುಷಃ ಯಾರೂ ಊಹಿಸಿರದ ಸಂದೇಶವನ್ನು ಸಾರ್ವಜನಿಕರಿಗೆ ನೀಡುವುದು ಮಾತ್ರ ಸತ್ಯ. ಇಲ್ಲಿ ಉದ್ದೇಶ ಬೇರೆಯದೇ ಆದರೂ ಪರಿಣಾಮ ಮಾತ್ರ ಮತ್ತೊಂದು ಆಗಿರುವುದು ನಿಜ.
ಅಡಿಕೆ ಬೆಳೆಗಾರರನ್ನು ಹೊರತುಪಡಿಸಿ ಪಟ್ಟಣದ ಅದೆಷ್ಟೋ ಜನರಿಗೆ ಅಡಿಕೆ ಬೆಳೆ ಬಂಗಾರದ ಬೆಳೆ ಅನ್ನುವ ತಪ್ಪು ಮಾಹಿತಿ ತಲೆಯೊಳಗೆ ಬೇರೂರಿ ಕುಳಿತುಬಿಟ್ಟಿದೆ. ಹಿಂದೊಂದು ಕಾಲ ಹಾಗೆ ಇತ್ತು ಅನ್ನುವುದು ಸತ್ಯವಿರಲೂಬಹುದು. ಆದರೆ ಪ್ರಸ್ತುತ ವಿಚಾರಗಳೆ ಬೇರೆ..
ಒಂದು ಕಾಲದಲ್ಲಿ ಮಲೆನಾಡಿಗೆ ಸೀಮಿತವಾಗಿದ್ದ ಅಡಿಕೆ ಈಗ ಎಲ್ಲಾ ಕಡೆ ರಕ್ಕಸ ಗಾತ್ರದಲ್ಲಿ ಆವರಿಸಿ ತನ್ನ ಎಲ್ಲೆಯನ್ನು ತಾನೇ ಮೀರಿ ಹೊರಟಿದೆ.
ಎಲೆಚುಕ್ಕಿ ರೋಗದಂತ ಮಾರಕ ರೋಗ ಅಡಿಕೆಗೆ ತಗುಲಿ ಸಮಸ್ತ ಮಲೆನಾಡನ್ನೇ ಆಪೋಷನ ತೆಗೆದುಕೊಳ್ಳಲು ತಯಾರಾಗಿ ನಿಂತಿದೆ. ಅಡಿಕೆಯನ್ನೇ ನಂಬಿ, ಅಡಿಕೆಯೇ ಆರ್ಥಿಕ ಆಧಾರವಾದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕನ್ನಡ ಜಿಲ್ಲೆಗಳು ಮಾರಕ ಅಡಿಕೆ ರೋಗಕ್ಕೆ ಹೆದರಿ ಮುಂದೇನು ಎಂದು ಅಕ್ಷರಶಃ ಪತರುಗುಟ್ಟಿ ಹೋಗಿದೆ.
ನಾನಾ ಕಾರಣಕ್ಕೆ ಅಡಿಕೆ ಉತ್ಪಾದನಾ ವೆಚ್ಚ ಅಧಿಕವಾಗಿ ಸಾಲದ ಸುಳಿಯಲ್ಲಿ ಬಹುತೇಕ ಬೆಳೆಗಾರ ರೈತರು ಇನ್ನಿಲ್ಲದ ಪರಿಪಾಡಲು ಅನುಭವಿಸುತ್ತಿದ್ದಾರೆ. ಮಲೆನಾಡಿನ ಅರ್ಧ ಎಕರೆ, ಒಂದು ಎಕರೆ ಅಡಿಕೆ ತೋಟ ಉಳ್ಳವರಿಗೆ ಯಾರಿಗೂ ಕೇವಲ ಅಡಿಕೆಯಿಂದ ಜೀವನ ನಡೆಸಲು ಸಾಧ್ಯವೇ ಆಗದ ಸ್ಥಿತಿ ತಲುಪಿದ್ದಾರೆ. ಅಂದಿಗೂ ಇಂದಿಗೂ ಅಡಿಕೆ ದರವೇನೋ ಹೆಚ್ಚಳ ಆದಂತೆ ಕಂಡರೂ ಈಗ ಹತ್ತು ವರ್ಷಗಳ ಹಿಂದೆ ಮಲೆನಾಡ ಬೆಳೆಗಾರರು ಎಕರೆವಾರು ತೆಗೆಯುತ್ತಿದ್ದ ಉತ್ಪತ್ತಿ ಶೇಕಡ 60 ಕಡಿಮೆಯಾಗಿ ಹೋಗಿದೆ. ಇರುವಷ್ಟು ಉತ್ಪತ್ತಿಯೂ ರೋಗಕ್ಕೆ ಬಲಿ ಆದರೆ ಮುಂದಿನ ಜೀವನದ ಗತಿಯೇನು ಎನ್ನುವ ಆತಂಕದಿಂದ ತಿಂದ ಅನ್ನ ಮೈಗೆ ಹತ್ತದಂತಾಗಿಬಿಟ್ಟಿದ್ದಾರೆ.
ಇಂತಹ ಸ್ಥಿತಿಯಲ್ಲಿ ಅಡಿಕೆ ಬೆಳೆಗಾರ (ಮಲೆನಾಡಿನ) ಇರಬೇಕಾದರೆ ಜಾಹೀರಾತು ಫಲಕದಲ್ಲಿನ ಮೈ ತುಂಬಾ ಆಭರಣ ಹೊತ್ತ ಅಡಿಕೆ ಬೆಳೆಗಾರ ರೈತನ ಫೋಟೋ ನೋಡುವ ಜನರಿಗೆ
ಬಂಗಾರ ಬೆಳೆಯುವ ಬೆಳೆಗಾರನಿಗೆ ಇದೇನು ಲೆಕ್ಕ ಅನ್ನಿಸದೇ ಇರಲಾರದೇ..? ತಪ್ಪು ಸಂದೇಶ ರವಾನೆ ಆಗದಿರುವುದೇ?? ಅಡಿಕೆ ಬೆಳೆಗಾರ ಆಗರ್ಭ ಶ್ರೀಮಂತ ಅನ್ನುವ ಮೂಡನಂಬಿಕೆಗೆ ಪುಷ್ಟಿ ನೀಡುವುದಿಲ್ಲವೇ…???!! ಸಂತ್ರಸ್ತ ಅಡಕೆ ಬೆಳೆಗಾರನಾಗಿ ನನಗೆ ಅನ್ನಿಸಿದ್ದು ಇಷ್ಟು… ಸರಿಯೋ ತಪ್ಪೋ ಗೊತ್ತಿಲ್ಲ..
ಒಟ್ಟಿನಲ್ಲಿ ಮಾರಕ ಎಲೆಚುಕ್ಕಿ ರೋಗಕ್ಕೆ ಹೆದರಿ ನಗುವುದನ್ನೇ ಮರೆತ ಮಲೆನಾಡ ಅಡಿಕೆ ಬೆಳೆಗಾರರ ನಗುವಿನ ಶ್ರೀಮಂತಿಕೆಯನ್ನಾದರೂ ಕಸಿಯದೆ ಬಿಡಿ ಎಂಬ ವಿನಂತಿಯೊಂದಿಗೆ.
ಬರಹ: ಪುರುಷೋತ್ತಮ ಶಾನುಬೋಗ್