ಎಸ್‌ಕೆಪಿ ಶಿವಮೊಗ್ಗ ಪಬ್ಲಿಕ್ ಶಾಲೆಯ ವಿಶೇಷ ವಾರ್ಷಿಕೋತ್ಸವ | ಜಾತಿ-ಧರ್ಮ ಮೀರಿದ್ದು ಶಿಕ್ಷಣ ; ಮಧು ಬಂಗಾರಪ್ಪ

0 265

ಶಿವಮೊಗ್ಗ : ಶಿಕ್ಷಣಕ್ಕೆ ಜಾತಿ-ಮತ- ಧರ್ಮಗಳಿಲ್ಲ. ಶಿಕ್ಷಣದಿಂದ ಮಾತ್ರ ನಂಬಿದ ದೇವರನ್ನು ಕಾಣಲು ಸಾಧ್ಯ. ಶಿಕ್ಷಣವಿಲ್ಲದಿದ್ದರೆ ಯಾವುದೇ ಧರ್ಮ ನಿರರ್ಥಕ ಎಂದು ಜಿಲ್ಲಾ ಉಸ್ತುವಾರಿ ಮಂತ್ರಿಯೂ ಶಿಕ್ಷಣ ಸಚಿವರು ಆದ ಮಧು.ಎಸ್ ಬಂಗಾರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಶನಿವಾರದಂದು ರಾತ್ರಿ ಇಲ್ಲಿನ ಗೋಪಾಳದ ಎಸ್.ಕೆ.ಪಿ. ಶಿವಮೊಗ್ಗ ಪಬ್ಲಿಕ್ ಸ್ಕೂಲಿನ ವಿಶೇಷ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಲ್ಪಸಂಖ್ಯಾತರ ಶಾಲೆಗಳು ಅಭಿವೃದ್ಧಿಯ ಹಾದಿಯಲ್ಲಿರಬೇಕು. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪರವರು ಧರ್ಮಗಳನ್ನು ಮೀರಿ ಶಿಕ್ಷಣಕ್ಕೆ ಒತ್ತು ಕೊಟ್ಟು ಅಭಿವೃದ್ಧಿ ಪಥದಲ್ಲಿ ಎಲ್ಲರನ್ನೂ ಸಾಗಿಸುತ್ತಿದ್ದರು. ಮಕ್ಕಳಿಗೆ ಶಕ್ಷಣದ ಮೂಲಕವಷ್ಟೇ ಉದ್ಧರಿಸಲು ಸಾಧ್ಯ. ಅವರ ಉದ್ಧಾರದಿಂದ ದೇಶ ಮತ್ತು ಧರ್ಮ ಉದ್ಧಾರವಾಗುತ್ತದೆ ಎಂದು ಹೇಳಿದರು.

ಎಸ್‌ಕೆಪಿ ಶಿವಮೊಗ್ಗ ಪಬ್ಲಿಕ್ ಶಾಲೆ ಬಹು ದೊಡ್ಡ ಶೈಕ್ಷಣಿಕ ಕನಸುಗಳನ್ನು ಇಟ್ಟುಕೊಂಡಿದೆ. ಇದರ ಚೇರ್ಮನ್ ಜನಾಬ್ ಮೊಹಮದ್ ಅನ್ವರ್ ಖಾದ್ರಿ ಬಹುದೊಡ್ಡ ಕನಸುಗಾರ. ಅವರ ಈ ಕನಸುಗಳಿಗೆ ಸಾಕಾರವಾಗಲು ಸಾಧ್ಯವಾದಷ್ಟು ತಾವು ಸಹಕರಿಸುವುದಾಗಿ ಮಧು ಬಂಗಾರಪ್ಪ ಭರವಸೆ ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಮಾತನಾಡಿ, ವಿಶಿಷ್ಟವಾಗಿ ರೂಪುಗೊಳ್ಳುತ್ತಿರುವ ಎಸ್‌ಕೆಪಿ ಶಿವಮೊಗ್ಗ ಪಬ್ಲಿಕ್ ಸ್ಕೂಲ್ ತನ್ನ ವಾರ್ಷಿಕೋತ್ಸವವನ್ನು ವಿಶೇಷವಾಗಿಯೇ ಆಚರಿಸಿಕೊಳ್ಳುತ್ತಿದೆ. ಇದಕ್ಕೆ ತಪ್ಪದೇ ಬರಬೇಕೆಂದು ಸಚಿವ ಮಧು ಬಂಗಾರಪ್ಪರವರನ್ನು ಒತ್ತಾಯಪೂರ್ವಕವಾಗಿಯೇ ಬರಮಾಡಿಕೊಂಡೆ. ಈ ಶಾಲೆಯ ಕಾರ್ಯಕ್ರಮ ಮತ್ತು ಕನಸುಗಳು ಸಾಕಷ್ಟು ಭರವಸೆ ಮೂಡಿಸುವಂತಿವೆ. ಮುಸ್ಲಿಂ ಸಮುದಾಯದ ಮಕ್ಕಳು ದಾರಿ ತಪ್ಪದಂತೆ ಇರಲು ಇಂತಹ ಶಾಲೆಗಳು ಕಾರಣವಾಗಬೇಕು. ಇಲ್ಲಿ ಅಬ್ದುಲ್ ಕಲಾಂನಂತಹ ಮೇರು ಪ್ರತಿಭೆಗಳು ಕೂಡ ಇರುತ್ತಾರೆ. ಅವರಿಗೆ ಇಂತಹ ಶಾಲೆಗಳ ಮೂಲಕ ಪ್ರೋತ್ಸಾಹ ಸಿಗಬೇಕು ಎಂದರು.

ಎಸ್‌ಕೆಪಿ ಶಿವಮೊಗ್ಗ ಪಬ್ಲಿಕ್ ಶಾಲೆಯ ಚೇರ್ಮನ್ ಜನಾಬ್ ಮೊಹಮದ್ ಅನ್ವರ್ ಖಾದ್ರಿ ಮಾತನಾಡಿ, ಕಳೆದ ಒಂದು ವರ್ಷದಿಂದ ಈ ಶಾಲೆಯನ್ನು ಕೈಗೆತ್ತಿಕೊಂಡಿದ್ದೇವೆ. ಸರ್ವ ಧರ್ಮಗಳ ಮಕ್ಕಳಿಗೂ ಈ ಶಾಲೆ ಭವಿಷ್ಯ ರೂಪಿಸಲು ಸನ್ನದ್ಧವಾಗಿದೆ. ಜಾವಗಲ್‌ನ ಹಜರತ್ ಖಲಂದರ್ ಷಾ ಖಾದ್ರಿಯವರ ಆಶೀರ್ವಾದದಿಂದ ಈ ಶಾಲೆ ಆರಂಭವಾಗಿದೆ. ಇಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಿಂದ ಹಿಡಿದು, ಪ್ರತಿಯೊಬ್ಬರನ್ನೂ ಈ ದೇಶ ಮತ್ತು ಸಮಾಜಕ್ಕೆ ಕೊಡುಗೆಯಾಗಿ ನೀಡುವ ಕೆಲಸ ಮಾಡಲಿದ್ದೇವೆ ಎಂದು ಹೇಳಿದರು.

ಯಾವುದೇ ಶಾಲೆ ನೀಡದ ಸೌಲಭ್ಯಗಳನ್ನೆಲ್ಲ ಇಲ್ಲಿ ನೀಡಲಾಗುತ್ತಿದೆ. ಈ ವಾರ್ಷಿಕೋತ್ಸವದಲ್ಲಿ 9 ಮಕ್ಕಳಿಗೆ ಸೈಕಲ್, 16 ವಿದ್ಯಾರ್ಥಿಗಳಿಗೆ ಸ್ಟಡಿ ಟೇಬಲ್, 30 ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ಬೋರ್ಡ್‌ಗಳು, ಶಿಕ್ಷಕಿಯರಿಗೆ ದ್ವಿಚಕ್ರ ವಾಹನ, ಪೋಷಕರಲ್ಲಿ ಕ್ರೀಡಾಸಕ್ತಿ ಮೂಡಿಸಿ ಮಿಕ್ಸಿ, ಕುಕ್ಕರ್, ಹಾಟ್‌ಬಾಕ್ಸ್ ಹಾಗೂ ವಿವಿಧ 300 ಜನ ಮಕ್ಕಳಿಗೆ ವಿವಿಧ ಬಹುಮಾನಗಳನ್ನು ನೀಡುತ್ತಿದ್ದೇವೆ. ಅಲ್ಲದೇ, 18 ಜನ ಅತ್ಯುತ್ತಮ ಶಿಕ್ಷಕರನ್ನು ಆಯ್ಕೆ ಮಾಡಿ ಮದೀನಾ ಷರೀಫ್ ಬಹುದಾದೆಗೆ 12 ದಿನಗಳ ಪ್ಯಾಕೇಜ್ ಟೂರ್ ವ್ಯವಸ್ಥೆ ಮಾಡಿದ್ದೇವೆ. ಜೊತೆಗೆ ಮೂರು ಜನ ಶಿಕ್ಷಕರಿಗೆ ತಿರುಪತಿಯ ವಿಶೇಷ ದರ್ಶನಕ್ಕಾಗಿ ವಿಮಾನ ಟಿಕೆಟ್ ಪ್ಯಾಕೇಜ್ ನೀಡಿದ್ದೇವೆ. ಎಲ್ಲರಲ್ಲೂ ಉತ್ಸಾಹ ತುಂಬಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮೂಡಿಸುತ್ತಿದ್ದೇವೆ. ಇಲ್ಲಿ ಯಾರಿಂದಲೂ ಹಣ ಪಡೆಯದೇ ಸ್ವಂತ ದುಡಿದ ಹಣವನ್ನೇ ಶಾಲೆಯ ಅಭಿವೃದ್ಧಿಗೆ ಖರ್ಚು ಮಾಡಲಾಗುತ್ತಿದೆ. ಮುಂದಿನ ವರ್ಷದಿಂದ ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆ ಹಾಗೂ ಈ ಊಟದ ಗುಣಮಟ್ಟ ಕಾಯ್ದುಕೊಳ್ಳಲು ವೈದ್ಯರನ್ನು ಕೂಡ ನೇಮಿಸುವ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಸೈಯದ್ ಅಖ್ತರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ಶಾಸಕ ಎಸ್.ಎನ್.ಚನ್ನಬಸಪ್ಪ, ಸಂಸ್ಥೆಯ ಟ್ರಸ್ಟಿಗಳಾದ ಸಿ.ಹೆಚ್.ಮೊಹಮದ್ ರಿಯಾಜ್ ಖಾದ್ರಿ, ಶೇಖ್ ಮೊಹಮದ್ ಜಲಾಲ್ ಖಾದ್ರಿ, ಮೊಹಮದ್ ಶಫೀವುಲ್ಲಾ, ಬಸವರಾಜ್ ಮಲ್ಲಪ್ಪ, ಮಧುಕುಮಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!