ಅತಿಥಿ ಉಪನ್ಯಾಸಕರಿಗೆ ಈಗ ಘೋಷಿಸಿರುವ ಆಶ್ವಾಸನೆಗಳು ಕೇವಲ ಸಮಾಧಾನಕರವೇ ಹೊರತು ತೃಪ್ತಿದಾಯಕವಲ್ಲ ; ಆಯನೂರು ಮಂಜುನಾಥ್

0 204


ಶಿವಮೊಗ್ಗ : ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರಿಗೆ ಈಗ ಘೋಷಿಸಿರುವ ಆಶ್ವಾಸನೆಗಳು ಕೇವಲ ಸಮಾಧಾನಕರವೇ ಹೊರತು ತೃಪ್ತಿದಾಯಕವಲ್ಲ. ಇದಕ್ಕೆ ಬದಲಾಗಿ ಸೇವಾ ಭದ್ರತೆ ನೀಡಲು ಮುಂದಾಗಬೇಕು ಎಂದು ಮಾಜಿ ಸಂಸದ ಹಾಗೂ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತ ರಕ್ಷಣಾ ಸಮಿತಿಯ ಗೌರವಾಧ್ಯಕ್ಷ ಆಯನೂರು ಮಂಜುನಾಥ (Ayanuru Manjunath) ಸರ್ಕಾರಕ್ಕೆ ಮನವಿ ಮಾಡಿದರು.


ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರ ಬೇಡಿಕೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉನ್ನತ ಶಿಕ್ಷಣ ಸಚಿವ ಸುಧಾಕರ್ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಅದು ಸ್ವಾಗತರ್ಹ, ಆದರೆ ಇದು ಭಾಗಶಃ ಸಂತೋಷವಷ್ಟೇ, ಈಗಾಗಲೇ ನೀಡಿರುವ ಹಲವು ಭರವಸೆಗಳನ್ನು ಅವರು ಈಡೇರಿಸಿದ್ದಾರೆ. ಆದರೆ ಇವೆಲ್ಲವೂ ಅಪೂರ್ಣವೇ ಆಗಿವೆ. ಈ ಎಲ್ಲಾ ಯೋಜನೆಗಳು ಅತಿಥಿ ಉಪನ್ಯಾಸಕರನ್ನು ತಲುಪಬೇಕಾದರೆ ಅವರಿಗೆ ಮೊದಲು ಸೇವಾ ಭದ್ರತೆ ನೀಡಬೇಕು ಎಂದರು.


10 ವರ್ಷ ನಿರಂತರ ಸೇವೆ ಸಲ್ಲಿಸಿ  ನಿವೃತ್ತರಾಗುವ ಅತಿಥಿ ಉಪನ್ಯಾಸಕರಿಗೆ 5 ಲಕ್ಷ ರೂ. ಇಡುಗಂಟು ನೀಡುವುದಾಗಿ ಹಾಗೂ ಈಗ ಪಡೆಯುತ್ತಿರುವ ಮಾಸಿಕ ವೇತನಕ್ಕೆ  5 ಸಾವಿರ ರೂ. ಸೇರಿಸಿ ಕೊಡುವುದಾಗಿ, ವೈದ್ಯಕೀಯ ಸೌಲಭ್ಯ ಹಾಗೂ ಪ್ರತೀ ತಿಂಗಳು ಒಂದು ರಜೆ ಕೊಡುವುದಾಗಿ ಸರ್ಕಾರ  ಘೋಷಿಸಿರುವುದು ಸಮಾಧಾನವೇ ಹೊರತು ಜೀವನ ಭದ್ರತೆ ನೀಡುವುದಿಲ್ಲ  ಎಂದರು.


ಈಗ ನೀಡುತ್ತಿರುವ 10 ತಿಂಗಳ ವೇತನದ ಬದಲಾಗಿ 12 ತಿಂಗಳ ವೇತನ ನೀಡಬೇಕು. ಉಪನ್ಯಾಸಕಿಯರಿಗೆ ವೇತನ ಸಹಿತ ಹೆರಿಗೆ ರಜೆಯನ್ನು ಕಡ್ಡಾಯವಾಗಿ ನೀಡಬೇಕೆಂದ ಅವರು, ಖಾಸಗಿ ಕಂಪನಿಯ ಉದ್ಯೋಗಿಗಳು ಕೆಲಸ ಬಿಟ್ಟಾಗ ಗ್ರಾ÷್ಯಚುಟಿ ನೀಡಲಾಗುತ್ತದೆ. ಅದೇ ರೀತಿಯಲ್ಲಿ  ಅತಿಥಿ ಉಪನ್ಯಾಸಕರಿಗೂ ನೀಡಿದರೆ ಇಡುಗಂಟಿಗಿಂತ ಹೆಚ್ಚಿನ ಗ್ರ್ಯಾಚುಟಿ  ಲಭ್ಯವಾಗಲಿದೆ. 60 ವರ್ಷದವರೆಗೆ ಅತಿಥಿ ಉಪನ್ಯಾಸಕರನ್ನು ತೆಗೆದು ಹಾಕುವುದಿಲ್ಲ ಎಂಬ ಭರವಸೆ ಸರ್ಕಾರ ನೀಡುವಂತೆ ಆಗ್ರಹಿಸಿದ ಅವರು ಇಡೀ ಗಂಟು 5 ಲಕ್ಷಕ್ಕೆ ಮಿತಿಗೊಳಿಸಿದ್ದಾರೆ. ಇದು ಕೂಡ ವೈಜ್ಞಾನಿಕವಾಗಿಲ್ಲ, ತಾಂತ್ರಿಕ ನೆಲೆಕಟ್ಟಿನಲ್ಲಿ ಇಲ್ಲ ಎಂದರು.


ಮುಷ್ಕರ ನಿರತ ಅತಿಥಿ ಉಪನ್ಯಾಸಕರು ಜನವರಿ 1 ರಿಂದ ಕರ್ತವ್ಯಕ್ಕೆ ಹಾಜರಾಗದಿದ್ದರೆ ಕೆಲಸದಿಂದ ತೆಗೆಯುವುದಾಗಿ ಸಚಿವರು ಹೇಳಿದ್ದಾರೆ. ಇಂತಹ ಕಠಿಣ ನಿಲುವು ತಳೆಯದೆ ಮತ್ತೊಮ್ಮೆ ಮಾತುಕತೆಗೆ ನಡೆಸಬೇಕು. ಮುಷ್ಕರ ನಿರತರು ಕೂಡ ಹಠ ಬಿಟ್ಟು ಮಾತುಕತೆಗೆ ಮುಂದಾಗುವಂತೆ ಸಲಹೆ ನೀಡಿದರು.


ರಾಜ್ಯಸರ್ಕಾರ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರುಗಳ ಹಿತರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಅರುಣ್ ಶಿವಮೊಗ್ಗ ಮಾತನಾಡಿ, ಸರ್ಕಾರದ ಈ ನಿರ್ಧಾರದಿಂದ ನಮಗೆ ಸಮಧಾನವಾಗಿಲ್ಲ. ಪ್ರತಿವರ್ಷ ನಮ್ಮನ್ನು ಎರಡು ತಿಂಗಳ ಕಾಲ ತೆಗೆದುಹಾಕಲಾಗುತ್ತದೆ. ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬಹುದು, ತೆಗೆದುಕೊಳ್ಳದೇ ಇರಬಹುದು, ಆಗಾದಾಗ 10 ವರ್ಷ ಸೇವೆ ಸಲ್ಲಿಸುವುದು ಹೇಗೆ, ಪ್ರತಿ ವರ್ಷವು ನಮಗೆ ಸಂಕಟ ತಪ್ಪಿದ್ದಲ್ಲ, ಮುಖ್ಯವಾಗಿ ನಮ್ಮನ್ನು ಅತಿಥಿ ಉಪನ್ಯಾಸಕರು ಎಂದು ಕರೆಯಲೇಬಾರದು, ನಾವು ಉಪನ್ಯಾಸಕರು ಅಷ್ಟೇ, ಅತಿಥಿ ಎಂಬ ಪದವನ್ನು ತೆಗೆದು ಹಾಕಬೇಕು ಎಂದರು.


ಪತ್ರಿಕಾಗೋಷ್ಠಿಯಲ್ಲಿ ಅತಿಥಿ ಉಪನ್ಯಾಸಕರ ಸಂಘದ ಉಪಾಧ್ಯಕ್ಷೆ ಸುರೈಯ ಬೇಗಂ, ಅನುದಾನ ಶಿಕ್ಷಣ ಸಂಸ್ಥೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ಬಾಲಕೃಷ್ಣ ಹೆಗಡೆ ಇದ್ದರು.

Leave A Reply

Your email address will not be published.

error: Content is protected !!