Shivamogga | ಶಿಷ್ಟಾಚಾರ ಪಾಲಿಸುವಂತೆ ಡಿಸಿ ಸೂಚನೆ

0 126


ಶಿವಮೊಗ್ಗ : ಶಿಷ್ಟಾಚಾರ ನಿಯಮಾವಳಿ ಪ್ರಕಾರ ಸರ್ಕಾರಿ ಸಭೆ, ಸಮಾರಂಭಗಳಿಗೆ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು ಹಾಗೂ ಆಹ್ವಾನ ಪತ್ರಿಕೆ ಮುದ್ರಣ, ಆಸನ ವ್ಯವಸ್ಥೆ ಮತ್ತು ಶಿಲಾನ್ಯಾಸದಲ್ಲಿ ಶಿಷ್ಟಾಚಾರವನ್ನು ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣಲ್ಲಿ ಶಿಷ್ಟಾಚಾರ ಪಾಲನೆ ಕುರಿತು ಸೂಚನೆ ನೀಡಲು ಕರೆಯಲಾಗದಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲ್ಲೂಕು ಮಟ್ಟದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗುತ್ತಿರುವ ಬಗ್ಗೆ ದೂರುಗಳಿವೆ. ಕೆಡಿಪಿ ಸಭೆಗಳಿಗೆ ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು, ನಾಮ ನಿರ್ದೇಶಿತ ಸದಸ್ಯರು ಸೇರಿದಂತೆ ಶಿಷ್ಟಾಚಾರದನ್ವಯ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು.


2019 ರ ಏಪ್ರಿಲ್ 16 ಮತ್ತು 30 ರಂದು ಸರ್ಕಾರ ಆದ್ಯತೆಯ ಕ್ರಮ (ಆರ್ಡರ್ ಆಫ್ ಪ್ರಿಸಿಡೆನ್ಸ್)ಸುತ್ತೋಲೆ ಹೊರಡಿಸಿದ್ದು, ಅದರನ್ವಯ ಶಿಷ್ಟಾಚಾರ ಪಾಲನೆ ಮಾಡಬೇಕು. ಶಾಸಕರ ಅಧ್ಯಕ್ಷತೆಯಲ್ಲಿ ಆಯ್ಕೆಯಾಗುವ ಫಲಾನುಭವಿಗಳ ಪಟ್ಟಿಯನ್ನು ಅವರಿಗೆ ನೀಡಬೇಕು. ಸಭೆ, ಸಮಾರಂಭಗಳಿಗೆ 7 ದಿನಗಳ ಮುಂಚಿತವಾಗಿ ಆಹ್ವಾನ ನೀಡಬೇಕು. ವಿಳಂಬವಾದರೆ ಅದಕ್ಕೆ ಸಕಾರಣ ನೀಡಬೇಕು. ಅನವಶ್ಯಕ ವ್ಯಕ್ತಿಗಳಿಗೆ ವೇದಿಕೆಯಲ್ಲಿ ಅವಕಾಶ ನೀಡಬಾರದು. ಶಿಷ್ಟಾಚಾರ ಉಲ್ಲಂಘಿಸಿದರೆ ವಿಚಾರಣಾ ಸಮಿತಿ ಮುಂದೆ ಹಾಜರಾಗಬೇಕಾಗುತ್ತದೆ. ಆದ್ದರಿಂದ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಶಿಷ್ಟಾಚಾರವನ್ನು ಪಾಲಿಸಬೇಕು. ಹಾಗೂ ಅಧಿಕಾರಿಗಳು ತಮ್ಮ ಕೆಳ ಹಂತದ ಅಧಿಕಾರಿಗಳಿಗೆ ಈ ಕುರಿತು ಸೂಚನೆ ನೀಡಬೇಕೆಂದರು.


ಸಭೆಯಲ್ಲಿ ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಅಪರ ಪೊಲೀಸ್ ವರಿಷ್ಟಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಎಸಿ ಸತ್ಯನಾರಾಯಣ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಸಿದ್ದತೆ:
ಅರ್ಹರೆಲ್ಲರನ್ನು ಪಟ್ಟಿಗೆ ಸೇರಿಸಲು ಡಿಸಿ ಸೂಚನೆ
ಶಿವಮೊಗ್ಗ : ಜಿಲ್ಲೆಯ ಎಲ್ಲಾ ಅಧಿಕಾರಿಗಳು ತಮ್ಮ ಕಚೇರಿಯ ಪದವೀಧರರಾದ ಅಧೀನ ಅಧಿಕಾರಿ/ಸಿಬ್ಬಂದಿಗಳನ್ನು ಕರ್ನಾಟಕ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಬೇಕೆಂದು ಡಾ.ಸೆಲ್ವಮಣಿ ಆರ್ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿದರು.


ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ತಯಾರಿಸುವ ಕುರಿತಂತೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಲು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಲ್ಲ ಇಲಾಖೆಗಳ ಅಧಿಕಾರಿಗಳು/ಮುಖ್ಯಸ್ಥರು ತಮ್ಮ ಕಚೇರಿಯಲ್ಲಿನ ಪದವೀಧರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಬೇಕು. ಪದವೀಧರರನ್ನು ನಮೂನೆ 18 ಮತ್ತು ಶಿಕ್ಷಕರನ್ನು ನಮೂನೆ 19 ರಲ್ಲಿ ಭರ್ತಿ ಮಾಡಿ, ಪದವಿ ಪ್ರಮಾಣ ಪತ್ರವನ್ನು ದೃಢೀಕರಿಸಿ, ಒಂದು ಭಾವಚಿತ್ರ ಲಗತ್ತಿಸಿ ನ.6 ರೊಳಗೆ ತಾಲ್ಲೂಕುಗಳಲ್ಲಿ ತಹಶೀಲ್ದಾರ್ ಕಚೇರಿ ಮತ್ತು ನಗರದಲ್ಲಿ ಸ್ಥಳೀಯ ಸಂಸ್ಥೆಗಳು, ಪಾಲಿಕೆಗೆ ನೀಡಬೇಕು.


ಪದವೀಧರ ಕ್ಷೇತ್ರದ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಅರ್ಹತಾ ದಿನಾಂಕ: 01.11.2023 ಕ್ಕಿಂತ 3 ವರ್ಷಗಳ ಪೂರ್ವದಲ್ಲಿ ಅಂದರೆ 01.11.2020 ಕ್ಕಿಂತಲು ಹಿಂದೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವೀಧರರಾಗಿರಬೇಕು. ನಮೂನೆ-18 ರೊಂದಿಗೆ ಸಲ್ಲಿಸುವ ಪದವಿ ದಾಖಲಾತಿಗಳು ಡೆಸಿಗ್ನೇಟೆಡ್ ಅಧಿಕಾರಿಗಳಿಂದ ದೃಢೀಕರಣಗೊಂಡಿರಬೇಕು. ಸರ್ಕಾರಿ ನೌಕರರಾಗಿದ್ದಲ್ಲಿ 3ನೇ ಅನುಸೂಚಿಯನ್ನು ಡಿಡಿಓರಿಂದ ದೃಢೀಕರಿಸಿ ಮಾಹಿತಿ ಸಲ್ಲಿಸಬೇಕು.


ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಆರು ವರ್ಷಗಳಲ್ಲಿ ಹಿಂದಿನ ದಿನಾಂಕಕ್ಕೆ ಅಂದರೆ 30-10-2017 ರ ದಿನಾಂಕದ ನಂತರದಲ್ಲಿ ಮೂರು ವರ್ಷಗಳು ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ ಕುರಿತಂತೆ ದೃಢೀಕರಣ ಪಡೆದಿರಬೇಕು. ಖಾಯಂ ಶಿಕ್ಷಕ ವೃತ್ತಿಯಲ್ಲಿರಬೇಕು.
ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಮತಪಟ್ಟಿಗೆ ಸೇರ್ಪಡೆಗೊಳ್ಳಲು ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಕಡ್ಡಾಯವಾಗಿರುತ್ತದೆ ಎಂದರು.


ಸಭೆಯಲ್ಲಿ ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಅಪರ ಪೊಲೀಸ್ ವರಿಷ್ಟಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಎಸಿ ಸತ್ಯನಾರಾಯಣ್, ಶಿವಮೊಗ್ಗ ತಹಶೀಲ್ದಾರ್ ಪ್ರದೀಪ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಚುನಾವಣಾ ಶಾಖೆ ಸಿಬ್ಬಂದಿಗಳು, ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!