ಕಾಂಗ್ರೆಸ್ ಪಕ್ಷದ ವಿವಿಧ ಗ್ಯಾರಂಟಿಯೇ ಮತದಾರರಿಗೆ ವಾರಂಟಿ ; ಮಧು ಬಂಗಾರಪ್ಪ

0 95

ಶಿಕಾರಿಪುರ : ಕಾಂಗ್ರೆಸ್ ಪಕ್ಷದ ವಿವಿಧ ಗ್ಯಾರಂಟಿಯೇ ಮತದಾರರಿಗೆ ವಾರಂಟಿಯಾಗಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಹೆಚ್ಚಿನ ಅಂತರದಲ್ಲಿ ಗೆಲುವು ಖಚಿತ ಎಂದು ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರವರು ವಿಶ್ವಾಸ ವ್ಯಕ್ತಪಡಿಸಿದರು. 

ಪಟ್ಟಣದ ಹೊಯ್ಸಳ ವೃತ್ತದಲ್ಲಿರುವ ಕಾಂಗ್ರೆಸ್ ಕಛೇರಿಯಲ್ಲಿ ಶನಿವಾರ ರಾಜ್ಯದಲ್ಲಿ ಜಾರಿಯಲ್ಲಿರುವ ಹಾಗೂ ಕೇಂದ್ರದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದಾಗ ದೇಶದ ಜನತೆಗೆ ನೀಡುವ ಗ್ಯಾರಂಟಿ ಯೋಜನೆಯ ಪ್ರಣಾಳಿಕೆ ಬಿಡುಗಡೆ ಮಾಡಿ ಮತ್ತು ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು, 2023ರಲ್ಲಿ ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಪ್ರಣಾಳಿಕೆಯನ್ನು ಮಲ್ಲಿಕಾರ್ಜುನ ಖರ್ಗೆ,  ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಪರಮೇಶ್ ಮತ್ತು ನನ್ನ ಸಮ್ಮುಖದಲ್ಲೇ ತಯಾರಿಸಲಾಯಿತು. ರಾಜ್ಯದ ಮತದಾರರು ಬಂಗಾರಪ್ಪರವರವನ್ನು ನೆನೆದುಕೊಳ್ಳುವುದು ಹೇಗೆಂದರೆ, ಆಶ್ರಯ, ಆರಾಧನಾ, ರೈತರ ಪಂಪ್‌ಸೆಟ್ ಗಳಿಗೆ ಉಚಿತ ವಿದ್ಯುತ್ ಸೇರಿದಂತೆ ವಿವಿಧ ರೀತಿಯಲ್ಲಿ ನೆನೆಯುತ್ತಾರೆ. ಅದೇ ರೀತಿ ಮುಖ್ಯಮಂತ್ರಿ ಸಿದ್ಧರಾಮಯ್ಯರವರನ್ನ, ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಯುವನಿಧಿ ಹೀಗೆ ಹಲವಾರು ರೀತಿಯಲ್ಲಿ ಸ್ಮರಿಸುತ್ತಾರೆ. ಇದಕ್ಕೆ ಕಾರಣ ಇವರು ನೀಡಿದ ಗ್ಯಾರಂಟಿ ಯೋಜನೆಗಳಿಂದ ಈ ಗ್ಯಾರಂಟಿಗಳನ್ನ ವಿರೋಧ ಪಕ್ಷದವರು ಮುಟ್ಟಲು ಸಾಧ್ಯವಿಲ್ಲ, ಆದ್ದರಿ೦ದ ಬಿ ವೈ ರಾಘವೇಂದ್ರರಾಧಿಯಾಗಿ, ಬಿಜೆಪಿ ಪಕ್ಷದವರು ಗ್ಯಾರಂಟಿ ಯೋಜನೆ ಚುನಾವಣೆವರೆಗೂ‌ ಮಾತ್ರ ನಂತರ ಬಂದ್ ಆಗುವುದು ಎಂದು  ಟೀಕಿಸುತ್ತಿದ್ದಾರೆ. ಮತದಾರರನ್ನು ಸೆಳೆಯಲು ಬಿಜೆಪಿಗರು ಈರೀತಿ ಸುಳ್ಳು ಅಪಪ್ರಚಾರ ಮಾಡುತ್ತಿದ್ದು, ರಾಜ್ಯ ಸರ್ಕಾರ ನೀಡಿರುವ ಗ್ಯಾರಂಟಿಯು, ಕಾಂಗ್ರೇಸ್ ಸರ್ಕಾರದ ವಾರಂಟಿಯಾಗಿದ್ದು, ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದರೆ ಈಗ ಬಿಡುಗಡೆ ಮಾಡುತ್ತಿರುವ ಪ್ರಣಾಳಿಕೆಯು ಗ್ಯಾರಂಟಿಯೊಂದಿಗೆ ವಾರಂಟಿಯಾಗಲಿದೆ ಎಂದರು.

ಬಿಜೆಪಿಗರು ವಿವಿಧ ಯೋಜನೆಗಳ ಕುರಿತು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಇದು ಯಾವ ಕಾರಣಕ್ಕೂ ಅನುಷ್ಟಾನಕ್ಕೆ ಬರುವುದಿಲ್ಲ. ಅವರು ಸುಳ್ಳುಗಾರರು, ಮತದಾರರನ್ನ ಸೆಳೆಯಲು ಸುಳ್ಳು ಆಶ್ವಾಸನೆ ನೀಡುತ್ತಾರೆ.  ಈ ಹಿಂದೆ ನೀಡಿದ ಆಶ್ವಾಸನೆಗಳಲ್ಲಿ ಯಾವುದೇ ಒಂದನ್ನು ಅನುಷ್ಟಾನಕ್ಕೆ ತರಲಿಲ್ಲ. ಈ ಚುನಾವಣೆ ಮುಗಿದು ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಬಿಜೆಪಿಗರೇ ಗ್ಯಾರಂಟಿಯಾಗಿರುವುದಿಲ್ಲ. ನಮಗೆ ಯಾರು ಮತ ಹಾಕಿಲ್ಲವೋ ಅವರೂ ಕೂಡ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಯ ಫಲಾನುಭವಿಗಳಾಗಿದ್ದು, ವಿಶೇಷವೆಂದರೆ ಇದರಲ್ಲಿ ಬಿಜೆಪಿಗರೇ ಹೆಚ್ಚಿನ ಫಲಾನುಭವಿಗಳಾಗಿದ್ದಾರೆ ಎಂದು ವ್ಯಂಗ್ಯವಾಡಿದರು. 

ಈಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣದಲ್ಲಿರುವ ಗೀತಕ್ಕರವರು ಶಿಕಾರಿಪುರದಲ್ಲಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ನಾಗರಾಜ್ ಗೌಡ ಹಾಗೂ ಗೋಣಿ ಮಾಲತೇಶ್ ರವರು ಪಡೆದ ಮತಗಳಿಗಿಂತ ಹೆಚ್ಚು ಲೀಡ್ ಇಲ್ಲಿ ಸಿಗಲಿದ್ದು, ಕಾರ್ಯಕರ್ತರು ಪ್ರತಿ ಬೂತ್ ಗಳಲ್ಲಿ ಗೀತಕ್ಕ ಬದಲು ನೀವೇ ಕಣದಲ್ಲಿದ್ದೀರಿ ಎಂಬ ಭಾವನೆಯಿಂದ ಬಿಜೆಪಿ ಜೆಡಿಎಸ್ ಕಾಂಗ್ರೆಸ್ ಎಂದು ಚಿಂತಿಸದೇ ಪ್ರತಿ ಮನೆಮನೆಗಳಿಗೆ ಹೋಗಿ ಮತಯಾಚನೆ ಮಾಡಬೇಕು ಎಂದು ಕರೆ ನೀಡಿದ ಅವರು, ಪಟ್ಟಣದ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯಕರ್ತರಲ್ಲಿ ವೈಮನಸ್ಸು ಇರಬಹುದು, ಅದನ್ನು ದೂರವಿಟ್ಟು ಈ ಬಾರಿ ಗೀತಕ್ಕನ ಪರವಾಗಿ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಎಲ್ಲಾ ವೈಮನಸ್ಸು ಸರಿಪಡಿಸುತ್ತೇನೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರಾಜ್ ಗೌಡ, ಜಿಲ್ಲಾ ಕಾಂಗ್ರೇಸ್ ಅದ್ಯಕ್ಷ ಮಾಜಿ ವಿಧಾನ ಪರಿಷತ್ ಸದಸ್ಯ ಆರ್ ಪ್ರಸನ್ನ ಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರಿವಾಳದ ಶಿವರಾಮ್, ಶಿರಾಳಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರನ ಗೌಡ, ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್ ಮಾಜಿ ಕಾಡಾ ಅಧ್ಯಕ್ಷ, ನಗರದ ಮಹಾದೇವಪ್ಪ, ಉಳ್ಳಿ ದರ್ಶನ್ , ರೋಷನ್, ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಮಾರವಳ್ಳಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಭಂಡಾರಿ ಮಾಲತೇಶ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಬಡಗಿ ಪಾಲಾಕ್ಷಪ್ಪ, ಖಾ‌ಸಿಂ, ಜಾಫರ್ ಅಲಿ ಖಾನ್, ಶಿವುನಾಯ್ಕ್ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು, ಪಕ್ಷದ ಅಭಿಮಾನಿಗಳು ಹಾಜರಿದ್ದರು.

ಕಾರ್ಯಕ್ರಮ ಆರಂಭವಾಗಿ ಮಧು ಬಂಗಾರಪ್ಪರವರು ಮಾತನಾಡುತ್ತಿದ್ದಂತೆಯೇ ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ಈ ಕಾರ್ಯಕ್ರಮಕ್ಕೆ ಅನುಮತಿ ಪಡೆದಿಲ್ಲ ಸಭೆ ನಡೆಯುವಂತಿಲ್ಲ ಎಂದು ಹೇಳುತ್ತಿದ್ದಂತೆಯೇ, ನಾಗರಾಜ್ ಗೌಡರು ಇದು ಪಕ್ಷದ ಕಛೇರಿ ನಾವು ಈ ಕಛೇರಿಯಲ್ಲಿ ಯಾವುದೇ ಕಾರ್ಯಕ್ರಮ ನಡೆಸಲು ಅನುಮತಿ ಪಡೆದಿದ್ದೇವೆ ಅದು ನಿಮಗೆ ತಿಳಿದಿಲ್ಲ ಎಂದು ಹೇಳುತ್ತಿದ್ದಂತೆಯೇ, ಮಧು ಬಂಗಾರಪ್ಪರವರು ಅಧಿಕಾರಿ ವಿರುದ್ದ ಕೆಂಡಾಮಂಡಲವಾಗಿ ಅಧಿಕಾರಿಯನ್ನು ಹೊರಹೋಗಲು ತಿಳಿಸಿದರು.
ನೆರೆದ ಕಾರ್ಯಕರ್ತರು ಇದು ಬಿಜೆಪಿಗರ ಕುತಂತ್ರ ಎಂದು ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

Leave A Reply

Your email address will not be published.

error: Content is protected !!