ಕನ್ನಡ ಉಸಿರಾಗಬೇಕು ; ಡಾ. ಮಂಜುನಾಥ್‌ ಎಂ.ಎಂ.

0 462

ಹೊಸನಗರ : ಇಂದು ನಮ್ಮೆಲ್ಲರ ಮಾತೃಭಾಷೆಯಾದ ಕನ್ನಡವನ್ನು (Kannada) ಉಳಿಸಿಕೊಳ್ಳಲು ಜಾತಿ, ಜನಾಂಗ ಧರ್ಮವನ್ನು ಮೀರಿ ನಾವುಗಳು ಮುಂದಾಗಬೇಕಿದೆ ಎಂದು ಶಿವಮೊಗ್ಗದ (Shivamogga) ಬಾಪೂಜಿನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಪ್ರಾಧ್ಯಾಪಕ ಡಾ. ಮಂಜುನಾಥ್‌ ಎಂ.ಎಂ. ಅಭಿಪ್ರಾಯಪಟ್ಟರು.


ಅವರು ಇಲ್ಲಿನ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಹಿತ್ಯ ವೇದಿಕೆ, ಸಾಂಸ್ಕೃತಿಕ ವೇದಿಕೆ ಮತ್ತು ಐ.ಕ್ಯೂ.ಎ.ಸಿ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಕನ್ನಡ ಅದೊಂದು ಭಾಷೆಯಲ್ಲ, ಸಂಸ್ಕೃತಿ, ಸಂವಹನ, ಸಂಸ್ಕಾರ, ಸಾಕ್ಷಾತ್ಕಾರ. ಕನ್ನಡವನ್ನು ವೈಭವೀಕರಿಸದೆ ವಾಸ್ತವಿಕತೆಯ ಹಿನ್ನೆಲೆಯಲ್ಲಿ ಕಟ್ಟಬೇಕಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಕೆ. ಶ್ರೀಪತಿ ಹಳಗುಂದ ಕನ್ನಡ ಭಾಷೆಯ ಅಳಿವಿಗೆ ಕನ್ನಡೇತರರನ್ನು ದೂರುವುದರ ಬದಲು ಕನ್ನಡಿಗರಾದ ನಾವುಗಳು ಕನ್ನಡ ಕಟ್ಟುವ ವಿಚಾರ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ಉಮೇಶ್‌ ಕೆ. ವಹಿಸಿದ್ದರು. ವೇದಿಕೆಯಲ್ಲಿ ಐ.ಕ್ಯೂ.ಎ.ಸಿ ಸಂಚಾಲಕ ರವಿ ಸಿ.ಹೆಚ್‌, ಕನ್ನಡ ಉಪನ್ಯಾಸಕರಾದ ವಸುಧಾ, ಶ್ರೀಧರ್‌ ಕೆ ಇದ್ದರು. ಕನ್ನಡ ಸಹಾಯಕ ಪ್ರಾಧ್ಯಾಪಕಿ ಪ್ರತಿಮಾ ಸರ್ವರನ್ನೂ ಸ್ವಾಗತಿಸಿದರು. ನಾಡಗೀತೆಯಿಂದ ಆರಂಭಗೊಂಡ ಕಾರ್ಯಕ್ರಮವು ವಿದ್ಯಾರ್ಥಿಗಳ ಹಲವು ಕನ್ನಡದ ಭಾವಗೀತೆಗಳ ಮೂಲಕ ಮೆರಗು ತಂದಿತು.

ರಾಜ್ಯೋತ್ಸವದ ಪ್ರಯುಕ್ತ ಏರ್ಪಡಿಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸ್ಥಳದಲ್ಲೇ ಕವಿತೆ ರಚಿಸಿದ 5 ಜನ ಆಶುಕವಿಗಳಿಗೆ ಬಹುಮಾನ ನೀಡಲಾಯಿತು. ಸ್ಫೂರ್ತಿ ನಿರೂಪಿಸಿ, ಮೇಘನಾ ಜೆ.ಆರ್‌ ವಂದಿಸಿದರು.

Leave A Reply

Your email address will not be published.

error: Content is protected !!