ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ 108 ಬಗೆಯ ವೈವಿಧ್ಯಮಯ ಸಂಪ್ರದಾಯಕ ಶರ್ಕರ ನೈವೇದ್ಯ ಅರ್ಪಣೆ

0 93

ರಿಪ್ಪನ್‌ಪೇಟೆ: ಶ್ರಾವಣ ಶುಕ್ಲ ನವಮಿ ಶುಭ ದಿನದಂದು ಶ್ರೀ ವರಮಹಾಲಕ್ಷ್ಮಿ ಆರಾಧನೆಯಿಂದ ಧನ-ಕನಕ-ಸಂಪತ್ತು ವರ್ಧಿಸಲೆಂಬ ಪ್ರಾರ್ಥನೆ ಸಲ್ಲಿಸಲು ಅತಿಶಯ ಶ್ರೀ ಕ್ಷೇತ್ರ ಹೊಂಬುಜ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಸಹಸ್ರಾರು ಭಕ್ತರು ಆಗಮಿಸಿದ್ದರು.

ಹೊಂಬುಜ ಶ್ರೀ ಜೈನ ಮಠದ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರು ಶ್ರೀ ಪಾರ್ಶ್ವನಾಥ ಸ್ವಾಮಿ, ಶ್ರೀ ಪದ್ಮಾವತಿ ದೇವಿ ಪೂಜೆಯಿಂದ ಸಮೃದ್ಧಿ, ಸುಖ-ಶಾಂತಿ ಪ್ರಾಪ್ತಿಯಾಗಲಿ ಎಂದು ಭಕ್ತರನ್ನು ಹರಸಿದರು.

ಶ್ರಾವಣ ಮಾಸದಲ್ಲಿ ಶ್ರೀ ಪದ್ಮಾವತಿ ದೇವಿ ಆರಾಧಕರೆಲ್ಲರೂ ಭಕ್ತಿ, ಶ್ರದ್ಧೆಯ ಕಾಣಿಕೆಗಳನ್ನು ಸಮರ್ಪಿಸಿ, ಉತ್ತಮ ಬೆಳೆ, ಮಳೆಗಾಗಿ ಪ್ರಾರ್ಥಿಸಿದರು. ಉತ್ತರ ಭಾರತದಿಂದ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಭಕ್ತರು ಉಡಿ ತುಂಬಿ, ಹೂವು ಹಣ್ಣು ಸಮರ್ಪಿಸಿ ಇಷ್ಟಾರ್ಥ ಈಡೇರಲೆಂದು ಪ್ರಾರ್ಥಿಸಿದರು.
ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಅಲಂಕಾರವನ್ನು ಭಕ್ತರು ಕಣ್ತುಂಬಿಕೊಂಡರು. ಅಷ್ಟವಿಧಾರ್ಚನೆ ಪೂಜೆಯ ಬಳಿಕ ಭಕ್ತರು ವಿವಿಧ ಹರಕೆ ಪೂಜೆ ಸಲ್ಲಿಸಿದರು. ಅಭೀಷ್ಠವರಪ್ರಸಾದದಾಯಿನಿ ಶ್ರೀ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ 108 ವೈವಿಧ್ಯಮಯ ಸಾಂಪ್ರದಾಯಕ ಶರ್ಕರ ನೈವೇದ್ಯಗಳನ್ನು ಅರ್ಪಿಸಲಾಯಿತು.
ಸರ್ವಾಲಂಕಾರ ಮಹಾಪೂಜೆಯಲ್ಲಿ ಆಗಮಿಸಿದ ಭಕ್ತರು ಜಿನನಾಮವನ್ನು ಪಠಿಸಿದರು. ಆಗಮಿಸಿದ್ದ ಭಕ್ತಾಧಿಗಳಿಗೆ ಅಭೀಷ್ಠ ಪ್ರಸಾದ ಭವನದಲ್ಲಿ ಸೂಕ್ತ ಊಟೋಪಚಾರ ಮತ್ತು ನೂತನ ಯಾತ್ರಿ ನಿವಾಸದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿತ್ತು.

Leave A Reply

Your email address will not be published.

error: Content is protected !!