ಕೂಸಿನಮನೆ ಯೋಜನೆ ಸದ್ಬಳಕೆಗೆ ಶ್ರೀನಿವಾಸ ರೆಡ್ಡಿ ಕರೆ

0 401

ಹೊಸನಗರ : ಗ್ರಾಮೀಣ ಭಾಗದ ಕೂಲಿಕಾರರು ಕೆಲಸ ನಿರ್ವಹಿಸುವ ವೇಳೆ ಅವರ ಮಕ್ಕಳ ಸುರಕ್ಷತೆ ಮತ್ತು ಪೋಷಣೆ ಅಗತ್ಯವಾಗಿದೆ. ಮಕ್ಕಳ ದೈಹಿಕ ಬೆಳವಣಿಗೆ ಮತ್ತು ಮಾನಸಿಕ ವಿಕಾಸದ ಹಿತ ಕಾಪಾಡಲು ‘ಕೂಸಿನಮನೆ’ (ಶಿಶುಪಾಲನಾ ಕೇಂದ್ರ) ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ ಎಂದು ತಾಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ತಿಳಿಸಿದರು.

ಇಲ್ಲಿನ ಸಾಲಗೇರಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ‘ಕೂಸಿನಮನೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲು ಮತ್ತು ನರೇಗಾ ಯೋಜನೆಯಡಿಯಲ್ಲಿ ಮಹಿಳೆಯರು ಕೂಲಿ ಕೆಲಸ ನಿರ್ವಹಿಸಲು ಪೂರಕ ವಾತಾವರಣ ಹಾಗೂ ವಿವಿಧ ಪೂರಕ ಸೌಕರ್ಯ ಕಲ್ಪಿಸುವುದರ ಜೊತೆಯಲ್ಲಿ ಅವರ ಮಕ್ಕಳ ಆರೋಗ್ಯ, ಪೌಷ್ಠಿಕತೆ ಮತ್ತು ಸುರಕ್ಷತೆಯು ಈ ಯೋಜನೆಯ ಸದುದ್ದೇಶವಾಗಿದೆ ಎಂದರು.

ಈ ಯೋಜನೆ ಅಡಿಯಲ್ಲಿ ಮಕ್ಕಳ ಪೋಷಣೆ ಮಾಡುವ ಆರೈಕೆದಾರರಿಗೆ ನರೇಗಾ ಯೋಜನೆಯ ದಿನಗೂಲಿ 316 ರೂ. ಕೂಲಿಯನ್ನು ಗರಿಷ್ಠ 100 ದಿನಗಳವರೆಗೆ ನೀಡಲಾಗುವುದು. ನರೇಗಾ ಯೋಜನೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರ 6 ತಿಂಗಳಿಂದ ಮೂರು ವರ್ಷದ ಶಿಶುಗಳಿಗೆ ಈ ಯೋಜನೆ ಅನ್ವಯವಾಗಲಿದೆ ಎಂದು ಹೇಳಿ, ನರೇಗಾ ಮಹಿಳಾ ಕೂಲಿ ಕಾರ್ಮಿಕರು ಈ ಯೋಜನೆಯ ಸದ್ಬಳಿಕೆಗೆ ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಲಕ್ಷ್ಮಿದೇವಮ್ಮ, ವಸವೆ ಧರ್ಮಪ್ಪ, ಚಂದ್ರಕಲಾ ಶ್ರೀನಿವಾಸ್, ಕಾರ್ಯದರ್ಶಿ ಪವನ್, ಪ್ರಯುಖರಾದ ಚನ್ನಬಸವ, ಜಯನಗರ ಗುರು, ಅಂಗನವಾಡಿ ಸಹಾಯಕಿರು ಸೇರಿದಂತೆ ಹಲವು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!