VISL ಕಾರ್ಖಾನೆ ಪುನರಾರಂಭಕ್ಕೆ ಕೇಂದ್ರ ಸರ್ಕಾರ ಅಸ್ತು

0 38

ಶಿವಮೊಗ್ಗ: ಭದ್ರಾವತಿಯಲ್ಲಿರುವ ವಿ.ಐ.ಎಸ್.ಎಲ್, ಕಾರ್ಖಾನೆ ಆಗಸ್ಟ್ 10 ರಿಂದ ಪುನರಾರಂಭಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತೀಳಿಸಿದ್ದಾರೆ.


ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಉಕ್ಕು ಸಚಿವ ಜ್ಯೋತಿರಾದಿತ್ಯ ಸಿಂಧಿಯಾಜಿ ರವರುಗಳ ಸ್ಪಷ್ಟ ನಿರ್ದೇಶನದೊಂದಿಗೆ, ಸೈಲ್ ಆಡಳಿತ ಮಂಡಳಿಯು ಭದ್ರಾವತಿ ವಿಐಎಸ್ಎಲ್ ನಲ್ಲಿ ಉತ್ಪಾದನಾ ಚಟುವಟಿಕೆಗಳನ್ನು ಪುನರಾರಂಭಿಸಲು ಅಂತಿಮವಾಗಿ ಒಪ್ಪಿಕೊಂಡಿರುವುದನ್ನು ತಿಳಿಸಲು ನನಗೆ ಅತ್ಯಂತ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ.


ಅದರನ್ವಯ ಬಾರ್‌ಮಿಲ್ ಕಾರ್ಯಾಚರಣೆಗಳು ಆಗಸ್ಟ್ 10 ರಿಂದ ಪ್ರಾರಂಭವಾಗಲಿದ್ದು, ಮುಂದಿನ ದಿನಗಳಲ್ಲಿ ಪ್ರಾಥಮಿಕ ಗಿರಣಿ ಪುನರಾರಂಭವಾಗಲಿದೆ ಎಂದು ಹೇಳಿದ್ದಾರೆ.
ವಿಐಎಸ್ಎಲ್ ಅನ್ನು ನಂಬಿಕೊಂಡಿರುವ ಉದ್ಯೋಗಿ ಸಮುದಾಯಕ್ಕೆ ಮತ್ತು ಭದ್ರಾವತಿಯ ಜನ ಸಾಮಾನ್ಯರಿಗೆ ಈ ಒಂದು ನಿರ್ಧಾರ ಮಹತ್ವದ ಕ್ಷಣವಾಗಿದೆ ಎಂಬುದಾಗಿ ಭಾವಿಸಿದ್ದೇನೆ, ಕೇಂದ್ರ ಸರ್ಕಾರದ ಸಂಬಂಧಿಸಿದ ಮಂತ್ರಿಗಳೊಂದಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಡೆಸಲಾದ ನಿರಂತರ ಪ್ರಯತ್ನದ ಫಲವಾಗಿ ಇಂತಹ ಒಂದು ಮಹತ್ತರವಾದ ನಿರ್ಣಯವನ್ನು ಸೈಲ್ ಕೈಗೊಳ್ಳಲು ಸಹಕಾರವಾಗಿದ್ದು, ಈ ಮಹತ್ವದ ಮೈಲಿಗಲ್ಲನ್ನು ಪಡೆಯಲು ದಣಿವರಿಯಿಲ್ಲದೆ ಕೆಲಸ ಮಾಡಿದ್ದೇವೆ.

ವಿಐಎಸ್ಎಲ್ ನ ಪುನರುಜೀವನಕ್ಕೆ ಕೇಂದ್ರ ಸರ್ಕಾರ ನೀಡಿದಂತಹ ಭರವಸೆಗಳನ್ನು ಈಡೇರಿಸಿದ ಅವರ ಅಚಲ ಬದ್ಧತೆಗಾಗಿ ಕೇಂದ್ರ ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.
ಮುಂದಿನ ದಿನಗಳಲ್ಲಿ ವಿಐಎಸ್ಎಲ್ ಶೀಘ್ರದಲ್ಲಿಯೇ ಉನ್ನತ ಯಶಸ್ಸು ಮತ್ತು ಸಮೃದ್ಧಿಯ ಹಾದಿಯಲ್ಲಿ ಸಾಗಿ ತನ್ನ ಗತ ವೈಭವವನ್ನು ಮರಳಿ ಪಡೆಯುತ್ತದೆ ಎಂಬ ವಿಶ್ವಾಸವಿದೆ. ಇಂತಹ ಒಂದು ಮಹತ್ತರವಾದ ತೀರ್ಮಾನ ಬರುವಲ್ಲಿ ತಾಳ್ಮೆಯಿಂದ ಸಹಕರಿಸಿದ ವಿಐಎಸ್ಎಲ್ ನ ಎಲ್ಲಾ ನೌಕರರ ಬಾಂಧವರಿಗೆ, ಕಾರ್ಮಿಕ ಸಂಘಟನೆ ಮುಖಂಡರಿಗೆ, ಜನಪ್ರತಿನಿಧಿಗಳಿಗೆ ಸಂಸದ ರಾಘವೇಂದ್ರ ಧನ್ಯವಾದ ಹೇಳಿದ್ದಾರೆ.

Leave A Reply

Your email address will not be published.

error: Content is protected !!