ಅಡಿಕೆ ಮೌಲ್ಯವರ್ಧನೆಯಿಂದ ಉತ್ತಮ ಆದಾಯ ಗಳಿಸಲು ಸಾಧ್ಯ ; ಡಾ. ಸೆಲ್ವಮಣಿ ಆರ್

0 153


ಶಿವಮೊಗ್ಗ: ಅಡಿಕೆಯ ಮೌಲ್ಯವರ್ಧನೆ ಮಾಡಿ ಉತ್ತಮ ಆದಾಯ ಗಳಿಸಲು ಸಾಕಷ್ಟು ಸಾಧ್ಯತೆಗಳಿದ್ದು, ಈ ನಿಟ್ಟಿನಲ್ಲಿ ರೈತರು ಗಮನ ಹರಿಸಬೇಕೆಂದರು ಡಾ.ಸೆಲ್ವಮಣಿ ಆರ್ ರೈತರಿಗೆ ಸಲಹೆ ನೀಡಿದರು.


ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಅಡಿಕೆ ಸಂಶೋಧನಾ ಕೇಂದ್ರ ಶಿವಮೊಗ್ಗ ಹಾಗೂ ಐಸಿಎಆರ್-ಸಿಪಿಸಿಆರ್‍ಐ ಕಾಸರಗೋಡು, ಡಿಎಎಸ್‍ಡಿ ಕ್ಯಾಲಿಕಟ್, ಕ್ಯಾಂಪ್ಕೊ, ಮಾಮ್ಕೋಸ್, ತುಮ್ಕೋಸ್, ಅಡಿಕೆ ಪತ್ರಿಕೆ, ಅಮೃತ್ ನೋನಿ, ಕ್ರಾಸ್ಮ್, ಕ.ರಾ.ತೋ.ಇ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಇಂದು ನವುಲೆಯ ಕೃಷಿ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ‘ಅಡಿಕೆ ಮೌಲ್ಯವರ್ಧಿತ ಉತ್ಪನ್ನ’ ಗಳ ಕುರಿತಾದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಅಡಿಕೆ ಸಿಪ್ಪೆ ಕೂಡ ತ್ಯಾಜ್ಯವಲ್ಲ. ಅದನ್ನು ಎಲ್ಲೆಂದರಲ್ಲಿ ಹಾಕದೆ, ಸುಡದೆ, ಸಿಪ್ಪೆ ಬಗ್ಗೆ ಸಹ ಕಾಳಜಿ ತೋರಿ ಗೊಬ್ಬರ ತಯಾರಿಸಬಹುದು. ನಮ್ಮ ಜಿಲ್ಲೆಯಲ್ಲಿ ಸುಮಾರು 100 ವರ್ಷಗಳಿಂದ ಅಡಿಕೆಯನ್ನು ಬೆಳೆಯಲಾಗುತ್ತಿದೆ. ರೈತರು ರೋಗಬಾಧೆ, ಪ್ರಾಕೃತಿಕ ವಿಕೋಪ, ಇತರೆ ಸವಾಲುಗಳನ್ನು ಎದುರಿಸಿ ಬೆಳೆ ಬೆಳೆಯುತ್ತಿದ್ದಾರೆ. ವಿಜ್ಞಾನಿಗಳು ಅಡಿಕೆಯ ಉತ್ತಮ ತಳಿ, ರೋಗ ನಿರ್ವಹಣೆ ಕುರಿತು ಹೆಚ್ಚು ಅಧ್ಯಯನ ಮಾಡಿ ರೈತರು ಒಳ್ಳೆಯ ಇಳುವರಿ ಪಡೆಯಲು ಸಹಕರಿಸಬೇಕು. ಹಾಗೂ ರೈತರಿಗೆ ಉತ್ತಮ ಬೆಲೆ ಸಿಗಬೇಕೆಂದು ಹಾರೈಸಿದರು.


ಅಡಿಕೆ ಮೌಲ್ಯವರ್ಧನೆಗೆ ಸಾಕಷ್ಟು ಅವಕಾಶಗಳು, ಸಾಧ್ಯತೆಗಳಿವೆ ಎಂದು ಯುವ ಉದ್ಯಮಿಗಳು ತೋರಿಸಿದ್ದಾರೆ. ಮೌಲ್ಯವರ್ಧನೆಗೆ ಸಂಬಂಧಿಸಿದಂತೆ ಕೌಶಲ್ಯಾಭಿವೃದ್ದಿ ಇಲಾಖೆ, ಬ್ಯಾಂಕ್ ಲಿಂಕೇಜ್, ಸಾಲ ಸೌಲಭ್ಯ ಸೇರಿದಂತೆ ಅಗತ್ಯ ಸಹಕಾರವನ್ನು ವಿಶ್ವವಿದ್ಯಾಲಯಕ್ಕೆ ತಾವು ನೀಡಲು ಸಿದ್ದವಿದ್ದು ಉಪಯೋಗ ಪಡೆಯಬೇಕು. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಮೌಲ್ಯವರ್ಧಿತ ಉತ್ಪನ್ನಗಳ ವಸ್ತು ಪ್ರದರ್ಶನವನ್ನು ಮಾಡಿ ಹೆಚ್ಚು ಜನರನ್ನು ತಲುಪಬೇಕೆಂದರು.


ಕಾಸರಗೋಡಿನ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ಬೇಸಾಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ರವಿ ಭಟ್ ಮಾತನಾಡಿ, ಅಡಿಕೆ ಇಳುವರಿ ಹೆಚ್ಚುವುದು, ಉತ್ತಮ ತಳಿ ಹಾಕುವುದು, ವೈಜ್ಞಾನಿಕ ಬೆಳೆ ಬೆಳೆಯುವುದು, ಉತ್ಪಾದನಾ ವೆಚ್ಚ ಕಡಿಮೆ ಮಾಡಿ ಉತ್ತಮ ಆದಾಯ ಪಡೆಯುವುದು ಇದೆಲ್ಲವರೂ ಸಹ ಅಡಿಕೆಯ ಮೌಲ್ಯವರ್ಧನೆ ಆಗುತ್ತದೆ.
ಅಡಿಕೆ ಸೋಗೆ, ಹಾಳೆ, ಸಿಪ್ಪೆ ಇದ್ಯಾವದೂ ತ್ಯಾಜ್ಯಗಳಲ್ಲ. ಇವೆಲ್ಲವನ್ನು ಲಾಭದಾಯಕವಾಗಿ ಮೌಲ್ಯವರ್ಧನೆ ಮಾಡಬಹುದು. ಅಡಿಕೆ ಹಾಳೆ ತಟ್ಟೆಗಳನ್ನು ಅನೇಕ ಉದ್ಯಮಿಗಳು ಹೊರದೇಶಗಳಿಗೆ ರಫ್ತು ಮಾಡುತ್ತಿದ್ದಾರೆ. ಅಡಿಕೆಯಿಂದ ಬಣ್ಣ ತೆಗೆಯುತ್ತಿದ್ದಾರೆ. ಹಿಂದೆಲ್ಲ ಅಡಿಕೆ ಚೊಗರು ತೆಗೆಯುವುದು ಕಷ್ಟ ಆಗುತ್ತಿತ್ತು. ಈಗ ತಂತ್ರಜ್ಞಾನ ಬೆಳೆದಂತೆ ಕಡಿಮೆ ಖರ್ಚಿನಲ್ಲಿ ಚೊಗರು ತೆಗೆಯಲಾಗುತ್ತಿದೆ. ಇದು ಕೂಡ ಮೌಲ್ಯವರ್ಧನೆ.


ಮೇಘಾಲಯದಲ್ಲಿ ಒಂದು ತಂಡ ಶೇ.60 ಅಡಿಕೆ ಸಿಪ್ಪೆ ಬಳಸಿ ಬಟ್ಟೆ ತಯಾರಿಸಿದೆ. ಅಡಿಕೆ ಸಿಪ್ಪೆ/ಸೋಗೆ ಬಳಸಿ ಅಣಬೆ ಬೆಳೆಯಲಾಗುತ್ತಿದೆ, ಅಡಿಕೆ ಸಿಪ್ಪೆ, ಸೋಗೆಯಿಂದ ಗೊಬ್ಬರ ಮಾಡಬಹುದು. ಅಡಿಕೆಯಲ್ಲಿ ಔಷಧೀಯ ಗುಣಗಳು ಕೂಡ ಹೆಚ್ಚಿರುವುದು ಕಂಡು ಬಂದಿದೆ. ದೇಹದಲ್ಲಿನ ಫ್ರೀ ರ್ಯಾಡಿಕಲ್ಸ್ ನಿರ್ಮೂಲನೆ ಮಾಡಲು ಸಹಕರಿಸುತ್ತದೆ. ರೋಗ ನಿರ್ಮೂಲನೆ, ಸಕ್ಕರೆ ಖಾಯಿಲೆಯಲ್ಲಿ ಸಹ ಅಡಿಕೆ ಸಹಕಾರಿಯಾಗಿದ್ದು ವಿಶಿಷ್ಟ ಅಂಶಗಳನ್ನು ಹೊಂದಿರುವ ಅಡಿಕೆ ಮೌಲ್ಯವರ್ಧನೆಯಿಂದ ರೈತರು ಹೆಚ್ಚು ಆದಾಯ ಗಳಿಸಬಹುದು ಎಂದರು.
ಕ್ಯಾಲಿಕಟ್‍ನ ಡಿಎಎಸ್‍ಡಿ ಉಪನಿರ್ದೇಶಕಿ ಡಾ.ಫೆಮಿನಾ ಮಾತನಾಡಿ, ಅಡಿಕೆಯ ಮೌಲ್ಯವರ್ಧನೆಗೆ ಒಳ್ಳೆಯ ವ್ಯಾಪ್ತಿ ಇದೆ. ಹಾಗೂ ಮೌಲ್ಯವರ್ಧನೆ ಮಾಡುವುದು ಇಂದಿನ ಅಗತ್ಯವಾಗಿದೆ. ಆದರೆ ಅಡಿಕೆ ಮೌಲ್ಯವರ್ಧನೆ ಕುರಿತು ಇನ್ನೂ ಸಾಕಷ್ಟು ಅನ್ವೇಷಣೆಗಳು ಆಗಬೇಕಿದೆ. ಅನ್ಯ ದೇಶಗಳಾದ ಬಾಂಗ್ಲಾ, ಮ್ಯಾನ್ಮಾರ್ ಇನ್ನಿತರೆ ದೇಶಗಳು ಅಡಿಕೆ ಬೆಳೆಯುತ್ತಿದ್ದರೂ ನಮ್ಮ ದೇಶದ ಕೊಡುಗೆ ಶೇ.60 ರಷ್ಟಿದೆ ಅದರಲ್ಲೂ ನಮ್ಮ ರಾಜ್ಯದ ಪಾಲು ಶೇ.80ರಷ್ಟಿದೆ.
ಅಡಿಕೆ ಕುರಿತಾದ ಸಂಶೋಧನೆಗಳು ಹೆಚ್ಚಾಗಬೇಕು. ಅಡಿಕೆ ಕುರಿತು ವ್ಯಾಪಕ ಅಧ್ಯಯನ ಮಾಡಲು ರಚನೆಯಾದ ರಾಷ್ಟ್ರೀಯ ವಿಜ್ಞಾನ ಸಮಿತಿಯು ಅಡಿಕೆ ಬಳಕೆ ಕುರಿತು ಮೂರು ಮುಖ್ಯ ಅಂಶಗಳ ಕಡೆ ಗಮನ ಹರಿಸಿದೆ. ಅಡಿಕೆಯ ಔಷಧೀಯ ಉಪಯೋಗಗಳು, ಮಾನವನ ಆರೋಗ್ಯದ ಮೇಲೆ ಅಡಿಕೆಯ ಪ್ರಭಾವ ಹಾಗೂ ಅಡಿಕೆಯ ವಿತರಣೆ ಮತ್ತು ಬಳಕೆ ಇವುಗಳ ಅಧ್ಯಯನ ನಡೆಸುತ್ತಿದೆ. ಅಡಿಕೆಯಿಂದ ನೈಸರ್ಗಿಕ ಬಣ್ಣ ತಯಾರಿಕೆ ಕೂಡ ಒಂದು ಉತ್ತಮ ಬೆಳವಣಿಗೆಯಾಗಿದ್ದು, ತಾಂತ್ರಿಕತೆಯಿಂದ ಅಡಿಕೆಯ ಮೌಲ್ಯವರ್ಧನೆ ಹೆಚ್ಚುವೆಡೆ ಗಮನ ಹರಿಸಬೇಕೆಂದರು.


ಅಡಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ.ನಾಗರಾಜಪ್ಪ ಅಡಿವಪ್ಪರ್ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದಲ್ಲಿ ಸುಮಾರು 67 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಪರಿಸರ ಸ್ನೇಹಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು ಅಡಿಕೆ ಮೌಲ್ಯವರ್ಧನೆಯಿಂದ ರೈತರು ಲಾಭ ಹೊಂದಬಹುದು. ಇಂದಿನ ಕಾರ್ಯಾಗಾರದಲ್ಲಿ ಹೊರದೇಶದಿಂದ, ಹೊರ ರಾಜ್ಯಗಳಿಂದ ಪ್ರತಿನಿಧಿಗಳು, ನೂರಾರು ವಿಜ್ಞಾನಿಗಳು, ನವೋದ್ಯಮಿಗಳು, ವಿದ್ಯಾರ್ಥಿಗಳು, ರೈತರು, ಅಧಿಕಾರಿಗಳು ಪಾಲ್ಗೊಂಡಿದ್ದು, 2 ತಾಂತ್ರಿಕ ಗೋಷ್ಟಿಗಳು ಮತ್ತು 1 ವಸ್ತುಪ್ರದರ್ಶನ ಏರ್ಪಡಿಸಲಾಗಿದೆ ಎಂದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಕೆ.ನಾಗರಾಜ್, ಶಿಕ್ಷಣ ನಿರ್ದೇಶಕ ಹೇಮ್ಲಾನಾಯ್ಕ್, ಡಾ.ಪ್ರದೀಪ್ ಎಸ್, ಡಾ.ಕೆ.ಟಿ.ಗುರುಮೂರ್ತಿ, ಡಾ.ತಿಪ್ಪೇಶ್, ಡಾ.ಆರ್.ಗಣೇಶ್ ನಾಯ್ಕ್, ಅಡಿಕೆ ಪತ್ರಿಕೆಯ ಪಡ್ರೆ, ರೈತರು, ಉದ್ಯಮಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!