ಕಾಂಗ್ರೆಸ್ ಸರ್ಕಾರದ ಭ್ರಷ್ಟತೆ ಬಟಾ ಬಯಲಾಗಿದ್ದು, ಜನ ಬೀದಿಗಿಳಿದು ಹೋರಾಟ ಮಾಡಲಿದ್ದಾರೆ ; ಕೆಎಸ್ಈ

0 117

ಶಿವಮೊಗ್ಗ : ಕಾಂಗ್ರೆಸ್ ಸರ್ಕಾರದ ಭ್ರಷ್ಟತೆ ಬಟಾ ಬಯಲಾಗಿದ್ದು, ರಾಜ್ಯದ ರಸ್ತೆ ರಸ್ತೆಗಳಲ್ಲಿ ಜನ ಬೀದಿಗಿಳಿದು ಹೋರಾಟ ಮಾಡಲಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ
ಹೇಳಿದ್ದಾರೆ.


ಶಿವಮೊಗ್ಗ ಜಿಲ್ಲಾ ಬಿಜೆಪಿ ವತಿಯಿಂದ ಇಂದು ಭ್ರಷ್ಟ ರಾಜ್ಯ ಸರ್ಕಾರದ ವಿರುದ್ಧ ಶಿವಪ್ಪ ನಾಯಕ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಐದು ಗ್ಯಾರಂಟಿಗಳನ್ನು ಘೋಷಿಸಿ ನುಡಿದಂತೆ ನಡೆದಿದ್ದೇವೆ ಎಂದು ಹೇಳುತ್ತಾ ಈಗ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಲ್ಲೇ ಎಲ್ಲಾ ಗ್ಯಾರಂಟಿಗಳು ಸುಳ್ಳು ಎಂದು ಜನರಿಗೆ ಮನದಟ್ಟಾಗಿದೆ. ಕರೆಂಟ್ ಇಲ್ಲ, ರೈತರಿಗೆ ನೀರಿಲ್ಲ. ಸುಳ್ಳುಗಳನ್ನು ಹೇಳುತ್ತಾ ಐದು ರಾಜ್ಯಗಳ ಚುನಾವಣೆಗೆ, ಕಾಂಗ್ರೆಸ್‌ಗೆ ಎಟಿಎಂ ಆಗಿರುವ ಭ್ರಷ್ಟ ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿ ಇಬ್ಬರೂ ಕೇಂದ್ರ ಕಾಂಗ್ರೆಸ್ ನಾಯಕರಿಗೆ ಮತ್ತು ಐದು ರಾಜ್ಯದ ಚುನಾವಣೆಗೆ ಹಣ ಹೊಂದಿಸಲು ಪೈಪೋಟಿಗಿಳಿದಿದ್ದಾರೆ. ಟ್ರಾನ್ಸ್‌ಫರ್ ದಂಧೆಯಲ್ಲಿ ಮುಳುಗಿದ್ದಾರೆ. ಕಾಂಗ್ರೆಸ್ ಕಾರ್ಪೊರೇಟರ್ ಮನೆಯಲ್ಲಿ 40 ಕೋಟಿ ಹಾಗೂ ಕಾಂಗ್ರೆಸ್ ಎಂಎಲ್‌ಸಿ ಸಂಬಂಧಿಕರ ಮನೆಯಲ್ಲಿ 45 ಕೋಟಿ ಹಣ ಈಗಾಗಲೇ ಸಿಕ್ಕಿದೆ. ಇದು ಸ್ಯಾಂಪಲ್ ಅಷ್ಟೆ. ಸಿಬಿಐ ತನಿಖೆಗೆ ಒಪ್ಪಿಸಲಿ. ನೂರಾರು ಕೋಟಿ ಹಗರಣ ಬೆಳಕಿಗೆ ಬರಲಿದೆ ಎಂದರು.

ಅವರ ತಪ್ಪನ್ನು ಹೇಳಿದರೆ ತಿದ್ದಿಕೊಳ್ಳುವ ಬದಲು ಭಂಡತನದ ಮಾತುಗಳನ್ನಾಡುತ್ತಾರೆ. ಕಾಂಗ್ರೆಸ್‌ಗೆ ಕರ್ನಾಟಕ ರಾಜ್ಯ ಎಟಿಎಂ ಆಗಿದೆ. ಮುಂಬರು ದಿನಗಳಲ್ಲಿ ಜೈಲು ಪಾಲಾದರೂ ತೊಂದರೆಯಿಲ್ಲ ಬಿಜೆಪಿಯಿಂದ ಆಟೊ ಚಾಲಕರು, ಬಸ್ ಚಾಲಕರು ಮತ್ತು ಎಲ್ಲಾ ವರ್ಗದ ಜನರೊಂದಿಗೆ ಸೇರಿ ರಸ್ತೆ ತಡೆ ನಡೆಸಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಲಿದೆ ಎಂದರು.

ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಮೈಸೂರು ದಸರಾದ ಕಲಾವಿದರಿಗೆ ನೀಡುವ ಸಂಭಾವನೆಯನ್ನು ಲಂಚ ತಿಂದ ಸರ್ಕಾರ ಇದು. ಲೂಟಿಗೆ ಮತ್ತೊಂದು ಹೆಸರೇ ಕಾಂಗ್ರೆಸ್. ಬಿಜೆಪಿ ಮೇಲೆ ಗೂಬೆ ಕೂರಿಸುತ್ತಾ ಸುಳ್ಳು ಆರೋಪಗಳನ್ನು ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ತಾನೇ ಬಲೆಗೆ ಬಿದ್ದಿದೆ. ಕೇವಲ 5 ತಿಂಗಳಲ್ಲೇ ನೂರಾರು ಕೋಟಿ ಭ್ರಷ್ಟಾಚಾರ ಮಾಡಿದ ಈ ಸರ್ಕಾರದ ವಿರುದ್ಧ ಸಿಬಿಐ ತನಿಖೆ ಆಗಬೇಕು ಎಂದರು.


ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಮಾತನಾಡಿ, ಐಟಿ ದಾಳಿಯಲ್ಲಿ ಕಂತೆ ಕಂತೆ ಹಣ ಕಾಂಗ್ರೆಸ್ಸಿಗರ ಮನೆಯಲ್ಲಿ ಸಿಕ್ಕಿದೆ. ಸಿದ್ದರಾಮಯ್ಯ ಹೈಕಮಾಂಡಿಗೆ ಐದು ರಾಜ್ಯದ ಚುನಾವಣೆಗೆ 1 ಸಾವಿರ ಕೋಟಿ ನೀಡುತ್ತೇನೆ ಎಂದು ಭರವಸೆ ನೀಡಿದರೆ, ಉಪಮುಖ್ಯಮಂತ್ರಿ ಡಿಕೆಶಿ ನನಗೆ ಮುಖ್ಯಮಂತ್ರಿ ಸ್ಥಾನ ಕೊಡಿ ನಾನು 2 ಕೋಟಿ ರೂ. ಸಂಗ್ರಹಿಸಿ ಕೊಡುತ್ತೇನೆ ಎಂದು ಈಗಾಗಲೇ ಭರವಸೆ ನೀಡಿದ್ದಲ್ಲದೆ ಕಾರ್ಯರೂಪಕ್ಕೂ ಇಳಿದಿದ್ದಾರೆ. ಗೃಹಲಕ್ಷ್ಮಿ ಕೇವಲ ಒಂದು ತಿಂಗಳಿಗೇ ನಿಂತಿದೆ. ತಾಯಂದಿರ ಖಾತೆಗೆ ಹಣ ಇನ್ನೂ ಬಂದಿಲ್ಲ. ಎಲ್ಲಾ ವಿಭಾಗಗಳಲ್ಲೂ ಎತ್ತುವಳಿ ಪ್ರಾರಂಭಿಸಿದ್ದಾರೆ. ಎಂಪಿ ಚುನಾವಣೆಯವರೆಗೆ ಗ್ಯಾರಂಟಿ ನೀಡೋಣ ಎಂದು ಪ್ಲ್ಯಾನ್ ಮಾಡಿದ್ದರು. ಆದರೆ ಅಷ್ಟರಲ್ಲೇ ಈ ಸರ್ಕಾರ ಬೀಳಲಿದೆ. ಕಾಂಗ್ರೆಸ್ ಶಾಸಕರೇ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ಮೇಲೆ ನೇರ ಆರೋಪ ಮಾಡುತ್ತಿದ್ದಾರೆ. ಈ ಸರ್ಕಾರ ಭ್ರಷ್ಟ ಸರ್ಕಾರ ಎಂಬುದು ಸಾಬೀತಾಗಿದೆ ಎಂದರು.

ಈ ಸಂದರ್ಭದಲ್ಲಿ ಮೇಯರ್ ಶಿವಕುಮಾರ್, ನಗರಾಧ್ಯಕ್ಷ ಜಗದೀಶ್, ಎಸ್.ಎಸ್. ಜ್ಯೋತಿ ಪ್ರಕಾಶ್, ತಮ್ಮಡಿಹಳ್ಳಿ ನಾಗರಾಜ್, ರತ್ನಾಕರ ಶೆಣೈ, ಶಂಕರ್ ಗನ್ನಿ, ಸುರೇಖಾ ಮುರಳೀಧರ್, ರಶ್ಮಿ, ಅನಿತಾ ರವಿಶಂಕರ್, ಅಣ್ಣಪ್ಪ ಮತ್ತಿತರರಿದ್ದರು.

Leave A Reply

Your email address will not be published.

error: Content is protected !!