ಕುಡಿಯುವ ನೀರಿನ ಬಾವಿಗೆ ವಿಷ ಹಾಕಿ ವಿಕೃತಿ ಮೆರೆದ ದುರುಳರು ! ದೂರು ದಾಖಲು

0 1,736

ರಿಪ್ಪನ್‌ಪೇಟೆ: ಕೋಡೂರು ಗ್ರಾ.ಪಂ. ವ್ಯಾಪ್ತಿಯ ಕೆ.ಕುನ್ನೂರು ಗ್ರಾಮದ ನಾಗಪ್ಪ ಎಂಬುವರ ಮನೆಯ ಕುಡಿಯುವ ನೀರಿನ ತೆರೆದ ಬಾವಿಗೆ ದುರುಳರು ಕಳೆನಾಶಕ ಹಾಕಿದ ಪ್ರಸಂಗವೊಂದು ನಡೆದಿದ್ದು ಈ ಸಂಬಂಧ ರಿಪ್ಪನ್‌ಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಏನಿದು ಘಟನೆ ?
ಯುಗಾದಿ ಹಬ್ಬದ ಹಿಂದಿನ ದಿನದಂದು ಬಾವಿಯಲ್ಲಿನ ಕೆಸರು ತೆಗೆಯಲಾಗಿ ಮಾರನೇ ದಿನ (ಏ.09) ಮನೆಯವರು ಬಾವಿಯಲ್ಲಿನ ನೀರನ್ನು ಮೋಟಾರ್ ಸಹಾಯದಿಂದ ಮೇಲಕ್ಕೆತ್ತಿ ಎರಡು ಲೋಟ ನೀರು ಕುಡಿಯುತ್ತಿದ್ದಂತೆ ಏನೋ ವಾಸನೆ ಮೂಗಿಗೆ ಬಡಿದಿದ್ದು ಬಾವಿ ಬಳಿ ತೆರಳಿ ನೋಡಿದಾಗ ಕಳೆನಾಶಕದ ಬಾಟಲ್ ಒಳಗಿನ ಲೇಬಲ್ ಒಂದು ಬಾವಿ ಬಳಿ ದೊರಕಿದ್ದು ತಕ್ಷಣ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿಕೊಂಡಿದ್ದು ನೀರಿಗೆ ವಿಷ ಬೆರೆತಿರುವುದು ವರದಿಯಿಂದ ದೃಢವಾಗಿದೆ.

ಸಾಯುವ ಸ್ಥಿತಿಯಲ್ಲಿವವರಿಗೆ ಒಂದು ಗುಟುಕು ನೀರು ಬಾಯಿಗೆ ಬಿಟ್ಟರೆ ಬದುಕುತ್ತಿದ್ದರು ಎನ್ನುವಂತಹ ದಿನಗಳಲ್ಲಿ ಮಲೆನಾಡಿನಲ್ಲಿ ಕಳೆದ 8-9 ತಿಂಗಳಿಂದ ಮಳೆಯಿಲ್ಲದೆ ಅಂತರ್ಜಲ ಸಹ ಕುಸಿದಿದ್ದು ಕುಡಿಯುವ ನೀರಿಗೆ ತತ್ವಾರ ಉಂಟಾಗಿದ್ದು ಇಂತಹ ದಿನಗಳಲ್ಲಿ ಇಂತಹ ಹೀನಕೃತ್ಯ ಎಸಗಿದರ‍್ಯಾರು? ಯಾವ ಪುಣ್ಯಾತ್ಮ ಗುಟುಕು ನೀರಿಗಾಗಿ ಪರದಾಡುವಂತಹ ಕಾಲದಲ್ಲಿ ಇಂತಹ ಕೃತ್ಯ ಎಸಗಿದವರು? ಎಂದು ಸಾರ್ವಜನಿಕರಲ್ಲಿ ಚರ್ಚೆ ಶುರುವಾಗಿದೆ‌.

ಕೆಲವು ಕಿಡಿಗೇಡಿಗಳಿಂದಾಗಿ ಊರಿನಲ್ಲಿ ಯಾರು ವಾಸ ಮಾಡದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಬೇಸಿಗೆ ಬಿಸಿಲ ಝಳಕ್ಕೆ ತತ್ತರಿಸಿರುವ ಮಲೆನಾಡಿನ ವ್ಯಾಪ್ತಿಯ ಹಲವು ಹಳ್ಳ-ಕೊಳ್ಳಗಳು ಸಂಪೂರ್ಣ ಬತ್ತಿ ಹೋಗಿ ಅಂತರ್ಜಲ ಸಹ ಕುಸಿಯುತ್ತಿರುವ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನ ಜಾನುವಾರುಗಳು, ಪ್ರಾಣಿ-ಪಕ್ಷಿಗಳು ಕುಡಿಯುವ ನೀರಿಗಾಗಿ ಪರಿತಪ್ಪಿಸುವಂತಹ ಕಾಲದಲ್ಲಿ ಇಂತಹ ಹೀನ ಕೃತ್ಯದಲ್ಲಿ ತೊಡಗಿರುವ ವ್ಯಕ್ತಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಮುಂದಾಗುವರೇ ಕಾದು ನೋಡಬೇಕಾಗಿದೆ.

ಒಟ್ಟಾರೆಯಾಗಿ ಹನಿ ನೀರಿಗೂ ಪರದಾಡುವಂತಹ ಇಂದಿನ ದಿನಗಳಲ್ಲಿ ಬಾವಿಗೆ ವಿಷ ಹಾಕಿ ನೀರು ಬಳಸದಂತೆ ಮಾಡಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

Leave A Reply

Your email address will not be published.

error: Content is protected !!