ಗುರೂಜಿ ಶಾಲೆಯಲ್ಲಿ ಬೀಜದುಂಡೆ ತಯಾರಿಕಾ ಶಿಬಿರ | ನೈಸರ್ಗಿಕ ಕಾಡು ನಾಶದಿಂದ ದುಷ್ಪರಿಣಾಮ

0 524

ಹೊಸನಗರ : ಜಾಗತಿಕ ತಾಪಮಾನ ಏರಿಕೆ, ಅತಿವೃಷ್ಠಿ, ಅನಾವೃಷ್ಠಿಯಂತಹ ನೈಸರ್ಗಿಕ ವಿಕೋಪಗಳಿಗೆ ಪ್ರಕೃತಿ ನಾಶ ಕಾರಣವಾಗಿದೆ ಎಂದು ಇಲ್ಲಿನ ಸೆಶನ್ಸ್ ನ್ಯಾಯಾಲಯದ ಹಿರಿಯ ವ್ಯವಹಾರ ನ್ಯಾಯಾಧೀಶ ಎಂ.ಎಸ್.ಸಂತೋಷ್ ಹೇಳಿದರು.

ಗುರೂಜಿ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಬೀಜದುಂಡೆ ತಯಾರಿಕಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಲೆನಾಡು ಪ್ರದೇಶದಲ್ಲಿಯೂ ಇತ್ತೀಚಿನ ವರ್ಷಗಳಲ್ಲಿ ವಾಡಿಕೆ ಮಳೆ ಸುರಿಯುತ್ತಿಲ್ಲ. ದಿನೇ ದಿನೇ ತಾಪಮಾನ ಏರುತ್ತಿರುವುದು ಎಚ್ಚರಿಕೆ ಘಂಟೆಯಾಗಿದೆ. ವಿದ್ಯಾರ್ಥಿಗಳು ಉಳವೆಯಿಂದಲೇ ಪರಿಸರ ಜಾಗೃತಿ ಹೊಂದಬೇಕೆಂದರು.

ಪ್ರಧಾನ ನ್ಯಾಯಾಧೀಶ ಕೆ.ರವಿಕುಮಾರ್ ಮಾತನಾಡಿ, ಮಕ್ಕಳು ಪ್ರತಿವರ್ಷವೂ ಕನಿಷ್ಠ ಒಂದು ಗಿಡವನ್ನಾದರೂ ನೆಟ್ಟು ಬೆಳೆಸುವ ಪಣ ತೊಡಬೇಕೆಂದು ಕರೆ ನೀಡಿದರು.

ಪರಿಸರ ಕಾರ್ಯಕರ್ತ ಹನಿಯ ರವಿ ಮಾತನಾಡಿ, ಪ್ಲಾಸ್ಟಿಕ್, ಕಾಗದ, ವಿದ್ಯುತ್ ಅನ್ನು ಮಿತವಾಗಿ ಬಳಸುವುದರಿಂದಲೂ ಪರಿಸರ ಸಂರಕ್ಷಣೆ ಆಗುತ್ತದೆ. ನೈಸರ್ಗಿಕ ಕಾಡನ್ನು ನಾವೇ ನಾಶ ಮಾಡಿ, ಈಗ ಬೀಜದುಂಡೆಗಳನ್ನು ಬಿತ್ತುವ ಪರಿಸ್ಥಿತಿಗೆ ನಾವು ಬಂದಿರುವುದು ದುರಂತ ಎಂದರು.

ಜಲತಜ್ಞ ಚಕ್ರವಾಕ ಸುಬ್ರಮಣ್ಯ ಹಾಗೂ ಪತ್ರಕರ್ತ ರವಿರಾಜ ಎಂ.ಜಿ.ಭಟ್ ನೈಸರ್ಗಿಕ ಜಾತಿಯ ಮರಗಳನ್ನು ಬೆಳೆಸುವುದರಿಂದ ಉಂಟಾಗುವ ಋಣಾತ್ಮಕ ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ವಿದ್ಯಾರ್ಥಿಗಳು ಉತ್ಸಾಹದಿಂದ ಬೀಜದುಂಡೆಗಳನ್ನು ತಯಾರಿಸಿದರು. ಪ್ರತಿವರ್ಷವೂ ಗಿಡಗಳನ್ನು ನೆಟ್ಟು ಬೆಳೆಸುವ ಸಂಕಲ್ಪ ಮಾಡಿದರು.


ಉಪವಲಯ ಅರಣ್ಯಾಧಿಕಾರಿ ಯುವರಾಜ್, ವನಪಾಲಕ ರಮೇಶ್, ಶಾಲಾ ಸಮಿತಿ ಉಪಾಧ್ಯಕ್ಷ ಸುದೇಶ್ ಕಾಮತ್, ನಿರ್ದೇಶಕ ನಾಗೇಶ್, ಕಾರ್ಯದರ್ಶಿ ಸಂಕೂರು ಶಾಂತಮೂರ್ತಿ, ಪತ್ರಕರ್ತ ರವಿರಾಜ್ ಭಟ್, ಶಿಕ್ಷಕಿ ಉಷಾ, ಸುಷ್ಮಾ, ರೇಖಾ ಹರೀಶ್, ಲೋಕ ಅದಾಲತ್ ಗುರುರಾಜ್, ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!