ಚುನಾವಣಾ ಸಿದ್ದತೆ ಕಡೆ ಗಮನ ಹರಿಸುವಂತೆ ಶಿವಮೊಗ್ಗ ಡಿಸಿ ಸೂಚನೆ

0 123

ಶಿವಮೊಗ್ಗ : 14 – ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಲ್ಲ ಸಹಾಯಕ ಚುನಾವಣಾಧಿಕಾರಿಗಳು ಇವಿಎಂ ಸಿದ್ದತೆ, ತರಬೇತಿ ಮತ್ತು ಮತದಾನದಂದು ಖಚಿತ ಕನಿಷ್ಟ ಸೌಲಭ್ಯಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸಹಾಯಕ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದರು.

ಬುಧವಾರ ಜಿಲ್ಲಾಡಳಿತ ಕಚೇರಿಯಲ್ಲಿ ಸಹಾಯಕ ಚುನಾವಣಾಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ವಿಡಿಯೋ ಕಾನ್ಫರೆನ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಚುನಾವಣಾಧಿಕಾರಿಗಳು ಅಂಚೆ ಮತದಾನದ ಕಡೆ ಹೆಚ್ಚಿನ ಗಮನ ಹರಿಸಿ, ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು. ಜೊತೆಗೆ ಇವಿಎಂ ಸಿದ್ದಪಡಿಸುವಿಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಚುನಾವಣೆಯಲ್ಲಿ ಎರಡು ಬ್ಯಾಲಟ್ ಪೇಪರ್ ಇರುವ ಕಾರಣ ಅತ್ಯಂತ ಜಾಗರೂಕತೆಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕು. ಹಾಗೂ ಚುನಾವಣಾ ನಿಯೋಜಿತ ಅಧಿಕಾರಿ/ಸಿಬ್ಬಂದಿಗಳ ಎರಡನೇ ತರಬೇತಿಯನ್ನು ಪರಿಣಾಮಕಾರಿಯಾಗಿ ನಡೆಸಬೇಕು ಎಂದರು.

ಅಧಿಕಾರಿಗಳು ಮತಗಟ್ಟೆಗಳಿಗೆ ಭೇಟಿ ನೀಡಿ, ಮತದಾನದಂದು ಮತಗಟ್ಟೆಗಳಲ್ಲಿ ನೀಡಬೇಕಾದ ಖಚಿತ ಕನಿಷ್ಟ ಸೌಲಭ್ಯಗಳಾದ ರ್ಯಾಂಪ್, ಕುಡಿಯುವ ನೀರು, ಪೀಠೋಪಕರಣಗಳ ವ್ಯವಸ್ಥೆ, ಕ್ಯೂ ನಿರ್ವಹಣೆ ಸೇರಿದಂತೆ ಇತರೆ ಮೂಲಭೂಸ ಸೌಕರ್ಯಗಳ ಕುರಿತು ಖಾತ್ರಿಪಡಿಸಿಕೊಂಡು ಕ್ರಮ ವಹಿಸಬೇಕು.

ಎಲ್ಲ ತಾಲ್ಲೂಕುಗಳಲ್ಲಿ ಚುನಾವಣಾ ನಿಯೋಜಿತ ಅಧಿಕಾರಿಗಳಿಂದ ನಮೂನೆ 12 ಅಂಚೆ ಮತಪತ್ರವನ್ನು ಪಡೆಯಲಾಗುತ್ತಿದ್ದು, ಬಾಕಿ ಇರುವ ಮತಪತ್ರಗಳನ್ನು ಇನ್ನು 3-4 ದಿನಗಳಲ್ಲಿ ನೀಡಿ 12ಎ ಇಡಿಸಿ ಯನ್ನು ಪಡೆದುಕೊಳ್ಳುವಂತೆ ಸಹಾಯಕ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಎಲ್‍ಓ ಗಳು ಮತಗಟ್ಟೆಗಳಲ್ಲಿ ಮತದಾರ ಮಾಹಿತಿ ಸ್ಲಿಪ್‍ಗಳನ್ನು ಹಂಚಬೇಕು. ಸಹಾಯಕ ಚುನಾವಣಾಧಿಕಾರಿಗಳು ಈ ಕುರಿತು ಪರಿಶೀಲಿಸಬೇಕು ಎಂದು ಸೂಚಿಸಿದರು.

14-ಶಿವಮೊಗ್ಗ ಲೋಕಸಭಾ ಮತ ಕ್ಷೇತ್ರದಲ್ಲಿ 862789 ಪುರುಷ, 890061 ಮಹಿಳೆ, 03 ತೃತೀಯಲಿಂಗಿ ಸೇರಿದಂತೆ 1752885 ಮತದಾರರಿದ್ದಾರೆ. ವಿಕಲಚೇತನ 10925 ಪುರುಷ, 8340 ಮಹಿಳೆ ಸೇರಿ ಒಟ್ಟು 19265 ಮತದಾರರು ಇದ್ದಾರೆ. 18 ರಿಂದ 19 ವರ್ಷದೊಳಗಿನ 22067 ಯುವಕ, 19861 ಯುವತಿ, 3 ತೃತೀಯಲಿಂಗಿ ಸೇರಿದಂತೆ ಒಟು 41931 ಯುವ ಮತದಾರರು ಇದ್ದಾರೆ. 85 ವರ್ಷ ಮೀರಿದ 6214ಪುರುಷ, 9114 ಮಹಿಳೆ ಒಟ್ಟು 15328 ಮತದಾರರು ಇದ್ದಾರೆ.
– ಗುರುದತ್ತ ಹೆಗಡೆ, ಜಿಲ್ಲಾಧಿಕಾರಿಗಳು

ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಮಾತನಾಡಿ, ಮನೆ ಮತದಾನದ ಪ್ರಕ್ರಿಯೆ ಮತ್ತು ನಿರ್ವಹಣೆ ಕುರಿತು ವಿವರಿಸಿದರು.

ಸಭೆಯಲ್ಲಿ ಸಹಾಯಕ ಚುನಾವಣಾಧಿಕಾರಿಗಳು, ತಹಶೀಲ್ದಾರರು, ವಿವಿಧ ತಂಡಗಳು, ಸಮಿತಿಗಳ ನೋಡಲ್ ಅಧಿಕಾರಿಗಳು ಹಾಜರಿದ್ದರು.

Leave A Reply

Your email address will not be published.

error: Content is protected !!