ಗೃಹ ಜ್ಯೋತಿ ; ಒಂದು ಅರ್ಜಿಗೆ ಬರೋಬ್ಬರಿ 100 ರೂ. ವಸೂಲಿ..!!

0 39

ರಿಪ್ಪನ್‌ಪೇಟೆ: ರಾಜ್ಯದ ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಲಾದ ಐದು ಗ್ಯಾರಂಟಿ ಯೋಜನೆಯಡಿ ಗೃಹ ಜ್ಯೋತಿ ನೋಂದಣಿಗೆ ಗ್ರಾಮ ಒನ್ ಮತ್ತು ಸೇವಾಸಿಂಧುಗಳಿಗೆ ನೀಡುವ ಮೂಲಕ ಉಚಿತ ನೋಂದಣಿಯೆಂದು ಹೇಳಲಾಗಿದ್ದರೂ ಕೂಡಾ ಹೊಸನಗರ ತಾಲ್ಲೂಕಿನ ಸೇವಾಸಿಂಧು ಮತ್ತು ಗ್ರಾಮ ಒನ್ ಕೇಂದ್ರದಲ್ಲಿ ಫಲಾನುಭವಿಗಳಿಂದ ಮನಸ್ಸಿಗೆ ಬಂದಂತೆ 50 – 100 ರೂ.ಗಳನ್ನು ಸುಲಿಗೆ ಮಾಡುತ್ತಿದ್ದಾರೆಂದು ರೈತ ಮುಖಂಡ ಈಶ್ವರಪ್ಪ, ಸ್ವಾಮಿಶಂಕರ, ಹೇಮರಾಜ್, ಸೋಮಶೇಖರ, ಶೇಖರಪ್ಪ, ಆರೋಪಿಸಿದರು.

ಇಂದು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಈ ರೀತಿಯಲ್ಲಿ ಸರ್ಕಾರದ ಗ್ರಾಮಒನ್ ಮತ್ತು ಸೇವಾಸಿಂಧು ಸೇವಾ ಕೇಂದ್ರದಲ್ಲಿ ಗ್ಯಾರಂಟಿ ಕಾರ್ಡ್ ಯೋಜನೆಗೆ ಫಲಾನುಭವಿಗಳಿಂದ ಹಣ ವಸೂಲಾತಿ ಮಾಡುತ್ತಿದ್ದಾರೆಂದು ದೂರು ಬಂದರೆ ಅಂತಹ ಕೇಂದ್ರದ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದರೊಂದಿಗೆ ಪರವಾನಿಗೆ ರದ್ದು ಮಾಡುವುದಾಗಿ ಎಚ್ಚರಿಕೆಯನ್ನು ಸಹ ನೀಡಲಾಗಿದ್ದರೂ ಕೂಡಾ ಹೊಸನಗರ ತಾಲ್ಲೂಕು ವ್ಯಾಪ್ತಿಯ ಹಲವು ಗ್ರಾಮ ಒನ್ ಮತ್ತು ಸೇವಾಸಿಂಧು ಕೇಂದ್ರಗಳಲ್ಲಿ ಫಲಾನುಭವಿಗಳನ್ನು ಸುಲಿಗೆ ಮಾಡುತ್ತಿದ್ದಾರೆಂದು ಆರೋಪಿಸಿದರು.

ಒಂದು ಕಡೆಯಲ್ಲಿ ಸರ್ವರ್ ಸಮಸ್ಯೆ ಇನ್ನೊಂದು ಕಡೆಯಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಯಡಿಯಲ್ಲಿ ಫಲಾನುಭವಿಗಳಿಂದ ಭರ್ಜರಿ ಸುಲಿಗೆ ಒಂದು ಗ್ಯಾರಂಟಿ ಯೋಜನೆಗೆ ಬರೋಬರಿ 100 ಹಣ ವಸೂಲಾತಿ ನಡೆಯುತ್ತಿದ್ದರೂ ಕೂಡಾ ತಾಲ್ಲೂಕು ಮಟ್ಟದ ಅಧಿಕಾರಿ ವರ್ಗ ಕಣ್ಣಿದ್ದು ಕರುಡರಂತೆ ಕಿವಿಯಿದ್ದು ಕಿವುಡರಂತೆ
ವರ್ತಿಸಿ ಮೌನಕ್ಕೆ ಶರಣಾಗಿದ್ದಾರೆ.

ಇನ್ನಾದರೂ ಜನಪ್ರತಿನಿಧಿಗಳು ಮತ್ತು ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್, ಉಪತಹಶೀಲ್ದಾರ್ ಇವರು ತಾಲ್ಲೂಕು ವ್ಯಾಪ್ತಿಯಲ್ಲಿನ ಗ್ರಾಮ ಒನ್ ಮತ್ತು ಸೇವಾಸಿಂಧು ಕೇಂದ್ರದಲ್ಲಿ ನಡೆಯುತ್ತಿರುವ ಸುಲಿಗೆ ದಂಧೆಗೆ ಕಡಿವಾಣ ಹಾಕುವರೇ ಕಾದು ನೋಡಬೇಕಾಗಿದೆ.

ಒಟ್ಟಾರೆಯಾಗಿ ಸರ್ಕಾರದ ಇಂತಹ ಜನಹಿತ ಕಾರ್ಯಕ್ರಮಗಳ ಹೆಸರಿನಲ್ಲಿ “ಹುಚ್ಚು ಮು…. ಮದುವೆಯಲ್ಲಿ ಉಂಡವನೇ ಜಾಣ” ಎಂಬಂತೆ ಮಧ್ಯವರ್ತಿಗಳ ಜೊತೆ ಹೋದರೆ 50 ರೂ. ನೇರವಾಗಿ ಹೋದ ಫಲಾನುಭವಿಗೆ 100 ರೂ. ಹೀಗೆ ಬ್ರೋಕರ್ ಗಳಿಗೂ ಶುಕ್ರದೆಸೆ ಆರಂಭವಾದಂತಾಗಿದೆ ಎನ್ನಲಾಗಿದೆ.

Leave A Reply

Your email address will not be published.

error: Content is protected !!