ಶರಾವತಿ ಮುಳುಗಡೆ ಸಂತ್ರಸ್ತರ ಭೂ ಮಂಜೂರಾತಿಗೆ ಸಿಎಂ ಕಚೇರಿಯಿಂದಲೇ ವಿಶೇಷ ಕಾರ್ಯದರ್ಶಿ ನೇಮಕಕ್ಕೆ ಆಗ್ರಹಿಸಿ ಧರಣಿ

0 243

ಶಿವಮೊಗ್ಗ : ಜಿಲ್ಲೆಯ ಶರಾವತಿ, ಚಕ್ರಾ, ವರಾಹಿ, ಮಾಣಿ, ಸಾವೆ ಹಕ್ಲು ಮೊದಲಾದ ಮುಳುಗಡೆ ಸಂತ್ರಸ್ತರಿಗೆ ಭೂ ಮಂಜೂರಾತಿ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಕಚೇರಿಯಿಂದಲೇ ವಿಶೇಷ ಕಾರ್ಯದರ್ಶಿಯೊಬ್ಬರನ್ನು ನೇಮಕ ಮಾಡುವಂತೆ ಆಗ್ರಹಿಸಿ ಜಿಲ್ಲಾ ಮುಳುಗಡೆ ಸಂತ್ರಸ್ತರು ಹಾಗೂ ಭೂ ಹಕ್ಕು ವಂಚಿತರ ವೇದಿಕೆ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಲಾಯಿತು.


ಮುಳುಗಡೆ ಸಂತ್ರಸ್ತರು ಸಮಸ್ಯೆ ಎದುರಿಸುತ್ತಾ ಈಗಾಗಲೇ ಎರಡು ತಲೆಮಾರು ಕಳೆದು ಹೋಗಿವೆ. ಸುಮಾರು 60 ವರ್ಷಗಳಿಂದಲೂ ಈ ಸಮಸ್ಯೆ ಪರಿಹಾರವಾಗದೆ ಕಗ್ಗಂಟಾಗಿದೆ. 29-9-2021ರಂದು ಅಂದಿನ ಜಿಲ್ಲಾಧಿಕಾರಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹರಿಸಲು ಕಾರ್ಯಪಡೆ ರಚನೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಅದರಲ್ಲಿ ವಿಶೇಷ ಜಿಲ್ಲಾಧಿಕಾರಿ ನೇಮಕದ ಬಗ್ಗೆ ಪ್ರಸ್ತಾಪಿಸಲಾಗಿತ್ತೆಂದು ಮನವಿಯಲ್ಲಿ ತಿಳಿಸಲಾಗಿದೆ.


ವಿಶೇಷ ಜಿಲ್ಲಾಧಿಕಾರಿ ಬದಲಾಗಿ ವಿಶೇಷ ಕಾರ್ಯದರ್ಶಿಯನ್ನು ಮುಖ್ಯಮಂತ್ರಿ ಕಚೇರಿಯಿಂದಲೇ ನೇಮಕ ಮಾಡಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ಕಂದಾಯ ಹಾಗೂ ಅರಣ್ಯ ಇಲಾಖೆ ನಡುವೆ ಹೊಂದಾಣಿಕೆ ಇಲ್ಲದೆ ಇರುವುದರಿಂದ ಮುಳುಗಡೆ ಸಂತ್ರಸ್ತರು ಸಮಸ್ಯೆಗಳ ಸುಳಿಯಲ್ಲಿ ಸಿಲುಕುವಂತಾಗಿದೆ ಎಂದು ತಿಳಿಸಲಾಗಿದೆ.


ಪ್ರತಿಭಟನೆಯಲ್ಲಿ ಸಂಚಾಲಕ ಶ್ರೀಕರ, ತೀ.ನ.ಶ್ರೀನಿವಾಸ್, ಬೆಳ್ಳೂರು ತಿಮ್ಮಪ್ಪ, ರವೀಂದ್ರ ಮಾಸ್ತಿಕಟ್ಟೆ, ರಾಘವೇಂದ್ರ ಸಂಪೋಡಿ, ಮುಕುಂದ ಕಲ್ಲುಕೊಪ್ಪ ಮತ್ತಿತರರು ಇದ್ದರು.

Leave A Reply

Your email address will not be published.

error: Content is protected !!