ತರಕಾರಿ ಬೇಕಾ ತರಕಾರಿ… ತಾಜಾ ತಾಜಾ ತರಕಾರಿ… ಬನ್ನಿ ಸರ್ ಬನ್ನಿ ಹಾಫ್ ರೇಟ್‌ಗೆ ಕೊಡ್ತೀವಿ

0 504

ಸೊರಬ: ತರಕಾರಿ ಬೇಕಾ ತರಕಾರಿ… ತಾಜಾ ತಾಜಾ ತರಕಾರಿ… ಬನ್ನಿ ಸರ್ ಬನ್ನಿ ಹಾಫ್ ರೇಟ್‌ಗೆ ಕೊಡ್ತೀವಿ.. ಸೊಪ್ಪು, ಹೂ, ಹಣ್ಣು ಏನೇ ತೊಗಳ್ಳಿ ಕಡಿಮೆ ಬೆಲೆಗೆ ಕೊಡ್ತೀವಿ. ಇದು ಯಾವುದೋ ನಗರ, ಪಟ್ಟಣ, ಸಂತೆಯಲ್ಲ. ಸರ್ಕಾರಿ ಶಾಲೆಯೊಂದರ ಮಕ್ಕಳ ಸಂತೆಯ ಚಿತ್ರಣ.

ಹಿಂದೆ ಸಂತೆಗಳು ಅಂದ್ರೆ ಗ್ರಾಮೀಣರ ಜೀವನದ ಭಾಗವಾಗಿದ್ದವು, ಎಲ್ಲಾ ರೀತಿಯ ವಸ್ತುಗಳನ್ನು ಕೊಳ್ಳುವುದು, ಮಾರುವುದು ಸಂತೆಯ ವಿಶೇಷ, ವಾರಕ್ಕೊಂದು ಸಂತೆ ಬಂತೆಂದರೆ ಅಲ್ಲಿ ಎಲ್ಲಾ ವಸ್ತು ಸಿಗಲಿವೆ, ಸಂತೆಗೆ ಹೋಗಿ ಬರೋದೆ ಒಂದು ಸುಂದರ ಅನುಭವದಂತಿತ್ತು, ಆದರೆ ಇಂದು ಸಂತೆಗಳು ಅಲ್ಲೊಂದು ಇಲ್ಲೊಂದು ಕಾಣಬಹುದಾಗಿದೆ, ಮಾಲ್, ಬಿಗ್ ಮಾರ್ಕೆಟ್‌ಗಳ ಹಾವಳಿಯಿಂದ ಇಂದು ಸಂತೆಗಳು ಕಳೆಗುಂದಿವೆ.

ಪಟ್ಟಣ, ನಗರಗಳಲ್ಲಿ ದೊಡ್ಡ ದೊಡ್ಡ ಮಾರ್ಕೆಟ್‌ಗಳು ತಲೆ ಎತ್ತಿ ಸಂತೆ, ಸಣ್ಣ ಮಾರುಕಟ್ಟೆಗಳಿಗೆ ಹೊಡೆತ ನೀಡಿವೆ, ಸಂತೆ ಅಂದ್ರೆ ಎಷ್ಟೋ ಮಕ್ಕಳಿಗೆ ತಿಳಿದೇ ಇಲ್ಲ, ಸಂತೆ ಮತ್ತು ವ್ಯವಹಾರದ ಮಹತ್ವ ಸಾರುವ ನಿಟ್ಟಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಪ್ಪಗಡ್ಡೆ ಯಲ್ಲಿ ಮಕ್ಕಳ ಸಂತೆ ಗಣಿತ ಮೇಳ ಏರ್ಪಡಿಸಲಾಗಿತ್ತು, ಈ ಸಂತೆ ಮೇಳದಲ್ಲಿ ವಿದ್ಯಾರ್ಥಿಗಳು ಹಣ್ಣು, ತರಕಾರಿ, ಹೂವು, ತಿಂಡಿ ಪದಾರ್ಥಗಳನ್ನು ಮಾರಾಟ ಮಾಡಿ ತಮ್ಮ ವ್ಯಾಪಾರ ಕೌಶಲ್ಯ ಪ್ರದರ್ಶಿಸಿ ಸಡಗರಪಟ್ಟರು.

ಶುಕ್ರವಾರ ನಡೆದ ಮಕ್ಕಳ ಸಂತೆಯಲ್ಲಿ ಸಿ ಆರ್ ಪಿ ಮಧು ಕೆ ಎಂ ಅವರು ಮಕ್ಕಳಿಂದ ಸ್ವತಃ ತರಕಾರಿ ಖರೀದಿ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ, ಮಕ್ಕಳಲ್ಲಿ ವ್ಯವಹಾರಿಕ ಪ್ರಜ್ಞೆ ಬೆಳೆಸಲು ಹಾಗೂ ಗಣಿತ ಜ್ಞಾನ ಹೆಚ್ಚಿಸಲು ಇಲಾಖೆಯಿಂದ ಪಠ್ಯೇತರ ಚಟುವಟಿಕೆಯಾಗಿ ಶಾಲೆಗಳಲ್ಲಿ ಮಕ್ಕಳ ಸಂತೆ ಏರ್ಪಡಿಸಲಾಗುತ್ತದೆ. ಮಕ್ಕಳು ಇಂತಹ ಚಟುವಟಿಕೆಗಳ ಮೂಲಕ ಪರಸ್ಪರ ಬೆರೆಯುವ, ಸಂಭ್ರಮಿಸುವ ಜೊತೆಗೆ ಕ್ರಿಯಾಶೀಲತೆ ಬೆಳೆಸಿಕೊಳ್ಳಬೇಕು ಎಂದರು.

ಶಾಲಾ ಮುಖ್ಯೋಪಧ್ಯಾಯಿನಿ ಜ್ಯೋತಿ ಬಿ ಎಲ್ ಮಾತನಾಡಿ, ಶೈಕ್ಷಣಿಕ ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನ ಬೆಳೆಸಲು ಮಕ್ಕಳ ಸಂತೆ ಗಣಿತ ಮೇಳಗಳು ಉತ್ತಮ ವೇದಿಕೆಯಾಗಿದೆ ವಿದ್ಯಾರ್ಥಿಗಳಿಗೆ ಓದು ಮುಖ್ಯ, ಗುರಿ ಇಟ್ಟುಕೊಂಡು ಚೆನ್ನಾಗಿ ಓದಿ ತಮ್ಮಗುರಿ ಸಾಧಿಸಲು ಗಮನ ನೀಡಬೇಕು, ಶಿಕ್ಷಕರು, ಪೋಷಕರು ನೀಡುವ ಮಾರ್ಗದರ್ಶನ ಅನುಸರಿಸಿ ಆದರ್ಶ ಗುಣ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಗಣಿತ ಮೇಳ ಹಾಗೂ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಸುಮಾರು 250 ವಿದ್ಯಾರ್ಥಿಗಳು ಭಾಗವಹಿಸಿದ್ದರು 30ಕ್ಕೂ ಹೆಚ್ಚು ಅಂಗಡಿಗಳು. ಶಾಲೆಯ ಆವರಣದಲ್ಲಿ ತಲೆಯೆತ್ತುವ ಮೂಲಕ ಮಕ್ಕಳಲ್ಲೂ ವ್ಯಾಪಾರದ ಅನುಭವ ಮೂಡಿಸಲು ಕಾರಣವಾಯಿತು.

ಶಾಲಾ ಶಿಕ್ಷಕರು, ಎಸ್‌ಡಿಎಂಸಿ ಮತ್ತು ಗ್ರಾಮ ಪಂಚಾಯತಿ ಸದಸ್ಯರು, ಮಕ್ಕಳ ಪೋಷಕರು ಹಾಜರಿದ್ದು ಮಕ್ಕಳ ಸಂತೆಯಲ್ಲಿ ಖರೀದಿ ಮಾಡಿ ಮಕ್ಕಳಲ್ಲಿ ಉತ್ಸಾಹ ಮೂಡಿಸಿದರು.

Leave A Reply

Your email address will not be published.

error: Content is protected !!