Shikaripura | ಕೆರೆ ಹೂಳೆತ್ತಿಸುವ ಕಾರ್ಯ ಮಾಡದ ಬಿಜೆಪಿ ರಾಜ್ಯಾಧ್ಯಕ್ಷರು ರಾಜ್ಯ ‌ಸುತ್ತುವ ಕೆಲಸ ಮಾಡುತ್ತಿದ್ದಾರೆ ; ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವ್ಯಂಗ್ಯ

0 411

ಶಿಕಾರಿಪುರ : ಉತ್ತಮ ಮಳೆಯಾಗದೇ, ಬರಗಾಲದ ಭೀತಿಯನ್ನು ಎದುರಿಸುತ್ತಿದ್ದು ತಾಲ್ಲೂಕಿನ ಜೀವನಾಡಿಯಾಗಿರುವ ಎರಡು ಕೆರೆಗಳಲ್ಲಿ ಅತಿ ಹೆಚ್ಚು ಹೂಳು ತುಂಬಿದ್ದು ಇದರ ಹೂಳೆತ್ತಿಸುವ ಕಾರ್ಯ ಮಾಡದ ಇಲ್ಲಿನ ಶಾಸಕರು ರಾಜ್ಯಾಧ್ಯಕ್ಷರಾಗಿ ರಾಜ್ಯ ‌ಸುತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಪುರಸಭಾ ಸದಸ್ಯ ಹುಲ್ಮಾರ್ ಮಹೇಶ್ ವ್ಯಂಗ್ಯವಾಡಿದ್ದಾರೆ.

ಪಟ್ಟಣದ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ಬಾರಿ ಉತ್ತಮ ಮಳೆಯಾಗದೇ, ತಾಲ್ಲೂಕಿನ ಜನತೆ ಬರಗಾಲದ ಭೀತಿಯನ್ನು ಎದುರಿಸುತ್ತಿದ್ದು,ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಚಿಂತನೆ ನಡೆಸುತ್ತಿದ್ದಾರೆ. ತಾಲ್ಲೂಕಿನ ಜಿವನಾಡಿಯಾಗಿರುವ ಅಂಜನಾಪುರ ಹಾಗೂ ಅಂಬ್ಲಿಗೊಳ್ಳ ಜಲಾಶಯದಲ್ಲಿ ಅತಿಹೆಚ್ಚು ಹೂಳು ತುಂಬಿಕೊಂಡಿದ್ದು, ಇತಿಹಾಸದಲ್ಲಿಯೇ ಇದರ ಹೂಳು ತೆಗೆಸಿಲ್ಲ. ಈ ಕೆರೆಗಳ ಹೂಳು ತೆಗೆಸಿ ನೀರಿನ ಸಂಗ್ರಹ ಮಾಡಿದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇರುವುದಿಲ್ಲ. ತಾಲ್ಲೂಕಿನ ಶಾಸಕರು ಮತ್ತು ಜಿಲ್ಲೆಯ ಸಂಸದರು ಈ ಬಗ್ಗೆ ಚಿಂತನೆ ಮಾಡುವುದು ಬಿಟ್ಟು ರಾಜ್ಯ ಸುತ್ತುತ್ತಿದ್ದಾರೆ ಎಂದರು.

ಯಾವುದೇ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಬುಕ್ ಆಗಿದ್ದಾರೆ ಎಂದು ಹೇಳುವ ಸಂಸದರು, ಧೈರ್ಯವಿದ್ದರೆ, ಇದನ್ನು ಬಹಿರಂಗ ಪಡಿಸಬೇಕು. ಪುರಸಭೆಯಲ್ಲಿ ಅಧಿಕಾರ ನಡೆಸಲು ಪಟ್ಟಣದ ಜನತೆ ನಮಗೆ ಆಶೀರ್ವದಿಸಿದ್ದರು, ಆದರೆ ನೀವು ಅಧಿಕಾರದ ಆಸೆಗೆ ಆಪರೇಷನ್ ಕಮಲ ಮಾಡಿದಿರಿ, ನಾವು ನಿಮ್ಮಂತೆ ಹಿಂಬಾಗಿಲಿನಿಂದ ಅಧಿಕಾರ ಹಿಡಿಯುವವರಲ್ಲ. ತಾಲ್ಲೂಕಿನ ಶಾಸಕರು ನಮ್ಮ ಪಕ್ಷದವರಿಗೆ ಪುಡಾರಿಗಳು ಎಂಬ ಪದಬಳಕೆ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷದ ಮುಖಂಡರ ಬಗ್ಗೆ ಮತ್ತು ಕಾರ್ಯಕರ್ತರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ನಿಮ್ಮ ತಂದೆ ಬಿ ಎಸ್ ಯಡಿಯೂರಪ್ಪರವರು  ಕಾಂಗ್ರೆಸ್ ಪಕ್ಷದ ಹಾಲಪ್ಪರವರನ್ನ ಕತ್ತೆ ಮೇಲೆ ಮೆರವಣಿಗೆ ಮಾಡಿರುವುದು, ಮಾಜಿ ಬಂಧಿಖಾನೆ ಸಚಿವ ವೆಂಕಟಪ್ಪರವರ ಮನೆ ಮೇಲೆ ದಾಳಿ ನಡೆಸಿ ಕಲ್ಲು ತೂರಾಟ ಮಾಡಿರುವುದು ಕಾಂಗ್ರೆಸ್ ಪಕ್ಷದವರು ಮರೆತಿಲ್ಲ. ನಾವು ನಿಮ್ಮಂತೆ ಡಿನೋಟಿಫಿಕೇಷನ್ ಮಾಡುವುದರ ಮೂಲಕ ತಂದೆಯನ್ನೇ ಜೈಲಿಗೆ ಕಳಿಸುವಂತಹಾ ಕೆಲಸ ಮಾಡುವುದಿಲ್ಲ. ಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ನೀಡುವ ಹಗರಣವನ್ನೇ ಸುಧಾರಿಸಿಕೊಳ್ಳದ ನೀವು ಇದನ್ನು ಮುಚ್ಚಿಹಾಕಲು ಕುಮಾರಸ್ವಾಮಿಯವರ ಬಳಿ ಕೈ ಮುಗಿದು ಹೋಗುತ್ತಿದ್ದೀರಿ ಎಂದು ವ್ಯಂಗ್ಯವಾಡಿದರು.

ಪುರಸಭಾ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉಳ್ಳಿ ದರ್ಶನ್ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯರವರು ಮೊನ್ನೆ ಬೆಳಿಗ್ಗೆಯಿಂದ ಸಂಜೆವರೆಗೂ ಜನತಾ ದರ್ಶನದಲ್ಲಿ ಪಾಲ್ಗೊಂಡು ಸುಮಾರು 4000ಕ್ಕೂ ಹೆಚ್ಚಿನ ಅರ್ಜಿಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡುವುದರ ಮೂಲಕ  ಬಗಹರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. 2013 ರಲ್ಲಿ ಸಿದ್ಧರಾಮಯ್ಯರವರು ರಾಜ್ಯದಲ್ಲಿ ಬಡವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇಂದಿರಾ ಕ್ಯಾಂಟೀನ್ ತೆರೆದರು. ನಂತರ ಬಂದಂಥ ಬಿ ಎಸ್ ಯಡಿಯೂರಪ್ಪರವರು ಅದನ್ನು ಸ್ಥಗಿತಗೊಳಿಸಿದರು. ನಾಲ್ಕು ಬಾರಿ ಮುಖ್ಮಮಂತ್ರಿಯಾದ ಬಿ.ಎಸ್.ವೈ ರವರು ರಾಜಕಾರಣ ಮಾಡುವುದಲ್ಲಿ ಮಾಡಬೇಕು ಇಂತಹಾ ಮಹತ್ವ ಯೋಜನೆಗಳಲ್ಲಿ ರಾಜಕಾರಣ ಮಾಡಬಾರದು ಎಂದರು.  

ಹಿಂದೆ ಕಾಗೋಡು ತಿಮ್ಮಪ್ಪರವರು ಕಂದಾಯ ಸಚಿವರಾಗಿದ್ದಾಗ ತಾಲ್ಲೂಕಿನ  ಕಾನೂರು ಗ್ರಾಮದ ಸರ್ವೆ ನಂಬರ್ 96 ರಲ್ಲಿ 400 ಎಕರೆ ಏಕ ಪೋಡಿಗೆ ಆವಕಾಶ ಕಲ್ಪಿಸಿದ್ದರು. ಆದರೆ ಜಿಲ್ಲೆಯ ಸಂಸದ ಬಿ ವೈ ರಾಘವೇಂದ್ರ ಇಲ್ಲಿ ಕಾಂಗ್ರೆಸ್ ಪಕ್ಷದವರ ಜಮೀನು ಹೆಚ್ಚಾಗಿರುವುದರಿಂದ ಅದನ್ನು ತಡೆಹಿಡಿಯುವ ಪ್ರಯತ್ನ ಮಾಡಿದ್ದಾರೆ. ಬೈಪಾಸ್ ರಸ್ತೆ ನಿರ್ಮಾಣ ಮಾಡುತ್ತಿರುವ ಬಿವೈಆರ್ ಇಲ್ಲಿ ರೈತರ ಭೂಮಿ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ರಸ್ತೆಗಾಗಿ ಭೂಮಿ ನೀಡಿದ ರೈತರಿಗೆ ಉಪ ನೋಂದಣಿ ಕಾಯ್ದೆ ಪ್ರಕಾರ ಹಳೇಯ ಎಸ್ಆರ್ ದರವನ್ನು ನಿಗದಿಪಡಿಸಿದ್ದಾರೆ. ಇದು ರೈತರಿಗೆ ಮಾಡುತ್ತಿರುವ ಘೋರ ಅನ್ಯಾಯ ಅದರ ಬದಲು ನೂತನ ಎಸ್ಆರ್ ದರವನ್ನು ನಿಗದಿಪಡಿಸಿ ರೈತರಿಗೆ ಹಣ ನೀಡಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಪುರಸಭಾ ಸದಸ್ಯರಾದ ರೋಷನ್, ಜಯಶ್ರೀ ಹೇಮರಾಜ್, ಕಮಲಮ್ಮ, ಶಕುಂತಲಮ್ಮ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಭಂಡಾರಿ ಮಾಲತೇಶ, ತಾಲ್ಲೂಕು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಡಗಿ ಪಾಲಾಕ್ಷಪ್ಪ, ಮುಖಂಡರಾದ ವೇಣುಗೋಪಾಲ, ನಾಗರಾಜ್ ನಾಯ್ಕ್, ತಿಮ್ಮಪ್ಪ, ಸೇರಿದಂತೆ ಅನೇಕರು ಹಾಜರಿದ್ದರು.

Leave A Reply

Your email address will not be published.

error: Content is protected !!